Advertisement

ಹತ್ತಿ ಬಿಡಿಸಲು ರೈತರು ಹೈರಾಣ

03:22 PM Nov 12, 2019 | Suhan S |

ಸೈದಾಪುರ: ಯಾದಗಿರಿ ತಾಲೂಕಿನ ಬಹುತೇಕ ಒಣ ಭೂಮಿ ಬೇಸಾಯದ ಜತೆ ನೀರಾವರಿ ಭೂಮಿಯಲ್ಲಿ ಹತ್ತಿ ಬೆಳೆದಿದ್ದು, ಉತ್ತಮ ಇಳುವರಿ ಬಂದಿರುವ ಕಾರಣ ಹತ್ತಿ ಬಿಡಿಸಲು ಕೃಷಿ ಕೂಲಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.

Advertisement

ಕೃಷಿ ಇಲಾಖೆ ಮಾಹಿತಿಯಂತೆ ತಾಲೂಕಿನ ಸುಮಾರು 32,990 ಹೆಕ್ಟೇರ್‌ ಭೂಮಿಯಲ್ಲಿ ರೈತರು ಹತ್ತಿ ಬಿತ್ತನೆ ಮಾಡಿದ್ದಾರೆ. ಈ ಬಾರಿ ಉತ್ತಮ ಇಳುವರಿ ಬಂದಿದೆ. ಒಂದು ಕ್ವಿಂಟಲ್‌ಗೆ 4,800ರಿಂದ 5,500 ರೂ. ಗೆ ಮಾರಾಟವಾಗುತ್ತಿದ್ದು, ರೈತರು ಅಷ್ಟೋ ಇಷ್ಟೋ ಸಂತೋಷಪಡುವಂತಾಗಿದೆ. ಆದರೆ ಹತ್ತಿ ಬಿಡಿಸಲು ಕೃಷಿ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಸುತ್ತಾಡಿ ಕೇಳಿ, ಬೇಡಿ ಮತ್ತು ಬರುವ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಮಾಡಿ ಕರೆತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೇ ಪ್ರತಿ ಕಾರ್ಮಿಕರಿಗೆ ಒಂದು ದಿನಕ್ಕೆ 180ರಿಂದ 200 ರೂ. ವರೆಗೆ ಕೂಲಿ ಹಣ ನೀಡಲಾಗುತ್ತಿದೆ. ತಮ್ಮ ಗ್ರಾಮಗಳಿಂದ ಬಂದು ಹೋಗುವುದಕ್ಕೆ ಆಟೋ ವ್ಯವಸ್ಥೆ ಮಾಡಿದರೂ ಸಕಾಲದಲ್ಲಿ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ ಹತ್ತಿ ಬೆಳೆ ಬೆಳೆದ ರೈತರು ಕೂಲಿ ಕಾರ್ಮಿಕರು ಬರುವ ಸಮಯ ಕಾಯ್ದು ಕುಳಿತುಕೊಳ್ಳುವುದು ಅನಿವಾರ್ಯವಾಗಿದೆ.

ಶಾಲೆ ಮಕ್ಕಳ ದುಡಿಮೆ: ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬಹುತೇಕ ಗ್ರಾಮೀಣ ಭಾಗದ ಪಾಲಕರು ತಮ್ಮ ಮಕ್ಕಳನ್ನು ಹತ್ತಿ ಬಿಡಿಸಲು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳನ್ನು ತಮ್ಮ ಹೊಲಕ್ಕೆ ಕರೆದುಕೊಂಡು ಹೋದರೆ, ಇನ್ನೂ ಕೆಲ ಬಡ ಕೃಷಿ ಕಾರ್ಮಿಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಕೂಲಿಗಾಗಿ ತಮ್ಮ ಜತೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಅರ್ಧ ವಾರ್ಷಿಕ ರಜೆ ಬಳಿಕ ಅ. 21ರಿಂದಶಾಲೆಗಳು ಪ್ರಾರಂಭವಾಗಿವೆ. ಆದರೆ ಇಂದಿನವರೆಗೂ ಬಹುತೇಕ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಶೇ. 30ರಷ್ಟು ಮಕ್ಕಳು ಗೈರು ಹಾಜರಾಗುತ್ತಿದ್ದಾರೆ. ಗೈರಾದ ಮಕ್ಕಳಿಗೆ ಪಾಠ ಹೇಗೆ ಹೇಳಿಕೊಡಬೇಕು ಎಂಬ ಚಿಂತೆ ಶಿಕ್ಷಕರನ್ನು ಕಾಡುತ್ತಿದ್ದರೆ, ಆನೆಕಾಲು ರೋಗ ನಿರೋಧಕ ಮಾತ್ರೆ ನುಂಗಿಸಲು ಆರೋಗ್ಯ ಇಲಾಖೆ ಸಿಬ್ದಂದಿಗು ಕೂಡ ತೆಲೆ ನೋವಾಗಿ ಪರಿಣಮಿಸಿದೆ.

ವಲಸೆ ಹೋದವರಿಗೆ ಬುಲಾವ್‌: ತಮ್ಮ ಕೃಷಿ ಭೂಮಿ ಬೇರೊಬ್ಬರಿಗೆ ಬಿಟ್ಟು ಉದ್ಯೋಗ ಅರಸಿ ಬೆಂಗಳೂರು ಮತ್ತು  ಮುಂಬೈಯತಂಹ ಮಹಾನಗರಗಳಿಗೆ ವಲಸೆ ಹೋಗಿದ್ದ ಜನರನ್ನು ಮರಳಿ ಕರೆಸಿಕೊಳ್ಳಲಾಗುತ್ತಿದೆ. ಹತ್ತಿ ಬಿಡಿಸಲು ಕೂಲಿ ಕಾರ್ಮಿಕರು ಸಕಾಲಕ್ಕೆ ಸಿಗದೇ ಇರುವ ಕಾರಣಕ್ಕೆ ವಲಸೆ ಹೋದವರಿಗೂ ಈಗ ಬುಲಾವ್‌ ನೀಡಲಾಗುತ್ತಿದೆ.

Advertisement

ವಾಹನ ಮೇಲೆ ಸಂಚಾರ: ಸೈದಾಪುರ ಸುತ್ತಮುತ್ತಲಿನ ಸುಮಾರು 25 ಗ್ರಾಮಗಳಿಗೆ ಗುರುಮಠಕಲ್‌ ಭಾಗದ ನಂದೇಪಲ್ಲಿ, ಮಾಧ್ವಾರ, ವಂಕಸಂಬ್ರ, ಕೊಂಕಲ್‌, ಜೇಗ್ರಾಂ, ಅನಪುರ ಸೇರಿದಂತೆ ತೆಲಂಗಾಣದ ಕೆಲ ಗ್ರಾಮಗಳ ಕೃಷಿ ಕಾರ್ಮಿಕರನ್ನು ಆಟೋ ಮತ್ತು ಜೀಪ್‌ನಲ್ಲಿ ಕರೆದುಕೊಂಡು ಬರಲಾಗುತ್ತಿದೆ. ಒಂದು ವೇಳೆ ಕಾರ್ಮಿಕರು ಹೆಚ್ಚಾದರೆ ವಾಹನದ ಮೇಲೆ ಕುಳಿತುಕೊಂಡು ಅಸುರಕ್ಷಿತವಾಗಿ ಪ್ರಯಾಣಿಸುತ್ತಿದ್ದಾರೆ.ಇದು ರೈತರು ಮತ್ತು ವಾಹನ ಚಾಲಕರಿಗೆ ಅನಿವಾರ್ಯವಾಗಿದೆ. ಕೆಲವೊಮ್ಮೆ ಪೊಲೀಸರ ಕಣ್ಣಿಗೆ ಬಿದ್ದು ದಂಡ ಹಾಕಿದ ಉದಾಹರಣೆ ಸಹ ಇದೆ.

 

-ಭೀಮಣ್ಣ ಬಿ. ವಡವಟ್‌

 

Advertisement

Udayavani is now on Telegram. Click here to join our channel and stay updated with the latest news.

Next