Advertisement
ಗ್ರಾಮದ ಜನರು ಹೆಚ್ಚು ಸೇರುವ ಸ್ಥಳವನ್ನು ಆಯ್ಕೆ ಮಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಸಂತೆ ಕಟ್ಟೆಗಳನ್ನು ನಿರ್ಮಿಸುವುದು. ಅದರ ಮೇಲುಸ್ತುವಾರಿಯನ್ನು ಸ್ಥಳೀಯ ಗ್ರಾ.ಪಂ.ಗಳು ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿ ತಾಲೂಕು ವ್ಯಾಪ್ತಿಗಳಲ್ಲಿ 4-5 ಕಡೆಗಳಲ್ಲಿ ಹಳ್ಳಿ ಸಂತೆ ಕಟ್ಟೆಗಳನ್ನು ನಿರ್ಮಿಸಬೇಕು ಎಂದು ಜಿ.ಪಂ.ನಿಂದ ತಾ.ಪಂ. ಹಾಗೂ ಗ್ರಾ.ಪಂ.ಗಳಿಗೆ ಸೂಚನೆ ನೀಡಲಾಗಿದೆ.
ಸ್ವೋದ್ಯೋಗ ಮಾಡುವ ಕೃಷಿಕರು, ಸ್ವಸಹಾಯ ಸಂಘಗಳಿಗೆ ನೆರವಾಗುವ ಉದ್ದೇಶವನ್ನಿಟ್ಟುಕೊಂಡು ಹಳ್ಳಿ ಸಂತೆ ಕಟ್ಟೆ ಯೋಜನೆಯನ್ನು ಜಾರಿಗೊಳಿಸಲು ಜಿ.ಪಂ. ಮುಂದಾಗಿದೆ. ರೈತರು ತಾವು ಬೆಳೆದ ಬೆಳೆಗಳನ್ನು ತಾವೇ ಮಾರಾಟ ಮಾಡುವ ಮೂಲಕ ಉತ್ತಮ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು. ಸ್ವಸಹಾಯ ಸಂಘಗಳ ಮೂಲಕ ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಜತೆಗೆ ಸ್ವೋದ್ಯೋಗಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಸಮಸ್ಯೆಗಳಿಗೆ ಪರಿಹಾರ
ಹಾಲಿ ಹಳ್ಳಿಗಳಲ್ಲಿ ರೈತರು ಬೆಳೆದ ತರಕಾರಿ ಸಹಿತ ಇತರ ಬೆಳೆಗಳನ್ನು ಮಾರಾಟ ಮಾಡಲು ಸರಿಯಾದ ಮಾರುಕಟ್ಟೆ ಇಲ್ಲ. ಈ ಕಾರಣದಿಂದ ಬೆಳೆಗಳಿಗೆ ಸರಿಯಾದ ಬೆಲೆಯೂ ಸಿಗುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಮಧ್ಯವರ್ತಿಗಳನ್ನು ಆಶ್ರಯಿಸಬೇಕಾದ ಮತ್ತು ಅವರೇ ಲಾಭ ಮಾಡಿಕೊಳ್ಳುವ ಸ್ಥಿತಿ ಇದೆ. ಇದೇ ಸಮಸ್ಯೆ ಸ್ವಸಹಾಯ ಗುಂಪುಗಳಿಂದ ಸ್ವೋದ್ಯೋಗ ಪರಿಕಲ್ಪನೆಯಲ್ಲಿ ತಯಾರಿಸುವ ಉತ್ಪನ್ನಗಳಿಗೂ ಇದೆ. ಹಳ್ಳಿಗಳಲ್ಲೇ ಸಂತೆ ಕಟ್ಟೆ ರೂಪದಲ್ಲಿ ಮಾರಾಟದ ವ್ಯವಸ್ಥೆ ಆದರೆ ಇಂತಹ ಸಮಸ್ಯೆಗಳು ಪರಿಹಾರ ಕಾಣಬಹುದು.
Related Articles
ಹಾಲಿ ಸರಕಾರದ ಕಡೆಯಿಂದ ಸಂತೆ ಮಾಡಿಕೊಳ್ಳುವವರಿಗೆ ಅವಕಾಶ ನೀಡಲಾಗುತ್ತಿದೆ. ಈ ಅವಕಾಶವನ್ನು ಬಳಸಿಕೊಂಡು ದ.ಕ. ಜಿ.ಪಂ. ಯೋಜನೆ ರೂಪಿಸಿದ್ದು, ಪ್ರತಿ ತಾಲೂಕುಗಳಿಗೆ ಸೂಚನೆ ನೀಡಲಾಗಿದೆ. ಕಡಬ ಹಾಗೂ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಬೆಳ್ಳಾರೆಗಳಲ್ಲಿ ಹಳ್ಳಿ ಸಂತೆ ಕಟ್ಟೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕಿನಲ್ಲಿ ಹಳ್ಳಿ ಸಂತೆ ಕಟ್ಟೆಗೆ ಸೂಕ್ತ ಜಾಗ ಹುಡುಕಲು ಸೂಚನೆ ನೀಡಲಾಗಿದೆ ಎಂದು ದ.ಕ. ಜಿ.ಪಂ. ಸಿಇಒ ತಿಳಿಸಿದ್ದಾರೆ.
Advertisement
ಜಿಲ್ಲೆಯಲ್ಲಿ 20 ಹಳ್ಳಿ ಸಂತೆ ಗುರಿಸ್ವೋದ್ಯೋಗ ಮಾಡಿಕೊಳ್ಳುವವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ನರೇಗಾ ಯೋಜನೆಯಲ್ಲಿ ಹಳ್ಳಿ ಸಂತೆಕಟ್ಟೆ ನಿರ್ಮಿಸಲು ಅವಕಾಶ ಕಲ್ಪಿಸಲು ಸೂಚನೆ ನೀಡಲಾಗಿದೆ. ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 20 ಹಳ್ಳಿ ಸಂತೆ ಕಟ್ಟೆಗಳನ್ನು ರಚಿಸುವ ಗುರಿ ಇಟ್ಟುಕೊಳ್ಳಲಾಗಿದೆ.
– ಡಾ| ಸೆಲ್ವಮಣಿ ಆರ್. ಸಿಇಒ, ದ.ಕ. ಜಿ.ಪಂ.