ಬ್ಯಾಡಗಿ: ಅಣೂರು ಕೆರೆ ಹಾಗೂ ತಾಲೂಕಿನ 36 ಗ್ರಾಮಗಳ ಕೆರೆ ತುಂಬಿಸುವ ಯೋಜನೆಯ ಪತ್ರ ಚಳವಳಿ ತೀವ್ರ ಕಾವು ಪಡೆದುಕೊಂಡಿದ್ದು ಸೋಮವಾರ ಬಿಜೆಪಿ ಮಾಜಿ ಶಾಸಕ ಸುರೇಶಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ಜನರು ಪತ್ರ ಬರೆಯುವ ಮೂಲಕ ಕೆರೆ ತುಂಬಿಸುವ ಯೋಜನೆ ಅನುಮತಿಗಾಗಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸುರೇಶಗೌಡ ಪಾಟೀಲ ಮಾತನಾಡಿ, ಬ್ಯಾಡಗಿ ತಾಲೂಕು ಭೌಗೋಳಿಕವಾಗಿ ಸಮುದ್ರ ಮಟ್ಟದಿಂದ ಎತ್ತರದ ಪ್ರದೇಶಲ್ಲಿರುವ ಕಾರಣ ಇಲ್ಲಿ ನದಿಗಳು ಹರಿದಿಲ್ಲ ಎಂಬ ಮಾತು ಸತ್ಯ. ಇದಕ್ಕೆ ವೈಜ್ಞಾನಿಕ ಪುರಾವೆಗಳು ಸಹ ಲಭ್ಯವಿದೆ. ಆದರೆ ಪ್ರಾಕೃತಿಕವಾಗಿ ಸಿಗುವ ನೀರನ್ನು ಪಡೆಯಲು ಸಾಧ್ಯವಾಗದೇ ಇರುವುದು ದುರ್ದೈವದ ಸಂಗತಿ, ರೈತ ಸಂಘ ಸೇರಿದಂತೆ ಸಾರ್ವಜನಿಕರು ಹೋರಾಟಗಳನ್ನು ನಡೆಸುತ್ತ ಬಂದಿದ್ದರೂ ಕ್ಯಾರೇ ಎನ್ನದ ರಾಜ್ಯ ಸರ್ಕಾರ ಅಸುಂಡಿ ಜಲಾನಯನದಡಿ ಆಣೂರು ಕೆರೆ ಮೂಲಕ ತಾಲೂಕಿನ 36 ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಮೂಲನಕ್ಷೆಯನ್ನು ಕೈಬಿಟ್ಟಿರುವುದು ಖಂಡನೀಯ. ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳುವ ಮೂಲಕ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡಬೇಕಾಗಿದೆ ಎಂದರು.
ಬ್ಯಾಡಗಿ ಕ್ಷೇತ್ರಕ್ಕೆ ಯಾವುದೇ ನೀರಾವರಿ ಯೋಜನೆಗಳು ಇಲ್ಲದ ಕಾರಣ, ತಾಲೂಕಿನ ಕೆರೆಗಳು ಖಾಲಿಯಾಗಿ ಹತ್ತಾರು ವರ್ಷಗಳೇ ಕಳೆದಿವೆ. ಹೀಗಾಗಿ ಕೊಳವೆ ಬಾವಿಗಳಲ್ಲಿ ಹನಿ ನೀರು ಸಹ ಉಳಿದಿಲ್ಲ. ಸಾವಿರ ಅಡಿಗಳಷ್ಟು ಕೊರೆಸಿದರೂ ನೀರು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ಮನುಷ್ಯರಷ್ಟೇ ಅಲ್ಲದೇ ಲಕ್ಷಾಂತರ ಜಾನುವಾರುಗಳು ಸೇರಿದಂತೆ ತಾಲೂಕಿನಾದ್ಯಂತ ಬಹುತೇಕ ಗ್ರಾಮಗಳು ನೀರಿಗಾಗಿ ಪರದಾಡುತ್ತಿವೆ. ಶೇ. 90ರಷ್ಟು ಕೆರೆಗಳು ಮಳೆಯನ್ನೇ ನಂಬಿಕೊಂಡು ಭರ್ತಿಯಾಗುತ್ತಿವೆ. ಇವುಗಳ ಬಗ್ಗೆ ಅಧ್ಯಯನ ನಡೆಸದಿರುವ ಜಿಲ್ಲಾ ಉಸ್ತುವಾರಿ ಸಚಿವರು ನೀಡುತ್ತಿರುವ ಸುಳ್ಳು ಭರವಸೆಗಳಿಂದ ರೈತ ಸಮೂಹ ಕಂಗಾಲಾಗಿದೆ ಎಂದರು.
ಪುರಸಭೆ ಸದಸ್ಯ ಬಾಲಚಂದ್ರ ಪಾಟೀಲ ಮಾತನಾಡಿ, ಭೌಗೋಳಿಕವಾಗಿ ಆಣೂರ ಗ್ರಾಮ ಎತ್ತರ ಪ್ರದೇಶದಲ್ಲಿದೆ. ಆಣೂರ ಗ್ರಾಮದಲ್ಲಿ ಕೆರೆಯನ್ನು ತುಂಬಿಸಿ ತನ್ಮೂಲಕ ಕೇವಲ ಗ್ರ್ಯಾವಿಟಿ (ಗುರುತ್ವಾಕರ್ಷಣಾ ಶಕ್ತಿ) ಆಧಾರದ ಮೇಲೆ ತಾಲೂಕಿನ ಎಲ್ಲ ಗ್ರಾಮಗಳಿಗೆ ನೀರು ಹರಿಸಬಹುದಾಗಿದೆ. ಇದೇ ಕಾರಣಕ್ಕೆ ಕೆರೆಗಳ ಅಭಿವೃದ್ಧಿಗೆ ಸದರಿ ಗ್ರಾಮ ಹೇಳಿ ಮಾಡಿಸಿದಂಥ ಭೂಪ್ರದೇಶವಾಗಿದ್ದು ಕೂಡಲೇ ಆಣೂರು ಕೆರೆಗೆ ನೀರು ತುಂಬಿಸುವ ಕೆಲಸವಾಗಬೇಕಾಗಿದೆ ಎಂದರು.
ಎ.ಚ್ಕೆ.ಪಿ ಮಾಡಿದ ಯಡವಟ್ಟು: ಎಪಿಎಂಸಿ ಸದಸ್ಯೆ ವನಿತ ಗುತ್ತಲ ಮಾತನಾಡಿ, ಕಳೆದ 1992ರಲ್ಲಿ ಅಂದಿನ ನೀರಾವರಿ ಸಚಿವರಾಗಿದ್ದ ಎಚ್.ಕೆ .ಪಾಟೀಲರು ಆಣೂರು ಗುಡ್ಡಕ್ಕೆ ನೀರು ತರುವ ಯೋಜನೆಯನ್ನು ಕೈಬಿಟ್ಟು ತುಂಗಾ ಮೇಲ್ದಂಡೆ ಯೋಜನೆಯಡಿ ತಮ್ಮ ಸ್ವಕ್ಷೇತ್ರವಾದ ಗದಗ ಜಿಲ್ಲೆಗೆ ತುಂಗಾಭದ್ರಾ ನದಿಯಿಂದ ನೀರು ಹರಿಸಿಕೊಂಡಿದ್ದಾರೆ. ಇದರ ಪರಿಣಾಮ ನೀರಾವರಿ ಯೋಜನೆಗಳಿಂದ ಕಂಗೊಳಿ ಸಬೇಕಿದ್ದ ಸಮಗ್ರ ಬ್ಯಾಡಗಿ ತಾಲೂಕು ಸಂಪೂರ್ಣವಾಗಿ ವಂಚಿತವಾಗಿ ಹನಿ ನೀರಿಗೂ ಪರದಾಡುವಂತಾಯಿತು ಎಂದರು.
ಇದೇ ಸಂದರ್ಭದಲ್ಲಿ ಕೆ.ಸಿ. ಸೊಪ್ಪಿನಮಠ, ಮುರುಳಿ ಜೋಷಿ, ರಾಮಣ್ಣ ಕೋಡಿಹಳ್ಳಿ, ಹೊನ್ನೂರಪ್ಪ ಕಾಡಸಾಲಿ, ಶಿವಯೋಗಿ ಗಡಾದ, ಸಂಜೀವ ಮಡಿವಾಳರ, ದುಗ್ಗಪ್ಪ ಬಂಡ್ರಾಳ, ಪಾಂಡು ಸುತಾರ, ಚಿನ್ನಪ್ಪ ಬಣಕಾರ, ಪುಟ್ಟು ರಾಮಗೊಂಡನಹಳ್ಳಿ ಸೇರಿದಂತೆ ನೂರಾರು ಜನರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವ ಮೂಲಕ ಆಣೂರು ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಿದರು.