Advertisement
22 ಕೆರೆ ಏತ ನೀರಾವರಿ ಹೋರಾಟ ಸಮಿತಿ, ಮಾಯಕೊಂಡ ಶಾಸಕ ಪ್ರೊ| ಎನ್. ಲಿಂಗಣ್ಣ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ನೇತೃತ್ವದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಹೆಬ್ಟಾಳು, ಹಾಲುವರ್ತಿ, ಆನಗೋಡು, ಹೊನ್ನೂರು, ಹುಲಿಕಟ್ಟೆ, ಕಬ್ಬೂರು, ಅಣಜಿ, ಬಿಳಿಚೋಡು ಭಾಗದ ರೈತರು ಪಾಲ್ಗೊಂಡಿದ್ದರು.
ಮೋಟರ್ ಸರಿ ಇಲ್ಲ. ನಮಗೆ ಯಾವುದೇ ಮಾಹಿತಿ ನೀಡದೆ ಕಂಪನಿಯವರು ಎಲ್ಲ ಮೋಟರ್‌ಗಳನ್ನು ದುರಸ್ತಿಗೆ ಕೊಂಡೊಯ್ದಿದ್ದಾರೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನದಿ ನೀರು ಖಾಲಿಯಾದ ಮೇಲೆ ಕೆರೆಗಳಿಗೆ ನೀರು ಹರಿಸಲು ಸಾಧ್ಯವೇ? ಹಾಗಾಗಿ ತಕ್ಷಣಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು ಎಂದು ಬಿಗಿ ಪಟ್ಟು ಹಿಡಿದ ಪ್ರತಿಭಟನಾಕಾರರು, ಕಚೇರಿ ಒಳಗಡೆ ಇದ್ದ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ಬೀಗ ಜಡಿದರು. ಮೋಟರ್ ಅಳವಡಿಸಿ ನೀರು ಹರಿಸುವ ತನಕ ಕಚೇರಿ ತೆರೆಯಲು ಬಿಡಲ್ಲ. ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರು ಇಲ್ಲಿಗೆ ಬರಬೇಕು ಎಂದು ಒತ್ತಾಯಿಸಿದರು.
Related Articles
Advertisement
ನನಗೆ ಮಾತ್ರವಲ್ಲ, ಶಾಸಕರಾದ ರವೀಂದ್ರನಾಥ್ ಮತ್ತು ರಾಮಚಂದ್ರಪ್ಪ ಅವರಿಗೂ ಇದೇ ರೀತಿ ಹೇಳಿದ್ದರು. ಈಗ ನೋಡಿದರೆ ಮೋಟರ್ ರಿಪೇರಿಗೆ ಕೊಲ್ಲಾಪುರಕ್ಕೆ ಕಳಿಸಿದ್ದೇವೆ. ಒಂದು ವಾರ ಆಗುತ್ತೆ ಎಂದು ಹೇಳುತ್ತಿದ್ದಾರೆ. ಜೂನ್‌ನಲ್ಲಿ ನೀರು ಹರಿಸಬೇಕಾದಲ್ಲಿ ಮಾರ್ಚ್, ಏಪ್ರಿಲ್‌ನಲ್ಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿತ್ತು.
ಈಗ ಮೋಟರ್ ರಿಪೇರಿಗೆ ಕಳಿಸಲಾಗಿದೆ. ಅದು ಬರುವ ತನಕ ನದಿಯಲ್ಲಿ ನೀರು ಖಾಲಿ ಆಗಲಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಮುಂದೇನಾದರೂ ಆದಲ್ಲಿ ಅದಕ್ಕೂ ಅಧಿಕಾರಗಳೇ ಹೊಣೆ ಎಂದರು. ಇದಕ್ಕೆ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಧ್ವನಿಗೂಡಿಸಿದರು. 22 ಕೆರೆ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ| ಜಿ. ಮಂಜುನಾಥ್‌ಗೌಡ ಮಾತನಾಡಿ, ಕಳೆದ ಅನೇಕ ದಿನಗಳಿಂದ ಕೆರೆಗಳಿಗೆ ನೀರು ಹರಿಸುವ ವ್ಯವಸ್ಥೆ ಮಾಡಿಕೊಳ್ಳಲು ಒತ್ತಾಯಿಸುತ್ತಲೇ ಇದ್ದೇವೆ.
ಒಂದು ವಾರದಲ್ಲಿ ನೀರು ಹರಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡುತ್ತಲೇ ಇದ್ದರು. ಈಗ ಮೋಟರ್ ರಿಪೇರಿ ಆಗಬೇಕು. ಒಂದು ವಾರ ಆಗುತ್ತದೆ ಎಂಬ ಹಾರಿಕೆ, ಉಡಾಫೆ ಉತ್ತರ ನೀಡುತ್ತಿದ್ದಾರೆ. ತಕ್ಷಣಕ್ಕೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಕಚೇರಿಗೆ ಹಾಕಿರುವ ಬೀಗ ತೆಗೆಯುವುದೇ ಇಲ್ಲ ಎಂದು ಎಚ್ಚರಿಸಿದರು.
ಸಮಿತಿ ಕಾರ್ಯದರ್ಶಿ ಎಲ್. ಕೊಟ್ರೇಶ್ ನಾಯ್ಕ ಮಾತನಾಡಿ, ನದಿಯಿಂದ ಕೆಲವು ಕೆರೆಗಳಿಗೆ ಶೇ.20, ಕೆಲ ಕೆರೆಗಳಿಗೆ ಶೇ.10ಪ್ರಮಾಣದಲ್ಲಿ ಮಾತ್ರ ನೀರು ಹರಿದಿದೆ. ಮಳೆ ಆಗಿದ್ದರಿಂದ ಕೆರೆಗಳು ಶೇ. 75 ತುಂಬಿರುವ ಆಧಾರದ ಮೇಲೆ ಗುತ್ತಿಗೆ ಕಂಪನಿಗೆ ಬಿಲ್ ಮಾಡಿಕೊಡಲಾಗಿದೆ ಎಂದು ದೂರಿದರು. ಮಂಗಳವಾರ ಸಂಜೆ ವೇಳೆಗೆ ಒಂದು ಮೋಟರ್ ಅಳವಡಿಸಿ ನೀರು ಹರಿಸಲಾಗುವುದು. ಶೀಘ್ರದಲ್ಲೇ ಇನ್ನೆರಡು ಮೋಟರ್ ಅಳವಡಿಸಲಾಗುವುದು ಎಂದು ಪ್ರಭಾರ ಕಾರ್ಯ ನಿರ್ವಾಹಕ ಇಂಜಿನಿಯರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಚೇರಿಗೆ ಹಾಕಿದ್ದ ಬೀಗ ತೆಗೆದು, ಕೆಲಸ ಮುಂದುವರಿಸಲು ಅವಕಾಶ ಮಾಡಿಕೊಡಲಾಯಿತು.