Advertisement

ರೈತ ನಾಯಕ ನಂಜುಂಡೇಗೌಡ ಬಿಜೆಪಿ ಪಾಲು

04:57 PM Nov 20, 2017 | Team Udayavani |

ಶ್ರೀರಂಗಪಟ್ಟಣ: ಕೊನೆಗೂ ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ “ಕಮಲ ಪಾಳ’ಕ್ಕೆ ಸೇರುವುದು ಖಚಿತವಾಗಿದೆ. ಈ ತಿಂಗಳಾಂತ್ಯ ಅಥವಾ ಡಿಸೆಂಬರ್‌ ಮೊದಲ ವಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ.

Advertisement

ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ಕೆ.ಎಸ್‌.ನಂಜುಂಡೇಗೌಡರು ಬಿಜೆಪಿ ಸೇರ್ಪಡೆ ಸಂಬಂಧ ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಚನ್ನಪಟ್ಟಣ ಶಾಸಕ ಯೋಗೇಶ್ವರ್‌ ಹಾಗೂ ಮಾಜಿ ಸಂಸದೆ ತೇಜಸ್ವಿನಿ ಸಮ್ಮುಖದಲ್ಲಿ ಮಾತುಕತೆ ನಡೆಸಿ ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ.

ಈ ಮೊದಲು ಜೆಡಿಎಸ್‌ ಸೇರುವುದಕ್ಕೆ ನಂಜುಂಡೇಗೌಡ ಉತ್ಸುಕರಾಗಿದ್ದರು. ಆರಂಭದಲ್ಲಿ ವರಿಷ್ಠರು ಜುಂಡೇಗೌಡರಿಗೆ ಟಿಕೆಟ್‌ ಕೊಡುವ ಭರವಸೆಯನ್ನೂ ನೀಡಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್‌ ಗೆ ಹತ್ತಿರವಾದರು. ಟಿಕೆಟ್‌ ಅವರಿಗೇ ಸಿಗುವುದು ಖಚಿತವಾಯಿತು. ಇದರಿಂದ ಸಹಜವಾಗಿಯೇ ಬೇಸರಗೊಂಡ ನಂಜುಂಡೇಗೌಡರು “ಕೇಸರಿ’ ತಂಡವನ್ನು ಸೇರಿಕೊಳ್ಳಲು ತೀರ್ಮಾನಿಸಿದ್ದಾರೆ.

ಲೋಕಸಭೆ ಟಿಕೆಟ್‌: ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಯವರು ಕೆ.ಎಸ್‌.ನಂಜುಂಡೇಗೌಡ ರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಹಾಗೂ ಅವರಿಗೆ ಲೋಕಸಭೆ ಟಿಕೆಟ್‌ ನೀಡುವ ಪ್ರಸ್ತಾವ ಮುಂದಿಟ್ಟಿದ್ದರು. ಆದರೆ, ಅದನ್ನು ತಿರಸ್ಕರಿಸಿರುವ ನಂಜುಂಡೇಗೌಡರು, ಒಮ್ಮೆ ಟಿಕೆಟ್‌ ನೀಡುವುದಾಗಿ ಭರವಸೆ ಕೊಟ್ಟು ಮಾತಿಗೆ ತಪ್ಪಿದ್ದರಿಂದ ಜೆಡಿಎಸ್‌ ಸೇರುವ ನಿಲುವಿನಿಂದಲೇ ದೂರ ಉಳಿದರು.

6 ಬಾರಿ ಸ್ಪರ್ಧೆ: ರೈತಸಂಘದ ಪ್ರಬಲ ನಾಯಕರೆನಿಸಿಕೊಂಡಿರುವ ಕೆ.ಎಸ್‌.ನಂಜುಂಡೇಗೌಡರು ಇದುವರೆಗೆ ಆರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಕ್ಷೇತ್ರದಲ್ಲಿ 25ರಿಂದ 30 ಸಾವಿರ ಮತಗಳನ್ನು ನಂಜುಂಡೇಗೌಡರು ಹೊಂದಿದ್ದಾರೆ.

Advertisement

ಗ್ರೀನ್‌ ಸಿಗ್ನಲ್‌: ಬಿಜೆಪಿ ಸೇರ್ಪಡೆ ಸಂಬಂಧ ಪಕ್ಷದ ಜಿಲ್ಲಾ ಸಾರಥ್ಯ ವಹಿಸಿಕೊಂಡಿರುವ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ್‌ ರವರು ಯಡಿಯೂರಪ್ಪಸೇರಿದಂತೆ ಪಕ್ಷದ ಹಲವು
ನಾಯಕರ ಸಮ್ಮುಖದಲ್ಲಿ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ
ಟಿಕೆಟ್‌ ಭರವಸೆಯೊಂದಿಗೆ ಪಕ್ಷ ಸೇರ್ಪಡೆಗೆ ಗ್ರೀನ್‌ ಸಿಗ್ನಲ್‌ ಕೊಡಿಸಿದ್ದಾರೆ.

ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ತೇಜಸ್ವಿನಿ ರಮೇಶ್‌, ಮಾಜಿ ಜಿಲ್ಲಾಧ್ಯಕ್ಷ ಹೆಚ್‌.ಹೊನ್ನಪ್ಪ,
ತಾಲೂಕು ಅಧ್ಯಕ್ಷ ಶ್ರೀಧರ್‌, ಉಪಾಧ್ಯಕ್ಷ ಪೀಹಳ್ಳಿ ರಮೇಶ್‌ ಇತರರಿದ್ದರು.

ಮತ್ತೂಮ್ಮೆ ನೋವು ಅನುಭವಿಸಲು ಸಿದ್ಧನಿಲ್ಲ : ನಂಜುಂಡೇಗೌಡ 

ಶ್ರೀರಂಗಪಟ್ಟಣ: ಜೆಡಿಎಸ್‌ನವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ಮುಂದಿನ ಚುನಾವಣೆಯಲ್ಲಿ
ಅವಕಾಶ ಮಾಡಿಕೊಡ್ತೀನಿ ಅಂದ್ರು. ಬಳಿಕ ಟಿಕೆಟ್‌ ಕೊಡುವ ಭರವಸೆ ನೀಡಿ ಮೋಸ ಮಾಡಿದ್ರು.
ಇದರಿಂದ ನನ್ನ ಮನಸ್ಸಿಗೆ ನೋವುಂಟಾಯಿತು. ಮತ್ತೆ ನೋವು ಅನುಭವಿಸಲು ನಾನು ಸಿದ್ಧನಿಲ್ಲ. –
ಹೀಗೆಂದು ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ ಹೇಳಿದರು.

ನಾನು 37 ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಜನರ
ನೋವು-ನಲಿವುಗಳಿಗೆ ಸ್ಪಂದಿಸಿದ್ದೇನೆ. ಸುಮ್ಮನಿದ್ದ ನನ್ನನ್ನು ಜೆಡಿಎಸ್‌ನವರೇ ಕರೆದರು. ಟಿಕೆಟ್‌
ಕೊಡುವ ಭರವಸೆಯನ್ನೂ ಕೊಟ್ಟರು. ಈ ಬೆಳವಣಿಗೆ ನಡೆಯುವ ಹೊತ್ತಲ್ಲೇ ಕ್ಷೇತ್ರದ ಮತ್ತೂಬ್ಬ ಅಭ್ಯರ್ಥಿ ಆಕಾಂಕ್ಷಿ ಕುಮಾರಸ್ವಾಮಿ ಮನೆಗೆ ಹೋದರು ಎಂದು ತಿಳಿಸಿದರು.

ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ, ನನಗೆ ಟಿಕೆಟ್‌ ನೀಡುವ
ಭರವಸೆ ನೀಡಿ ಕೂಡಲೇ ಮಾತು ಬದಲಿಸಿ ಅವರಿಗೆ ನೀಡುವುದಾಗಿ ಘೋಷಿಸಿದ್ದು ನನಗೆ ತೀವ್ರ ನಿರಾಸೆ ನೋವುಂಟು ಮಾಡಿತು. ಮೊದಲೇ ಅವರಿಗೆ ಟಿಕೆಟ್‌ ನೀಡುವುದಾಗಿ ಹೇಳಿದ್ದರೆ ನಾನು ನನ್ನ
ನಿರ್ಧಾರ ತಿಳಿಸುತ್ತಿದ್ದೆ ಎಂದು ಹೇಳಿದರು. ಈಗ ಶಾಸಕ ಯೋಗೇಶ್ವರ್‌ ಮತ್ತು ಮಾಜಿ ಸಂಸದೆ
ತೇಜಸ್ವಿನಿ ನನ್ನ ಜೊತೆ ಮಾತನಾಡಿದ್ದಾರೆ. ಈಗಾಗಲೇ ಒಂದು ಪಕ್ಷದಿಂದ ನೋವಾಗಿದೆ. ಜೆಡಿಎಸ್‌ನವರಿಗೆ ರಾಜಕಾರಣವೇ ಜೀವನವಾಗಿದೆ. ನಾನು ಜನರ ಮಧ್ಯೆ ಬದುಕುತ್ತಿರುವವನು. ಜವಾಬ್ದಾರಿಯುತವಾಗಿ ಹೆಜ್ಜೆ ಇಡುವಲ್ಲಿ ಸ್ವಲ್ಪ ಎಡವಿದೆ. ಈಗ ಜಾಗೃತನಾಗಿದ್ದೇನೆ. ಅದಕ್ಕಾಗಿ ಯೋಚಿಸಿ ನಿರ್ಧಾರ ಕೈಗೊಳ್ಳುತ್ತಿದ್ದೇನೆ ಎಂದರು. 

ಕ್ಷೇತ್ರದ ಜನರು ಎರಡು ಕುಟುಂಬದವರನ್ನು ಬಿಟ್ಟು ರಾಜಕಾರಣ ಮಾಡುವವರನ್ನು ಹುಡುಕುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿ ತೀರ್ಮಾನವಾದ ಮೇಲೆ ಜನರು ನನ್ನನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು

ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ ಬಿಜೆಪಿ ಸೇರ್ಪಡೆಗೆ ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯಾಧ್ಯಕ್ಷರ ನಿರ್ದೇಶನದಂತೆ ಅವರನ್ನು ಪಕ್ಷಕ್ಕೆ ಆಹ್ವಾನಿಸಲು ಇಲ್ಲಿಗೆ ಬಂದಿದ್ದೇವೆ. ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ಚುನಾವಣೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬಿಜೆಪಿ ಗೆಲ್ಲಿಸುವುದು ನಮ್ಮ ಗುರಿಯಾಗಿದೆ. ಹೋರಾಟಗಳಿಂದ ಗುರುತಿಸಿಕೊಂಡಿರುವ ನಂಜುಂಡೇಗೌಡರಿಗೂ ರೈತರ ಸಮಸ್ಯೆಗಳ ಅರಿವಿದೆ. ಎಲ್ಲರೂ ಸೇರಿ ಕೃಷಿ ಸಮಸ್ಯೆಗಳಿಗೆ ಸ್ಪಂದಿಸುವ ಪಣತೊಟ್ಟಿದ್ದೇವೆ. ಒಗ್ಗಟ್ಟಿನಿಂದ ಮುಂದುವರಿಯುತ್ತೇವೆ.
ಯೋಗೇಶ್ವರ್‌, ಚನ್ನಪಟ್ಟಣ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next