ಕೋಲಾರ: ಪ್ರತಿ ಲೀಟರ್ ಹಾಲಿಗೆ 50 ರೂ. ಬೆಲೆ ನಿಗದಿ ಮಾಡಿ, ಒಕ್ಕೂಟದ ನಷ್ಟ ಹಾಗೂ ಭ್ರಷ್ಟಾಚಾರವನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡುವಂತೆ ಆಗ್ರಹಿಸಲು ಜೂ.20ರಂದು ಹಸುಗಳ ಸಮೇತ ಕೋಲಾರ ಹಾಲು ಒಕ್ಕೂಟಕ್ಕೆ ಮುತ್ತಿಗೆ ಹಾಕಲು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ಲಕ್ಷಾಂತರ ಕುಟುಂಬಗಳನ್ನು ಹಾಳು ಮಾಡುವ ಮದ್ಯದ ಬೆಲೆ ಏರಿಸುವ ಸರ್ಕಾರ ಅದೇ ಕುಟುಂಬಳಿಗೆ ಆಸರೆಯಾಗಿರುವ ಹಾಲಿನ ಬೆಲೆ ಏರಿಕೆಗೆ ಮುಂದಾಗುತ್ತಿಲ್ಲ ಎಂದು ಟೀಕಿಸಿದರು. ಖಾಸಗಿ ಡೇರಿಗಳಿಂದ ನಷ್ಟ: ಸಾಂಕ್ರಾಮಿಕ ರೋಗಗಳು, ಪ್ರಕೃತಿ ಕೋಪಗಳ ಸಮಯದಲ್ಲಿ ದುಡಿಯುವ ಕೈಗೆ ಕೆಲಸಲ್ಲದ ರೈತ ಬಡ ಕೂಲಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕನ್ನು ಕಲ್ಪಿಸಿಕೊಟ್ಟಂತಹ ಹೈನೋದ್ಯಮ ದಿನೇ ದಿನೆ ಖಾಸಗಿ ಡೇರಿಗಳ ಆರ್ಭಟಕ್ಕೆ ನಶಿಸಿ ಹೋಗುತ್ತಿದೆ ಎಂದು ವಿಷಾದಿಸಿದರು.
ಸರಿಯಾಗಿ ಬಟವಾಡೆ ಮಾಡುತ್ತಿಲ್ಲ: ಹೈನೋದ್ಯಮದಿಂದ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಬಡವರು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ, ಕೃಷಿ ಹಾಗೂ ಖಾಸಗಿ ಕೈ ಸಾಲಗಳಿಗೆ ಹಾಲಿನ ಬಟವಾಡವನ್ನೇ ನಂಬಿದ್ದಾರೆ. ಕೆಲವು ಹಾಲು ಸಹಕಾರ ಸಂಘಗಳು ಸಮಯಕ್ಕೆ ಸರಿಯಾಗಿ ಬಟವಾಡ ನೀಡದೆ ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ಬಡವರ ಸ್ವಾಭಿಮಾನವನ್ನು ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದುಂದು ವೆಚ್ಚಕ್ಕೆ ಕಡಿವಾಣ ಹಾಕಿ: ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಒಕ್ಕೂಟದಲ್ಲಿ ಜನಪ್ರತಿನಿಧಿಗಳು, ಆಡಳಿತ ಮಂಡಳಿಯ ದುಂದು ವೆಚ್ಚಕ್ಕೆ ಕಡಿವಾಣ ಇಲ್ಲದಂತಾಗಿದೆ. ಕೆಲಸಕ್ಕೆ ಬಾರದ ಕಾಮಗಾರಿಗಳಿಗೆ ಲಕ್ಷಾಂತರ ರೂ. ಹಣವನ್ನು ಬಿಡುಗಡೆ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಹೈನುಗಾರಿಕೆ ಕುಟುಂಬಗಳ ಹಣವನ್ನು ದುಂದುವೆಚ್ಚ ಮಾಡುವ ಮುಖಾಂತರ ಒಕ್ಕೂಟದ ನಷ್ಟಕ್ಕೆ ನೇರವಾಗಿ ಜನಪ್ರತಿನಿಧಿಗಳೇ ಕಾರಣ ಎಂದು ಆರೋಪ ಮಾಡಿದರು.
ವಿಶೇಷ ತಂಡ ರಚಿಸಿ: ಪ್ರತಿ ಲೀಟರ್‌ಗೆ 50 ರೂ. ನಿಗದಿ ಮಾಡಿ, ಪಶು ಆಹಾರವನ್ನು ಉಚಿತವಾಗಿ ನೀಡುವ ಜೊತೆಗೆ ಒಕ್ಕೂಟದ ನಷ್ಟ, ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಆಗ್ರಹಿಸಿದರು. ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ವಿಭಾಗೀಯ ಕಾರ್ಯದರ್ಶಿ ಫಾರುಕ್‌ಪಾಷ, ಹಸಿರು ಸೇನೆ ತಾಲೂಕು ಅಧ್ಯಕ್ಷ ವೇಣು, ಯುವ ರೈತ ಮುಖಂಡ ಪೊಂಬರಹಳ್ಳಿ ನವೀನ್, ಕೇಶವ, ನಂಗಲಿ ಕಿಶೋರ್, ಜಯ್ ಪಾಲ್, ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಶ್ರೀಕಾಂತ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ವಕ್ಕಲೇರಿ ಹನುಮಯ್ಯ ಮುಂತಾದವರು ಇದ್ದರು.