Advertisement
ಪ್ರಸ್ತುತ ರೈತರಿಂದ ಖರೀದಿಸುವ ಕನಿಷ್ಠ ಜಿಡ್ಡಿನಾಂಶ ಶೇ.3.5ರಷ್ಟು ಹಾಗೂ ಜಿಡ್ಡೇತರ ಘನಾಂಶ ಶೇ.8.50 ಅಂಶವುಳ್ಳ ಪ್ರತಿ ಲೀಟರ್ ಹಾಲಿಗೆ 26.90 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿದ್ದು, 24.90 ರೂ. ಇಳಿಕೆಯಾಗಿದೆ. ಸಂಘದ ಉತ್ಪಾದಕರಿಗೆ ಕನಿಷ್ಠ ಜಿಡ್ಡಿನಾಂಶವಿರುವ ಪ್ರತಿ ಲೀಟರ್‌ಗೆ 26 ರೂ. ನೀಡಲಾಗುತ್ತಿತ್ತು. ಅದರಲ್ಲಿ 2 ರೂ. ಕಡಿತಗೊಳಿಸಿ 24 ರೂ.ಗೆ ಇಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
Related Articles
Advertisement
15 ಮೆಟ್ರಿಕ್ ಟನ್ ತುಪ್ಪ ದಾಸ್ತಾನು: ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚುವರಿ ಹಾಲು ಸಂಗ್ರಹಣೆ ಯಾಗುತ್ತಿರುವುದರಿಂದ ಒಕ್ಕೂಟದಲ್ಲಿ 3,662 ಮೆಟ್ರಿಕ್ ಟನ್ ಕೆನೆರಹಿತ ಹಾಲಿನಪುಡಿ, 1,913 ಮೆಟ್ರಿಕ್ ಟನ್ ಬೆಣ್ಣೆ, 316 ಮೆಟ್ರಿಕ್ ಟನ್ ಕೆನೆಭರಿತ ಹಾಲಿನಪುಡಿ, 15 ಮೆಟ್ರಿಕ್ ಟನ್ ತುಪ್ಪ ದಾಸ್ತಾನಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಸಿರು ಮೇವು ಹೆಚ್ಚಾಗಲಿದೆ. ಇದರಿಂದ ಹಾಲಿನ ಸಂಗ್ರಹಣೆ ಮುಂದಿನ ದಿನಗಳಲ್ಲಿ 10 ಲಕ್ಷ ಲೀ.ಪ್ರತಿದಿನ ಸಂಗ್ರಹವಾಗುವ ನಿರೀಕ್ಷೆ ಇದೆ.
ಕೊರೊನಾ ಸೋಂಕಿನ ಪರಿಣಾಮ ಲಾಕ್‌ಡೌನ್ ಆಗಿದ್ದರಿಂದ ಸಭೆ, ಸಮಾರಂಭಗಳು ನಡೆಯದ ಪರಿಣಾಮ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಬೇಡಿಕೆ ಕುಸಿತವಾಗಿರುವುದರಿಂದ ಸೆಪ್ಟೆಂಬರ್ ತಿಂಗಳಿಗೆ ಸುಮಾರು 33.12 ಕೋಟಿ ರೂ. ಒಕ್ಕೂಟಕ್ಕೆ ನಷ್ಟವಾಗಿದೆ. ಆದ್ದರಿಂದ ಒಕ್ಕೂಟ ಹಾಗೂ ಸಂಘಗಳ ಹಿತದೃಷ್ಟಿಯಿಂದ ಹಾಗೂ ಆರ್ಥಿಕ ಪರಿಸ್ಥಿತಿಯನ್ನು ಸಮತೋಲನದಲ್ಲಿಡಲು ನ.11ರ ಬೆಳಗ್ಗೆಯಿಂದ ಖರೀದಿ ದರ 2 ರೂ. ಕಡಿಮೆ ಮಾಡಿ ದರ ಪರಿಷ್ಕರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
“ಪ್ರತಿದಿನ ಹಾಲಿನ ಸಂಗ್ರಹಣೆ ಹಾಗೂ ಹಾಲಿನ ಉತ್ಪನ್ನಗಳ ಸಂಗ್ರಹ ಹೆಚ್ಚಾಗಿರುವುದರಿಂದ ಖರೀದಿ ದರ 2 ರೂ. ಕಡಿತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಹಾಲು ಉತ್ಪಾದಕರ ಒಕ್ಕೂಟಗಳಲ್ಲೂ ದರ ಕಡಿಮೆ ಮಾಡಲಾಗಿದೆ. ಅದರಂತೆ ನಮ್ಮ ಒಕ್ಕೂಟದಲ್ಲೂ ಕಡಿಮೆ ಮಾಡಲಾಗಿದೆ.” – ಬಿ.ಆರ್.ರಾಮಚಂದ್ರು, ಅಧ್ಯಕ್ಷರು, ಮನ್‌ಮುಲ್.