ಶಿರಸಿ: ಕೋವಿಡ್-19ರ ಕಷ್ಟದಲ್ಲಿದ್ದ ರಾಜ್ಯದ ಅನ್ನದಾತರಿಗೆ ಕಳೆದ ವರ್ಷ ಪಡೆದ ಬೆಳೆ ಸಾಲದ ಮರುಪಾವತಿ ಅವಧಿಯನ್ನು ರಾಜ್ಯ ಸರಕಾರ ಜೂ. 30 ಎಂದು ಆದೇಶ ಮಾಡಿದ್ದರೆ, ಬಡ್ಡಿ ಮನ್ನಾಕ್ಕೆ ಸರಕಾರದ ಜೊತೆ ಅರ್ಧ ಬಡ್ಡಿ ಹಣ ಪಾವತಿಸುವ ನಬಾರ್ಡ್ ಪಾವತಿಯ ಅವಧಿಯನ್ನು ಮೇ 30ಕ್ಕೇ ಅಖೈರುಗೊಳಿಸಿ ಆದೇಶಿಸಿದೆ. ಇಬ್ಬರ ನಡುವಿನ ಗೊಂದಲ ಈಗ ಕಷ್ಟದಲ್ಲಿದ್ದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ರಾಜ್ಯದಲ್ಲಿನ ಬಹುತೇಕ ಭತ್ತ, ಅಡಿಕೆ, ತೆಂಗು, ಅನಾನಸ್, ಕೊಕ್ಕೋ, ಕಾಳು ಮೆಣಸು, ರಾಗಿ, ಜೋಳ, ಮೆಣಸು ಸೇರಿದಂತೆ ಅನೇಕ ಬೆಳೆಗಾರರು ಬೆಳೆ ಸಾಲ ಪಡೆಯುತ್ತಾರೆ. ರಾಜ್ಯ ಸರಕಾರ 3 ಲಕ್ಷ ರೂ. ತನಕ ಶೂನ್ಯ ಬಡ್ಡಿಯಲ್ಲಿ ಕೊಡಿಸಿ ಬೆಳೆಗಾರರ ಕಷ್ಟಕ್ಕೆ ನೆರವಾಗುತ್ತಿತ್ತು. ರಾಜ್ಯ ಸರಕಾರ ಶೇ. 6.4 ಹಾಗೂ ಕೇಂದ್ರ ಸರಕಾರ ನಬಾರ್ಡ್ ಮೂಲಕ ಶೇ. 5 ಬಡ್ಡಿಯನ್ನು ನೀಡುತ್ತಿತ್ತು. ಇದರಿಂದ ರೈತರಿಗೆ ಮೂರು ಲಕ್ಷ ರೂ. ತನಕ ಶೂನ್ಯ ಬಡ್ಡಿ ಲಭಿಸುತ್ತಿತ್ತು. ಆದರೆ, ಈ ಬಾರಿಯ ಕೋವಿಡ್ ಸಮಸ್ಯೆಯಿಂದ ಈ ಬೆಳೆಸಾಲ ಮರುಪಾವತಿ ಅವಧಿ ವಿಸ್ತರಿಸಲಾಗಿತ್ತು. ರಾಜ್ಯ ಸರಕಾರ ಜೂ. 30ಕ್ಕೆ ಮುಂದೂಡಿತ್ತು. ಇದರಿಂದ ಕೊಂಚ ನಿರಾಳತೆ ಅನುಭವಿಸುವ ಮಧ್ಯೆ ನಬಾರ್ಡ್ ನ ಹೊಸ ಆದೇಶ ಸಂಕಷ್ಟಕ್ಕೆ ದೂಡಿದೆ.
ಅವಧಿ ಮೀರಿ ಬೆಳೆಸಾಲ ಪಾವತಿಸಿದ ರೈತ ಸಾಲ ಪಡೆದ ದಿನಾಂಕದಿಂದಲೂ ಪೂರ್ಣ ಪ್ರಮಾಣದ ಬಡ್ಡಿ ಕಟ್ಟಬೇಕಾಗುತ್ತದೆ. ಬಡ್ಡಿ ರಹಿತ ಅಸಲು ಪಾವತಿಗೆ ಕೇವಲ 25 ದಿನಗಳಿದ್ದಾಗ ನಬಾರ್ಡ್ ಈ ಆದೇಶ ಹೊರಡಿಸಿದ್ದು, ರೈತರನ್ನು ಬಾಣಲೆಯಿಂದ ಬೆಂಕಿಗೆ ದೂಡಿದೆ.
ಈಗಾಗಲೇ ಈ ಗೊಂದಲಗಳನ್ನು ಬಗೆಹರಿಸುವಂತೆ ನಬಾರ್ಡ್ ಹಾಗೂ ಅಫೆಕ್ಸ್ ಬ್ಯಾಂಕ್‌ಗೂ ಮನವಿ ಮಾಡಿದ್ದೇವೆ. ಆದಷ್ಟು ಶೀಘ್ರ ಇತ್ಯರ್ಥವಾದರೆ ರೈತರಿಗೂ, ಸಹಕಾರಿ ಸಂಘಗಳಿಗೂ ಅನುಕೂಲ. –
ಎಸ್.ಪಿ. ಚೌಹಾಣ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ, ಶಿರಸಿ
ರಾಜ್ಯ ಸರಕಾರ ಹಾಗೂ ನಬಾರ್ಡ್ ನಡುವೆ ಸಮನ್ವಯ ಸಾಧಿಸಿ ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸುತ್ತೇನೆ. –
ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್
-ರಾಘವೇಂದ್ರ ಬೆಟ್ಟಕೊಪ್ಪ