ಬಂಗಾರಪೇಟೆ: ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಆಲೂಗಡ್ಡೆ ಬಿತ್ತನೆಬೀಜಕ್ಕೆ ಈಗ ಉತ್ತಮ ಬೇಡಿಕೆ ಇದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಆಲೂಗಡ್ಡೆ ಮಂಡಿ ಮಾಲೀಕರು ಜಿಲ್ಲಾಡಳಿತ ನಿಗದಿ ಮಾಡಿರುವ ದರಕ್ಕಿಂತ ಎರಡು ಪಟ್ಟು ಅಧಿಕ ಬೆಲೆಗೆ ಮಾರಾಟ ಮಾಡಿ ರೈತರಿಂದ ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸಭೆ ಸೇರಿಮಾತನಾಡಿದ ಅವರು, ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಡಿ ಮಾಲೀಕರು ಜಿಲ್ಲಾಡಳಿತ ನಿಗದಿಪಡಿಸಿದ ರೂ.3,925 ದರಕ್ಕಿಂತ ಎರಡು ಪಟ್ಟು ಹೆಚ್ಚು ಅಂದ್ರೆ 50 ಕೆ.ಜಿ. ಆಲೂಗಡ್ಡೆ ಬಿತ್ತನೆ ಬೀಜಕ್ಕೆ 6 ಸಾವಿರದಿಂದ 7 ಸಾವಿರ ವರೆಗೂ ಮಾರಾಟ ಮಾಡುತ್ತಿದ್ದಾರೆ.ಕೋವಿಡ್-19 ಸೃಷ್ಟಿಸಿದಬಿಕ್ಕಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವರ್ತಕರು ಹಣ ವಸೂಲಿ ಮಾಡುತ್ತಿದ್ದಾರೆಂದು ದೂರಿದರು.
ವಂಚನೆ ಆರೋಪ: ಇಲ್ಲಿನ ಬಿತ್ತನೆ ಆಲೂಗಡ್ಡೆಯನ್ನು ನೆರೆಯ ಆಂಧ್ರ, ತಮಿಳುನಾಡು ಸೇರಿದಂತೆ ಚಿಕ್ಕಬಳ್ಳಾಪುರ, ತುಮಕೂರು, ಬೆಂ.ಗ್ರಾಮಾಂತರ ಜಿಲ್ಲೆಗಳಿಂದ ರೈತರು ಬಂದು ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಖರೀದಿ ಮಾಡಿದ ರೈತರು ರಶೀದಿ ಕೇಳಿದ್ರೆ ಜಿಎಸ್‌ಟಿ ಬಿಲ್‌ಕೊಡಬೇಕಾದ್ರೆ ಇನ್ನು ಹೆಚ್ಚಿನ ಹಣ ನೀಡಬೇಕೆಂದು ಮಂಡಿ ಮಾಲೀಕರು ಯಾರಿಗೂ ರಶೀದಿ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಅಸಹಾಯಕ: ರೈತ ಸಂಘದ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ, ಎಪಿಎಂಸಿ ಆಲೂಗಡ್ಡೆ ಮಂಡಿ ಮಾಲೀಕರು ಹಗಲು ದರೋಡೆ ಮಾಡುತ್ತಿರುವುದು ಇಲ್ಲಿನ ಎಪಿಎಂಸಿ ಅಧಿಕಾರಿಗಳು ಹಾಗೂ ಆಡಳಿತ ವರ್ಗಕ್ಕೂ ಗೊತ್ತಿದೆ. ಆದರೆ, ಬಹುತೇಕ ಮಂಡಿ ಮಾಲೀಕರು ರಾಜಕೀಯ ಪ್ರಭಾವದಿಂದಾಗಿ ಎಪಿಎಂಸಿಯಲ್ಲಿ ಗಟ್ಟಿಯಾಗಿ ತಳವೂರಿದ್ದಾರೆ. ಜನಪ್ರತಿನಿಧಿಗಳು ಯಾವಾಗಲೂ ಮಂಡಿ ಮಾಲೀಕರಪರ ನಿಲ್ಲುವುದರಿಂದ ರೈತರಿಗೆ ವಂಚನೆ ಆಗುತ್ತಿದ್ದು,
ಮಂಡಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದೇ ಎಪಿಎಂಸಿ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದರು. ರೈತ ಸಂಘದ ಮುಖಂಡರಾದ ಐತಾಂಡಹಳ್ಳಿ ಮುನ್ನಾ, ಚಾಂದ್ ಪಾಷ, ಜಾವೇದ್, ಕಿರಣ್, ಶಶಿ, ನಾರಾಯಣ. ಅಲ್ಲು ಪ್ರಕಾಶ, ಅಮರೀಶ್, ಮಂಜುನಾಥ್, ವೆಂಕಟರಾಮ, ನವಾಜ್, ಗೌಸ್ ಪಾಷ ಮುಂತಾದವರು ಹಾಜರಿದ್ದರು.