ಶ್ರೀರಂಗಪಟ್ಟಣ: ಅರಣ್ಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ಎಗ್ಗಿಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತದೆ ಎಂದು ಆರೋಪಿಸಿ ,ಇದನ್ನು ತಕ್ಷಣದಿಂದಲೇ ನಿಲ್ಲಿಸಿಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ಡಿ.ನಾಗೇಶ್ ಅವರನ್ನು ಮಂಗಳವಾರ ಒತ್ತಾಯಿಸಿದರು.
ಪಟ್ಟಣದ ತಾಲೂಕು ಕಚೇರಿಗೆ ರೈತ ಮುಖಂಡ ಮಂಜೇಶ್‌ಗೌಡ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ಕಾರ್ಯಕರ್ತರು, ಸರ್ಕಾರಿ ಜಾಗದಲ್ಲಿ ಅಧಿಕಾರಿಗಳ ಭಯವಿಲ್ಲದೆ ಅಕ್ರಮ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಬಾರಿ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆಗೂ ಮುನ್ನ ತಾಲೂಕಿನಾದ್ಯಂತ ಸುಮಾರು 43ಕ್ಕೆ ಹೆಚ್ಚು ಜಲ್ಲಿ ಕ್ರಷರ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ ಮತ್ತೆ 70ಕ್ಕೂ ಹೆಚ್ಚು ಕ್ರಷರ್‌ಗಳು ಆರಂಭಗೊಂಡಿವೆ. ಒಬ್ಬ ಗಣಿಗಾರಿಕೆ ಉದ್ಯು 2-3 ಕ್ರಷರ್‌ನ ಯಂತ್ರೋಪ ಕರಣನ್ನು ಬಳಸಿ, ಭೂಮಿಯಲ್ಲಿರುವ ಕಲ್ಲನ್ನು ಬಗೆದು ದಿನಕ್ಕೆ ಲಕ್ಷ ಲಕ್ಷ ಲೂಟಿ ಹೊಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ತೆರಿಗೆ ವಂಚಿಸಿ ಬಾರಿ ನಷ್ಟವಾಗಿದೆ ತಕ್ಷಣದಿಂದಲೇ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಲ ಮನ್ನಾ ಆಗಿಲ್ಲ; ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಶ್‌ಗೌಡ ಮಾತನಾಡಿ, ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ಸಾಲ ಮನ್ನಾ ಆಗಿದೆ ಎಂದು ಕೆಲ ರೈತರಿಗೆ ಅಂಚೆ ಮೂಲಕ ಪತ್ರ ಕಳುಸುತ್ತಿದ್ದಾರೆ. ಸರ್ಕಾರದಿಂದ ಬಂದಿರುವ ಸಾಲ ಪತ್ರವನ್ನು ಬ್ಯಾಂಕ್‌ನ ವ್ಯವಸ್ಥಾಪಕರಿಗೆ ತೋರಿಸಿದರೆ ನಿಮ್ಮ ಖಾತೆಯಲ್ಲಿ ಯಾವುದೇ ಸಾಲ ಮನ್ನಾ ಆಗಿಲ್ಲ ಎಂದು ಕಳುಹಿಸುತ್ತಿದ್ದಾರೆ. ಸರ್ಕಾರ ರೈತರಿಗೆ ನಕಲಿ ಸಾಲಮನ್ನಾ ಯೋಜನೆಯ ಪತ್ರ ಕಳುಹಿಸಿ ದಾರಿ ತಪ್ಪಿಸುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ಆರೋಪ ಮಾಡಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ, ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಮುಖಂಡರಾದ ನಟರಾಜು ,ಚಂದ್ರು, ಚಂದ್ರಶೇಖರ್ ಇತರರಿದ್ದರು.