Advertisement

“ಕೃಷಿಕರಿಗೆ ಪ್ರೋತ್ಸಾಹ ಅಗತ್ಯ’

11:29 PM Jun 24, 2019 | mahesh |

ಸುಳ್ಯ: ಕೃಷಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪೂರಕವಾಗಿ ಸಂಬಂಧಪಟ್ಟ ಇಲಾಖೆಗಳಲ್ಲಿ ಅಗತ್ಯ ಸಿಬಂದಿ ನೇಮಕ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರಕಾರಗಳು ಕೂಡ ಗಂಭೀರ ಚಿಂತನೆ ನಡೆಸುವ ಅಗತ್ಯ ಇದೆ ಎಂದು ಶಾಸಕ ಎಸ್‌. ಅಂಗಾರ ಹೇಳಿದರು. ಸುಳ್ಯ ಹೋಬಳಿ ಮಟ್ಟದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಮಗ್ರ ಕೃಷಿ ಅಭಿಯಾನಕ್ಕೆ ನಗರದ ಎಪಿಎಂಸಿ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೃಷಿ ಬೆಳವಣಿಗೆಗೆ ಪೂರಕವಾಗಿ ಸರಕಾರದ ಮಟ್ಟದಲ್ಲಿ ನೀತಿ ರೂಪಿಸಬೇಕು. ಈಗಿರುವ ವ್ಯವಸ್ಥೆಯಲ್ಲಿನ ಪರಿಸ್ಥಿತಿ ಬದಲಾಗಬೇಕು. ಕೃಷಿಕನ ಸ್ವಾವಲಂಬನೆ ಬದುಕಿಗೆ ಪ್ರೇರಕವಾಗುವ ನಿಟ್ಟಿನಲ್ಲಿ ಯೋಜನೆ ರೂಪುಗೊಳ್ಳಬೇಕು ಎಂದರು.

Advertisement

ಸಹಕಾರ ನೀಡಿ
ಮನುಷ್ಯನ ತಪ್ಪಿನಿಂದ ಕಾಲ ಕಾಲಕ್ಕೆ ಮಳೆ ಬಾರದೆ ಪ್ರಾಕೃತಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಮಳೆ ನೀರು ಇಂಗಿಸುವ ನಿಟ್ಟಿನಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಅನುಷ್ಠಾನಕ್ಕೆ ಬರುವ ಸಂದರ್ಭ ಜನರು ವಿರೋಧ ವ್ಯಕ್ತಪಡಿಸದೆ ಸಹಕಾರ ನೀಡಬೇಕು ಎಂದರು.

ಯೋಜನೆಯ ಲಾಭ ಪಡೆದುಕೊಳ್ಳಿ
ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ ಮಾತನಾಡಿ, ಸರಕಾರದ ಸವಲತ್ತು ಪಡೆದುಕೊಳ್ಳುವ ವಿಚಾರದಲ್ಲಿ ರೈತರು ಉದಾಸೀನ ಮನೋಭಾವ ತಳೆಯದೆ, ತತ್‌ಕ್ಷಣ ಸ್ಪಂದನೆ ನೀಡಬೇಕು. ಆಯಾ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಿ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು. ಕೃಷಿಕ ಸಮಾಜ ಅಧ್ಯಕ್ಷ ದೇರಣ್ಣ ಗೌಡ ಮಾತನಾಡಿ, ಕೃಷಿಕರು ಪರಾವಲಂಬನೆ ಮನೋಭಾವನೆ ಬಿಟ್ಟು ಸ್ವತಃ ತಾವೇ ದುಡಿಯುವ ಮನಸ್ಥಿತಿ ಬೆಳೆಸಿಕೊಂಡರೆ ಕೃಷಿ ಕ್ಷೇತ್ರ ಲಾಭದಾಯಕ ಎಂದರು.

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯರಾದ ಹರೀಶ್‌ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ಎಪಿಎಂಸಿ ಅಧ್ಯಕ್ಷ ದೀಪಕ್‌ ಕುತ್ತಮೊಟ್ಟೆ, ಉಪಾಧ್ಯಕ್ಷ ಸಂತೋಷ್‌ ಜಾಕೆ ಉಪಸ್ಥಿತರಿದ್ದರು. ಆರತಿ ಪ್ರಾರ್ಥಿಸಿದರು. ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಪಾಲಿಚಂದ್ರ ಸ್ವಾಗತಿಸಿ, ರೈತ ಸಂಪರ್ಕ ಕೇಂದ್ರದ ಮೋಹನ ನಂಗಾರು ವಂದಿಸಿದರು. ವೀರಪ್ಪ ಗೌಡ ನಿರೂಪಿಸಿದರು.

ಸಾಧಕರಿಗೆ ಸಮ್ಮಾನ
2018-19ನೇ ಸಾಲಿನ ಆತ್ಮ ಯೋಜನೆಯಡಿ ಶ್ರೇಷ್ಠ ಕೃಷಿಕ ಪುರಸ್ಕೃತರಾದ ಗೋವಿಂದರಾಜ್‌ ಭಾರದ್ವಾಜ್‌ ಆಲೆಟ್ಟಿ (ರಾಜ್ಯಮಟ್ಟ), ಪುರುಷೋತ್ತಮ ಗೌಡ ಕೊಯಿಕುಳಿ (ಜಿಲ್ಲಾಮಟ್ಟ), ಶ್ರೀಧರ ಗೌಡ ಐವರ್ನಾಡು (ತಾಲೂಕು ಮಟ್ಟ), ಬೆಳ್ಯಪ್ಪ ಮುಡೂರು (ತಾಲೂಕು ಮಟ್ಟ), ಈಶ್ವರಪ್ಪ ಗೌಡ ಆಲೆಟ್ಟಿ (ತಾಲೂಕು ಮಟ್ಟ), 2017-18ನೇ ಸಾಲಿನ ಕೃಷಿಕ ಪ್ರಶಸ್ತಿ ಪುರಸ್ಕೃತರಾದ ಬಿ.ಕೆ. ಭಟ್‌ ಅರಂಬೂರು, ರಾಜೇಶ್‌ ಪಡು³, ಹೇಮಾವತಿ ರೈ ಪಟ್ಟೆ ಮರ್ಕಂಜ ಅವರನ್ನು ಸಮ್ಮಾನಿಸಲಾಯಿತು. ಗೀತಾ ಸಮ್ಮಾನಪತ್ರ ವಾಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next