ತಿಪಟೂರು: ನಮ್ಮ ತಾಲೂಕಿನಲ್ಲಿಯೇ ಎತ್ತಿನಹೊಳೆ ನಾಲೆ ಹಾಯ್ದುಹೋಗುತ್ತಿದ್ದರೂ ಇಲ್ಲಿನ ಕೆರೆಗಳಿಗೆ ಒಂದು ಹನಿ ನೀರು ಸಹ ದೊರಕುತ್ತಿಲ್ಲ. ಯೋಜನೆಯಿಂದ ತಾಲೂಕಿಗೆ ಒಂದೂವರೆ ಟಿಎಂಸಿ ನೀರು ನಿಗದಿ ಮಾಡುವವರೆಗೂ ಹೋರಾಟ ಮಾಡುವುದಾಗಿ ಎತ್ತಿನಹೊಳೆ ಹೋರಾಟ ಸಮಿತಿಯ ತಾ. ಉಪಾಧ್ಯಕ್ಷ ಬಿ.ಬಿ. ಸಿದ್ದಲಿಂಗಮೂರ್ತಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಹುಚ್ಚನಹಳ್ಳಿಯಲ್ಲಿ ತಾ. ಎತ್ತಿನಹೊಳೆ ಹೋರಾಟ ಸಮಿತಿ ವತಿಯಿಂದ ನಡೆದ ರೈತರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ತಿಪಟೂರು ತಾಲೂಕು ಶ್ರೀಮಂತ ತಾಲೂಕಾಗಿತ್ತು. ಆದರೆ ಸುಮಾರು 25 ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿ ಬಡತನದಿಂದ ಬಳಲುತ್ತಿದೆ ಎಂದರು.
ಹೇಮಾವತಿಯೂ ನಮ್ಮ ತಾಲೂಕಿನಲ್ಲೇ ಹಾಯ್ದು ಹೋಗಿದ್ದರು ಅವಶ್ಯ ನೀರು ಪಡೆಯುವಲ್ಲಿ ಜನಪ್ರತಿನಿಧಿಗಳು ಎಡವಿದ್ದಾರೆ. ಈಗ ನಮ್ಮ ಎತ್ತಿನಹೊಳೆ ಹೋರಾಟ ಸಮಿತಿ ಒಂದೂವರೆ ಟಿಎಂಸಿ ನೀರಿನ ಅವಶ್ಯಕತೆ ಬಗ್ಗೆ ಬೇಡಿಕೆ ಇಟ್ಟರೂ ಸರ್ಕಾರ, ಶಾಸಕರು ಸ್ಪಂದಿಸುತ್ತಿಲ್ಲ ಎಂದು ದೂರಿದರು. ರೈತರು ಸಾವಿರಾರು ಅಡಿ ಬೋರ್‌ವೆಲ್ ಕೊರೆಸಿದರೂ ಒಂದು ಹನಿ ನೀರು ಬರುತ್ತಿಲ್ಲ. ಇದರಿಂದ ಪ್ರಮುಖ ವಾಣಿಜ್ಯ ಹಾಗೂ ರೈತರ ಜೀವನಾಧಾರ ಬೆಳೆಗಳಾದ ಅಡಕೆ, ತೆಂಗು ನೀರಿಲ್ಲದೆ ಒಣಗಿ ಹೋಗುತ್ತಾ ವಿನಾಶದಂಚಿಗೆ ತಲುಪುತ್ತಿವೆ. ಅಲ್ಲದೆ ಎತ್ತಿನಹೊಳೆ ಯೋಜನೆ ಯಿಂದ ರೈತರು ಜಮೀನು ಕಳೆದುಕೊಳ್ಳುತ್ತಿದ್ದು ಸರ್ಕಾರ ಅಥವಾ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನುಗಳಿಗೆ ವೈಜಾnನಿಕ ಬೆಲೆ ನಿಗದಿ ಮಾಡದೆ ಮೋಸ ಮಾಡುತ್ತಿದ್ದಾರೆ ಎಂದರು.
ಎತ್ತಿನಹೊಳೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಸ್ವಾಮಿ, ಸಮಿತಿಯ ಸಹ ಕಾರ್ಯದರ್ಶಿ ಬೈರನಾಯ್ಕನಹಳ್ಳಿ ಲೋಕೇಶ್, ಮುಖಂಡರಾದ ಬೆನ್ನಾಯಕನಹಳ್ಳಿ ಶಿವಣ್ಣ, ಅಯ್ಯಣ್ಣ ಇದ್ದರು.