Advertisement

ರೈತರಿಗೆ ಕಣ್ಣೀರು ತರಿಸಿದ ಮಳೆ

04:57 PM Oct 09, 2020 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದೊಂದು ವಾರ ಸುರಿದ ನಿರಂತರ ಮಳೆಗೆ ಈರುಳ್ಳಿ ಬೆಳೆಗಾರರು ಕಣ್ಣೀರಾಗಿದ್ದಾರೆ. ಪ್ರತಿ ವರ್ಷ ಈರುಳ್ಳಿ ಬೆಳೆದು ಕೈತುಂಬ ಹಣದೊಂದಿಗೆ ಸಂಭ್ರಮಿಸುತ್ತಿದ್ದ ರೈತ ಈ ಬಾರಿ ದಿಕ್ಕು ತೋಚದಂತೆ ಕುಳಿತಿದ್ದಾರೆ. ಕೊಳೆತ ಈರುಳ್ಳಿ ಒಂದೆಡೆ ಗುಡ್ಡೆ ಹಾಕಿ ನೋಡ್ರಿ ನಮ್ಮ ಪರಿಸ್ಥಿತಿ.. ಎಂದು ಗೋಗರೆಯುವ ಪರಿಸ್ಥಿತಿಯಲ್ಲಿದ್ದಾನೆ.

Advertisement

ಎರಡನೇ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಗ್ರಾಮ ಯಂಕಂಚಿ. ಈ ಊರಿನ ಈರುಳ್ಳಿಗೆ ಹುಬ್ಬಳ್ಳಿಯಲ್ಲೂ ಬೇಡಿಕೆ. ಪ್ರತಿ ವರ್ಷ ಹುಬ್ಬಳ್ಳಿ ವ್ಯಾಪಾರಸ್ಥರು ರೈತರ ಹೊಲಕ್ಕೆ ಬಂದು ಮುಂಗಡ ಹಣ ಕೊಟ್ಟು ಹೋಗುತ್ತಿದ್ದರು. ಆದರೆ ಈ ಬಾರಿ ಈರುಳ್ಳಿ ಕೊಳೆತು ಹೋಗಿವೆ. ಹೀಗಾಗಿ ಈ ಊರಿನ ರೈತರು, ಕಣ್ಣೀರು ಹಾಕುತ್ತಿದ್ದಾರೆ.ಯಂಕಂಚಿಯಲ್ಲಿ 4 ಕೋಟಿ ನಷ್ಟ: ಬಾಗಲಕೋಟೆ ತಾಲೂಕಿನ ಯಂಕಂಚಿ ಗ್ರಾಮ ಈರುಳ್ಳಿ ಬೆಳೆಗೆ ಹೆಸರುವಾಸಿ. ಇಲ್ಲಿನ ಈರುಳ್ಳಿ ಖರೀದಿಗೆ ಹುಬ್ಬಳ್ಳಿ ವ್ಯಾಪಾರಸ್ಥರು ಬಂದು ರೈತರಿಗೆ ಮುಂಗಡ ಹಣಕೊಟ್ಟು ಹೋಗುತ್ತಿದ್ದರು. ಆದರೆ ಈ ಬಾರಿ ಅತಿಯಾದ ಮಳೆಯಿಂದ ಈರುಳ್ಳಿ ಗಡ್ಡೆಗಳು ಹೊಲದಲ್ಲೇ ಕೊಳೆತಿವೆ. ನೂರು ಕೆ.ಜಿ ಈರುಳ್ಳಿ ಸೋಸಿ ತೆಗೆದಾಗ, ಕನಿಷ್ಠ ಐದು ಕೆ.ಜಿಯೂ ಬರುತ್ತಿಲ್ಲ. ಹೀಗಾಗಿ ಕೈಯ್ನಾರೆ ಬಿತ್ತಿ, ಆರೈಕೆ ಮಾಡಿ ಬೆಳೆದ ಈರುಳ್ಳಿ ಗಡ್ಡೆಯನ್ನು ಭೂಮಿಯ ಬದುವಿಗೆ ಹಾಕಿ ಮರಗುವ ಪರಿಸ್ಥಿತಿ ರೈತರಿಗೆ ಬಂದಿದೆ.

22 ಸಾವಿರ ಹೆಕ್ಟೇರ್‌ ಹಾನಿ: ಜಿಲ್ಲೆಯಲ್ಲಿ ಹಾನಿಯಾದ ಈರುಳ್ಳಿ ಬೆಳೆ ಸರ್ವೇ ನಡೆಸಲಾಗುತ್ತಿದೆ. ಇಲಾಖೆಯಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 22 ಸಾವಿರ  ಹೆಕ್ಟೇರ್‌ ಈರುಳ್ಳಿ ಬೆಳೆ ಹಾನಿಯಾಗಿದೆ. ಪ್ರತಿ ವರ್ಷಅಲ್ಪಸ್ವಲ್ಪ ಬೆಳೆಯಾದರೂ ಕೈಗೆ ಬರುತ್ತಿತ್ತು. ಈ ಬಾರಿ ಭೂಮಿಯಿಂದ ಈರುಳ್ಳಿ ಗಡ್ಡೆ ಹೊರ ತೆಗೆಯಲೂ ಮಳೆ ಬಿಟ್ಟಿಲ್ಲ. ಹೀಗಾಗಿ ನೂರಾರು ಎಕರೆ ಭೂಮಿಯಲ್ಲಿ ಈರುಳ್ಳಿ ಗಡ್ಡೆ ಕೊಳೆತು ಬಿದ್ದಿವೆ.

ಬಾಗಲಕೋಟೆ, ಬಾದಾಮಿ, ಹುನಗುಂದ,ಮುಧೋಳ, ಬೀಳಗಿ ತಾಲೂಕಿನಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುತ್ತಿದ್ದು, ಇಲ್ಲಿನ ಈರುಳ್ಳಿ, ಹುಬ್ಬಳ್ಳಿ, ಸೊಲ್ಲಾಪುರ,ಬೆಂಗಳೂರು, ದಾವಣಗೆರೆ ಸಹಿತ ರಾಜ್ಯದ ಪಕ್ಕದ ಹೈದ್ರಾಬಾದ್‌ಗೂ ಪೂರೈಕೆಯಾಗುತ್ತಿತ್ತು. ಅದರಲ್ಲೂ ಬಲಿತ ಹಾಗೂ ಒಣಗಿದ ಈರುಳ್ಳಿ ಬೆಳೆಯುವಲ್ಲಿ ಜಿಲ್ಲೆಯ ಕೆಲ ಪ್ರದೇಶ ಹೆಸರುವಾಸಿಯಾಗಿವೆ. ಆದರೆ ಈ ವರ್ಷ ಯಾವ ಪ್ರದೇಶದಲ್ಲೂ ಈರುಳ್ಳಿ ಕೈಗೆ ಬಂದಿಲ್ಲ.

ಅಂದು ಪ್ರವಾಹ; ಇಂದು ಮಳೆ: ಕಳೆದ ವರ್ಷ ಪ್ರವಾಹದಿಂದ ಜಿಲ್ಲೆಯ ಕೃಷಿ ಬೆಳೆಗಳ ಜತೆಗೆ ಈರುಳ್ಳಿ ಬೆಳೆಯೂ ಹಾನಿಯಾಗಿತ್ತು. ಪ್ರವಾಹ ಬಾರದ ಪ್ರದೇಶದಲ್ಲಿ ಉತ್ತಮ ಬೆಳೆ ಬಂದಿತ್ತು. ಹೀಗಾಗಿ ಜಿಲ್ಲೆಯ ಬೆನಕಟ್ಟಿ, ರಾಂಪುರ, ಬಂಟನೂರ ಮುಂತಾದ ಗ್ರಾಮಗಳ ಕೆಲ ರೈತರು 50 ಲಕ್ಷದಿಂದ 1 ಕೋಟಿವರೆಗೂ ಈರುಳ್ಳಿ ಬೆಳೆ ಹಣ ಪಡೆದಿದ್ದರು. ನದಿ ಪಾತ್ರದ ಸುಮಾರು 117 ಗ್ರಾಮಗಳಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ಹಾನಿಯಾಗಿತ್ತು.

Advertisement

ಆದರೆ ಈ ಬಾರಿ ಜಿಲ್ಲೆಯ ಎಲ್ಲ ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆ ಸುರಿದ್ದು, ಯಾವ ಬೆಳೆಯನ್ನೂ ಕಟಾವು ಮಾಡಲು ಬಿಟ್ಟಿಲ್ಲ. ಅದರಲ್ಲೂಸಜ್ಜೆಯಂತಹ ಬೆಳೆ, ಒಂದೆರಡು ವಾರ ಬಿಟ್ಟು ಕಟಾವು ಮಾಡಲು ಸಾಧ್ಯವಾಗಿದೆ. ಆದರೆ, ಈರುಳ್ಳಿಯನ್ನು ಕಿತ್ತು, ಸೋಸಿ, ಬಿಸಿಲಿಗೆ ಒಣ ಹಾಕಬೇಕು. ಒಣಗಿದ ಈರುಳ್ಳಿ ಮಾತ್ರ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ. ಹಸಿ ಗಡ್ಡೆ ಇದ್ದರೆ ಅವುಗಳನ್ನು ವ್ಯಾಪಾರಸ್ಥರಾಗಲಿ, ಗ್ರಾಹಕರಾಗಲಿ ಖರೀದಿಸುವುದಿಲ್ಲ. ಹೀಗಾಗಿ ಈ ವರ್ಷವೂ ಜಿಲ್ಲೆಯ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಮ್ಮೂರಲ್ಲಿ ಪ್ರತಿಯೊಬ್ಬ ರೈತರು ಈರುಳ್ಳಿ ಬೆಳೆಯುತ್ತಾರೆ. ನಾನು ಆರು ಎಕರೆ ಈರುಳ್ಳಿ ಬೆಳೆದಿದ್ದೆ. ಮಳೆ ಬಾರದಿದ್ದರೆ ಲಕ್ಷಾಂತರ ರೂ. ಕೈಗೆ ಬರುತ್ತಿತ್ತು. ನಮ್ಮ ಗ್ರಾಮದ ಬಹುತೇಕ ರೈತರು ಹುಬ್ಬಳ್ಳಿಗೆ ಈರುಳ್ಳಿ ಕಳುಹಿಸುತ್ತಿದ್ದೆವು. ಅಲ್ಲಿನ ವ್ಯಾಪಾರಸ್ಥರೇ ನಮ್ಮೂರಿಗೆ ಬಂದು ಹಣ ಕೊಟ್ಟು, ಲಾರಿ ತುಂಬಿಕೊಂಡು ಹೋಗು ತ್ತಾರೆ. ಈ ಬಾರಿ ಈರುಳ್ಳಿ ಕೊಳೆತಿದ್ದು, ಹಾಕಿದ ಹಣವೂ ಬರುತ್ತಿಲ್ಲ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಪರಸಪ್ಪ ತೆಪಗಿ, ಈರುಳ್ಳಿ ಬೆಳೆಗಾರ, ಯಂಕಂಚಿ

 

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next