ಹರಿದ್ವಾರ: ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ಕೂಡಲೇ ರೈತರು ತಮ್ಮ ಆಂದೋಲನವನ್ನು ಕೊನೆಗೊಳಿಸಬೇಕು ಎಂದು ಯೋಗ ಗುರು ಬಾಬಾ ರಾಮ್‌ದೇವ್ ಶನಿವಾರ ಹೇಳಿದ್ದಾರೆ.
ಎಂಎಸ್‌ಪಿ ಕಾನೂನು ಗಂಭೀರ ವಿಷಯವಾಗಿದೆ. ಅದಕ್ಕೆ ಎರಡ್ಮೂರು ಪದಗಳಲ್ಲಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.
ಮೋದಿಜಿಯವರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಕಾನೂನುಗಳನ್ನು ರದ್ದುಗೊಳಿಸಿದ ತಕ್ಷಣ, ರೈತರು ಆಂದೋಲನವನ್ನು ಕೊನೆಗೊಳಿಸಬೇಕುಎಂದು ರಾಮ್‌ದೇವ್ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿಯವರ ಉದ್ದೇಶ ಉತ್ತಮವಾಗಿದೆ ಎಂದು ನಾನು ನಂಬುತ್ತೇನೆ. ಅವರು ದೇಶಕ್ಕೆ ಉತ್ತಮ ನಾಯಕತ್ವ ನೀಡುತ್ತಿದ್ದಾರೆ. ಈಗ ರೈತರು ಆಂದೋಲನವನ್ನು ಕೊನೆಗೊಳಿಸಬೇಕು ಮತ್ತು ಮುಂದುವರಿಯಬೇಕು, ”ಎಂದು ಅವರು ಮನವಿ ಮಾಡಿದರು.
ಎಂಎಸ್‌ಪಿಗೆ ಕಾನೂನು ಖಾತರಿ, ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸುವುದು, ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯುವುದು ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟು ಇಂದು ಭಾನುವಾರ ಮುಂಬೈನ ಆಜಾದ್ ಮೈದಾನದಲ್ಲಿ `ಕಿಸಾನ್-ಮಜ್ದೂರ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ನೂರಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.