ಹುಬ್ಬಳ್ಳಿ: ವಕ್ಫ್ ಆಸ್ತಿ ವಿಚಾರವಾಗಿ ರೈತರಿಗೆ ಯಾವುದೇ ಅನ್ಯಾಯ ಮಾಡುತ್ತಿಲ್ಲ. ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ. ಒಂದು ವೇಳೆ ಅವರಿಗೆ ವಕ್ಫ್‌ನಿಂದ ನೋಟಿಸ್ ಹೋಗಿದ್ದರೆ ಹಿಂಪಡೆಯಲಾಗುವುದು ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಆಸ್ತಿ ತೆರವು ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಹೆದರಲ್ಲ ಎಂದರು.
ವಕ್ಫ್ ಆಸ್ತಿ ತೆರವು ಸಂಬಂಧ ನೋಟಿಸ್ ನೀಡುವ ಪ್ರಕ್ರಿಯೆ ಬಿಜೆಪಿ ಸೇರಿದಂತೆ ಎಲ್ಲ ಸರ್ಕಾರದಲ್ಲೂ ನಡೆದಿದೆ. ಆದರೆ ಈಗ ಚುನಾವಣೆ ಲಾಭಕ್ಕಾಗಿ ಬಿಜೆಪಿ ಈ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದರು.
ವಕ್ಫ್ ಆಗಲಿ ಮುಜರಾಯಿ ಆಸ್ತಿಯಾಗಲಿ ಅದು ದೇವರ ಆಸ್ತಿ. ಅದು ದಾನಿಗಳು ಸಮುದಾಯದ ಹಿತಕ್ಕಾಗಿ ನೀಡಿರುವ ಆಸ್ತಿ. ಅದನ್ನು ಉಳಿಸುವುದು ನಮ್ಮ ಕರ್ತವ್ಯ ಆಗಬೇಕು. ಮುಜರಾಯಿ ಆಸ್ತಿ ತೆರವು ಮಾಡಲು ನಾನೂ ಜತೆಗೂಡುತ್ತೇನೆ. ಆದರೆ ಅಪಪ್ರಚಾರ ನಿಲ್ಲಿಸಿ ಎಂದು ಬಿಜೆಪಿಯವರಿಗೆ ಮನವಿ ಮಾಡಿದರು.
ಶಿಗ್ಗಾವಿ, ಚನ್ನಪಟ್ಟಣ, ಸೊಂಡೂರು ಕ್ಷೇತ್ರಗಳಲ್ಲಿ ಪಕ್ಷವು ನೂರಕ್ಕೆ ನೂರು ಗೆಲ್ಲಲಿದೆ. ಶಿಗ್ಗಾವಿಯ ಬಂಡಾಯ ಅಭ್ಯರ್ಥಿ ಅಜ್ಜಂಪೀರ ಖಾದ್ರಿ ಬುಧವಾರ ತಮ್ಮ ನಾಮಪತ್ರ ವಾಪಸ್ಸು ಪಡೆಯಲಿದ್ದು, ಪಕ್ಷದ ಅಭ್ಯರ್ಥಿ ಯಾಸೀರಖಾನ ಪಠಾಣ ಗೆಲುವಿಗೆ ಶ್ರಮಿಸಲಿದ್ದಾರೆ ಎಂದರು.