Advertisement

ಮುಂಗಾರು ಸರಿದು ಹಿಂಗಾರಿಗೆ ಸಜ್ಜಾದ ಜಿಲ್ಲೆಯ ರೈತರು

01:29 AM Dec 06, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ಮುಂಗಾರು ಹಂಗಾಮಿನಲ್ಲಿ ಖಾರಿಫ್ನ ಭತ್ತದ ಇಳುವರಿಯೂ ಚೆನ್ನಾಗಿದೆ. ಅದೇ ಹುಮ್ಮಸ್ಸಿನಲ್ಲಿ ರೈತರು ಈಗ ಹಿಂಗಾರು ಹಂಗಾಮಿಗೆ ತಯಾರಾಗಿದ್ದಾರೆ. ಹಿಂಗಾರಿನಲ್ಲಿ 9,150 ಹೆಕ್ಟೇರ್‌ ವಿಸ್ತೀರ್ಣದಲ್ಲಿ ನಾನಾ ಬೆಳೆಗಳನ್ನು ಬೆಳೆಯುವ ಗುರಿ ಇರಿಸಲಾಗಿದೆ.

Advertisement

ಮುಂಗಾರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಭತ್ತದ ಕೃಷಿಯನ್ನೇ ಹೆಚ್ಚಿನವರು ನೆಚ್ಚಿಕೊಂಡರೆ ಹಿಂಗಾರು ಹಂಗಾಮಿನಲ್ಲಿ ಗದ್ದೆಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಕಾಣಬಹುದಾಗಿದೆ. ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳಲ್ಲಿ ಭತ್ತದ ಜತೆಗೆ ದ್ವಿದಳ ಧಾನ್ಯ, ಎಣ್ಣೆಕಾಳುಗಳನ್ನು ಬೆಳೆಸಲಾಗುತ್ತದೆ.
ಜಿಲ್ಲೆಯಲ್ಲಿ ಎರಡನೇ ಬೆಳೆಯಾಗಿ 4ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತವನ್ನು ಬೆಳೆಯುವ ಗುರಿಯನ್ನು ಇಟ್ಟುಕೊಂಡಿದ್ದು, ಪ್ರಸ್ತುತ 143 ಹೆಕ್ಟೇರ್‌ ಪ್ರದೇಶದ ಬಿತ್ತನೆಯಾಗಿದೆ. ಅಲ್ಲದೆ 10 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮುಸುಕಿನ ಜೋಳ ಬಿತ್ತುವ ಗುರಿ ಇದೆ.

ಉದ್ದು, ಹುರುಳಿಗೂ ಬೇಡಿಕೆ
ಹಿಂಗಾರಿನಲ್ಲಿ ಭತ್ತದ ಬೆಳೆಯ ಅನಂತರ ಜಿಲ್ಲೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿರುವುದು ದ್ವಿದಳ ಧಾನ್ಯವಾಗಿರುವ ಉದ್ದು. ಇದನ್ನು ಸುಮಾರು 3 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತುವ ಗುರಿ ಹೊಂದಲಾಗಿದೆ. ಈಗಾಗಲೆ 664 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಉಳಿದಂತೆ 180 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, 150 ಹೆಕ್ಟೇರ್‌ ಪ್ರದೇಶದಲ್ಲಿ ಅಲಸಂಡೆ ಮತ್ತು 10 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ಬೆಳೆಯುವ ಗುರಿ ಹೊಂದಲಾಗಿದೆ.

ನೆಲಗಡಲೆ ಬಿತ್ತನೆ ಗುರಿ
ಹಿಂಗಾರು ಹಂಗಾಮಿನಲ್ಲಿ ನೀರು, ಹವಾಮಾನಕ್ಕೆ ತಕ್ಕಂತೆ ನೆಲಗಡಲೆ ಕೃಷಿಯನ್ನು ಅವಲಂಬಿಸಿಕೊಂಡವರು ಕೂಡ ಉಡುಪಿ ಜಿಲ್ಲೆಯಲ್ಲಿ ಅಧಿಕ ಮಂದಿಯಿದ್ದಾರೆ. ಈ ವರ್ಷ ಕೋಟ, ಕುಂದಾಪುರ, ಬೈಂದೂರು, ವಂಡ್ಸೆ ಹೋಬಳಿಗಳಲ್ಲಿ ಒಟ್ಟು 1800 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಎಣ್ಣೆಕಾಳು ಬೆಳೆಯಾಗಿರುವ ನೆಲಗಡಲೆಯನ್ನು ಬಿತ್ತುವುದಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ.

34,730 ಹೆಕ್ಟೇರ್‌ನಲ್ಲಿ ಭತ್ತ
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 36ಸಾವಿರ ಹೆಕ್ಟೇರು ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತು. ಈ ಬಾರಿ 34,730 ಹೆಕ್ಟೇರು ಪ್ರದೇಶದಲ್ಲಿ ಭತ್ತ ಬೇಸಾಯ ನಡೆದಿತ್ತು. ಉಡುಪಿ ತಾಲೂಕಿನಲ್ಲಿ 15,410 ಹೆಕ್ಟೇರು, ಕುಂದಾಪುರದಲ್ಲಿ 13,370 ಹೆಕ್ಟೇರು ಮತ್ತು ಕಾರ್ಕಳ ತಾಲೂಕಿನಲ್ಲಿ 5,950 ಹೆಕ್ಟೇರು ವಿಸ್ತೀರ್ಣದಲ್ಲಿ ಭತ್ತ ಬೆಳೆಯಲಾಗಿತ್ತು.

Advertisement

807 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣ
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಗುರಿಯ 9,150 ಹೆಕ್ಟೇರ್‌ ಪ್ರದೇಶದಲ್ಲಿ 4,010 ಹೆಕ್ಟೇರ್‌ ಪ್ರದೇಶ ನೀರಾವರಿ ಕ್ಷೇತ್ರವಾಗಿದ್ದರೆ ಉಳಿದ 5,140 ಹೆಕ್ಟೇರ್‌ ಪ್ರದೇಶವು ಮಳೆಯಾಶ್ರಿತ ವಾಗಿದೆ. ಈವರೆಗೆ ಒಟ್ಟು 807 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
-ಡಾ| ಎಚ್‌.ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ

 ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next