Advertisement
ಈ ಯೋಜನೆಯಿಂದ ಇನ್ಮುಂದೆ ಬ್ಯಾಂಕ್ ಅಧಿಕಾರಿಗಳು ರೈತರ ಮನೆ ಬಾಗಿಲಿಗೆ ಸಾಲ ವಸೂಲಾತಿಗಾಗಿ ಬರುವುದಿಲ್ಲ. ಬದಲಿಗೆ ಸಾಲದಿಂದ ವಿಮೋಚನೆ ಮಾಡಿರುವುದನ್ನು ಖಾತ್ರಿಪಡಿಸುವ “ಋಣಮುಕ್ತ ಪತ್ರ’ ನೀಡಲು ಆಗಮಿಸಲಿದ್ದಾರೆ. ಈ ಪತ್ರದಲ್ಲಿ ಆಯಾ ರೈತರ ಹೆಸರು, ಬ್ಯಾಂಕ್ ಖಾತೆ, ಪಾವತಿಸಿದ ಸಾಲದ ಮೊತ್ತ, ಸರ್ಕಾರ ಪಾವತಿಸಲಿರುವ ಬಾಕಿ ಮೊತ್ತ ಸೇರಿ ಸಂಪೂರ್ಣ ಮಾಹಿತಿ ಇರಲಿದೆ. ಸುಮಾರು 40 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ.
Related Articles
Advertisement
ಬ್ಯಾಂಕ್‌ಗಳ ಅಸಹಕಾರಕ್ಕೆ ಬೇಸರ:2017ರ ಜೂನ್‌ನಲ್ಲಿ ಎನ್‌ಪಿಎ (ಅನುತ್ಪಾದಕ ಆಸ್ತಿ) ಪಟ್ಟಿಯಲ್ಲಿರುವ ರೈತರು ಸಾಲ ಮರುಪಾವತಿ ಮಾಡಿದರೆ, ಶೇ. 50ರಷ್ಟು ರಿಯಾಯ್ತಿ ಜತೆಗೆ ಬಡ್ಡಿ ಕೂಡ ವಿನಾಯ್ತಿ ಮಾಡುವುದಾಗಿ ಜಾಹೀರಾತು ನೀಡಿದ ಬ್ಯಾಂಕ್‌ಗಳೇ ಇಂದು ಸ್ವತಃ ಸರ್ಕಾರ ಸಾಲ ಮರುಪಾವತಿಸಲು ಮುಂದಾದರೂ ಪೂರಕವಾಗಿ ಸ್ಪಂದಿಸುತ್ತಿಲ್ಲ. ಎಷ್ಟು ರಿಯಾಯ್ತಿ ನೀಡುತ್ತಾರೆ ಎಂಬುದರ ಬಗ್ಗೆ ಈವರೆಗೂ ನಿಖರವಾಗಿ ಹೇಳುತ್ತಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಮಾತನಾಡಿ, ಮೈತ್ರಿ ಸರ್ಕಾರದ ಬಗ್ಗೆ ಟೀಕಿಸುವವರಿಗೆ ಇದು ಸೂಕ್ತ ಸಂದೇಶವಾಗಿದೆ. ಸರ್ಕಾರಿ ದಿವಾಳಿಯಾಗಿದ್ದು, ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷದ ನಾಯಕರು ಟೀಕಿಸುತ್ತಿದ್ದಾರೆ. ಖಜಾನೆ ಖಾಲಿಯಾಗಿದ್ದರೆ, 40 ಸಾವಿರ ಕೋಟಿ ರೂ. ಮನ್ನಾ ಮಾಡಲು ಸಾಧ್ಯವಾಗುತ್ತಿತ್ತಾ ಎಂದು ತಿರುಗೇಟು ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದ ಸರ್ಕಾರ ಸುಮ್ಮನೆ ಕುಳಿತಿರಲಿಲ್ಲ. ಸಾಲ ಮನ್ನಾ ಯೋಜನೆ ಅನರ್ಹರ ಪಾಲಾಗಿ, ರೈತರು ವಂಚಿತರಾಗದಿರಲು ಸೂಕ್ತ ವ್ಯವಸ್ಥೆ ರೂಪಿಸುವ ಕಾರ್ಯ ನಡೆದಿತ್ತು ಎಂದರು. ಸಚಿವರಾದ ಡಿ.ಕೆ. ಶಿವಕುಮಾರ್, ಎನ್.ಎಚ್. ಶಿವಶಂಕರರೆಡ್ಡಿ, ಸಂಸದ ಡಾ.ಎಂ. ವೀರಪ್ಪ ಮೊಯ್ಲಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ್, ದೇವನಹಳ್ಳಿ ವಿಧಾನಸಭಾ ಕ್ಷೇತ್ರ ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ, ಎಸ್. ರವಿ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ನಗರಸಭೆ ಅಧ್ಯಕ್ಷ ತ.ನ. ಪ್ರಭುದೇವ್, ಉಪಾಧ್ಯಕ್ಷೆ ಜಯಲಕ್ಷ್ಮೀ, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಚ್.ವಿ. ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಎಪಿಎಂಸಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಸಹಕಾರ ಸಂಘಗಳ ನಿಬಂಧಕ ಎಂ.ಕೆ. ಅಯ್ಯಪ್ಪ, ಜಿಲ್ಲಾ ಧಿಕಾರಿ ಕರೀಗೌಡ, ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್, ಸಿಇಒ ಆರ್. ಲತಾ ಮತ್ತಿತರರು ಉಪಸ್ಥಿತರಿದ್ದರು. ರೈತರನ್ನು ಉಳಿಸಲು ಕೇಂದ್ರ ಸರ್ಕಾರ ತಮಗೆ ದುಡ್ಡಿನ ಯಂತ್ರ ಕೊಟ್ಟಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ನಾನು ರೈತರ ಕಾಳಜಿ ಬಗ್ಗೆ ಪಾಠ ಹೇಳಿಸಿಕೊಳ್ಳಬೇಕಾ?
– ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬಿಜೆಪಿ ರ‍್ಯಾಲಿ ವಿರುದ್ಧ ಕಿಡಿ
“ಏನ್ ಕಿತ್ತುಗುಡ್ಡೆ ಹಾಕಿದ್ದೀರಾ ಅಂತ ರೈತರ ರ್ಯಾಲಿ ಮಾಡಲು ಹೊರಟಿದ್ದೀರಾ’ ಎಂದು ಬಿಜೆಪಿಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. “ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಲಕ್ಷ ರೈತರನ್ನು ಸೇರಿಸಿ ಬೃಹತ್ ರ್ಯಾಲಿ ಮಾಡಲು ಬಿಜೆಪಿ ಮುಂದಾಗಿದೆ. ಆದರೆ, ಅಲ್ಲಿ ದೆಹಲಿಯಲ್ಲಿ ಈಚೆರೆ ಇಡೀ ದೇಶದ ರೈತರು ಒಟ್ಟಾಗಿ ನಿರಂತರ ಪ್ರತಿಭಟನೆ ನಡೆಸಿದರೂ ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಹಾಗೂ ಕೇಂದ್ರ ಸಚಿವರಾಗಲಿ ಅವರತ್ತ ತಿರುಗಿ ನೋಡಲಿಲ್ಲ. ಇಲ್ಲಿ ನೀವು (ರಾಜ್ಯ ಬಿಜೆಪಿ ನಾಯಕರು) ಏನು ಕಿತ್ತುಗುಡ್ಡೆ ಹಾಕಿದ್ದೀರಿ ಅಂತ ರ್ಯಾಲಿ ಮಾಡಲು ಹೊರಟಿದ್ದೀರಿ” ಎಂದು ಪ್ರಶ್ನಿಸಿದರು. ಸೇಡಂನಲ್ಲಿ ಸಚಿವ ಖಾಶೆಂಪೂರ ಚಾಲನೆ
ಕಲಬುರಗಿಯ ಸೇಡಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಹಾಗೂ ಮಾರುಕಟ್ಟೆ ಸಚಿವ ಬಂಡೆಪ್ಪ ಖಾಶೆಂಪೂರ ಯೋಜನೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇನ್ನಷ್ಟು ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಲಿದೆ. ಸಹಕಾರಿ ಸಂಘಗಳ ಕಾರ್ಯದರ್ಶಿಗಳು ನಡೆಸುವ ಅವ್ಯವಹಾರ ತಡೆಗಟ್ಟಲು ಸಾಲ ಮನ್ನಾಕ್ಕೆ ದಾಖಲೆ ಪತ್ರ ಪಡೆಯಲಾಗುತ್ತಿದೆ. ಇದಕ್ಕಾಗಿ ರೈತರು ಸಹಕರಿಸಬೇಕು ಎಂದರು.