Advertisement

ಕರ್ನಾಟಕದಲ್ಲಿ ರೈತರಿಗೆ ಮನ್ನಾ ಅಲ್ಲ, ವಾರಂಟ್‌

09:45 AM Nov 19, 2018 | Team Udayavani |

ಮಹಾಸಮುಂದ್‌/ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಮನ್ನಾ ಮಾಡುವುದರ ಬದಲಿಗೆ, ರೈತರಿಗೆ ವಾರಂಟ್‌ ಜಾರಿ ಮಾಡುತ್ತಿದೆ.
ಹೀಗೆಂದು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದ ವಿರುದ್ಧ ಹರಿಹಾಯ್ದಿದ್ದು ಪ್ರಧಾನಿ ನರೇಂದ್ರ ಮೋದಿ.

Advertisement

ಛತ್ತೀಸ್‌ಗಢದ ಮಹಾಸಮುಂದ್‌ನಲ್ಲಿ ರವಿವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಬಗ್ಗೆಯೂ ಪ್ರಸ್ತಾಪಿಸುವ ಮೂಲಕ ಕಾಂಗ್ರೆಸ್‌- ಜೆಡಿಎಸ್‌ ವಿರುದ್ಧ ಕಿಡಿಕಾರಿದರು. “ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ ನಾಯಕರು ಘೋಷಣೆ ಮಾಡುತ್ತಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಇದೇ ಮಾದರಿ ಘೋಷಣೆ ಮಾಡಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಆಶ್ವಾಸನೆ ಈಡೇರಿಸಿಲ್ಲ. ಅದರ ಬದಲಾಗಿ ಸಾಲ ಬಾಕಿಯಿರುವ ರೈತರಿಗೆ ವಾರಂಟ್‌ ಜಾರಿ ಮಾಡಿ, ಬಂಧಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ ಆಶ್ವಾಸನೆಗಳ ಆಟ ಆಡುತ್ತದೆ. ನಾಲ್ಕು ತಲೆ ಮಾರುಗಳು ದೇಶ ಆಳಿದಾಗ ಅವರು ರೈತರ ಅಭಿವೃದ್ಧಿಗೆ ಏನು ಮಾಡಿದರು ಎಂಬುದನ್ನು ಉತ್ತರಿಸಲಿ. 50 ವರ್ಷಗಳ ಆಡಳಿತದಲ್ಲಿ ರೈತರನ್ನು ಸಂಕಷ್ಟದ ಸ್ಥಿತಿಯಲ್ಲೇ ಇರುವಂತೆ ನೋಡಿಕೊಂಡರು. ಆದರೆ, ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ ಎಂದೂ ಮೋದಿ ಹೇಳಿದರು.

ದಲಿತನಿಂದ ಸ್ಥಾನ ಕಿತ್ತುಕೊಂಡ ಕಾಂಗ್ರೆಸ್‌: ಇದೇ ವೇಳೆ, ದಲಿತ ವರ್ಗಕ್ಕೆ ಸೇರಿದ ಸೀತಾರಾಮ್‌ ಕೇಸರಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮುಂದು ವರಿಯಲು ಕಾಂಗ್ರೆಸಿಗರು ಅವಕಾಶ ಮಾಡಿಕೊಡಲಿಲ್ಲ. ಅವಧಿ ಪೂರೈಸುವುದಕ್ಕೆ ಮೊದಲೇ ಕೇಸರಿ ಅವರನ್ನು ಹೊರಗಟ್ಟಿ, ಸೋನಿಯಾ ಗಾಂಧಿ ಅವರನ್ನು ಆ ಸ್ಥಾನಕ್ಕೆ ತಂದು ಕೂರಿಸಲಾಯಿತು ಎಂದೂ ಮೋದಿ ಟೀಕಿಸಿದ್ದಾರೆ. ನಾಲ್ಕು ದಶಕಗಳ ಕಾಲ ಒಂದೇ ಕುಟುಂಬ ದೇಶವನ್ನು ಆಳಿತು. ಇದರಿಂದಾಗಿ ಅದಕ್ಕೆ ಅಧಿಕಾರದ ಲಾಭ ಮಾತ್ರ ಆಯಿತು ಎಂದಿದ್ದಾರೆ.

“ಕೇಂದ್ರದ ಮಾಜಿ ಸಚಿವ ಸೀತಾರಾಮ್‌ ಕೇಸರಿ ದಲಿತ ಸಮುದಾಯಕ್ಕೆ ಸೇರಿದವರು ಎಂದು ಎಲ್ಲರಿಗೂ ಗೊತ್ತು. ಅವರಿಗೆ 5 ವರ್ಷಗಳ ಕಾಲ ಪೂರ್ಣಾವಧಿಗೆ ಕಾಂಗ್ರೆಸ್‌ ಅಧ್ಯಕ್ಷರಾಗಲು ಅವಕಾಶ ಕೊಡಲೇ ಇಲ್ಲ. ಅದಕ್ಕಿಂತ ಮೊದಲೇ ಸೋನಿಯಾ ಗಾಂಧಿ ಅವರನ್ನು ಈ ಹುದ್ದೆಗೆ ತಂದು ಕೂರಿಸಲು ಅವರನ್ನು ಆ ಸ್ಥಾನದಿಂದ ಕಿತ್ತೂಗೆಯಲಾಯಿತು’ ಎಂದಿದ್ದಾರೆ ಪ್ರಧಾನಿ. 

Advertisement

“ಈ ಹಿಂದೆ ಹೊಸದಿಲ್ಲಿಯಲ್ಲಿ ರಿಮೋಟ್‌ ಕಂಟ್ರೋಲ್‌ ಸರಕಾರ ಇರುತ್ತಿತ್ತು. ಕುಟುಂಬದ ಕೈಯಲ್ಲಿ ರಿಮೋಟ್‌ ಇತ್ತು. ಈ ಸಂದರ್ಭದಲ್ಲಿ ಛತ್ತೀಸ್‌ಗಢ‌ ಸಿಎಂ ಡಾ| ರಮಣ್‌ ಸಿಂಗ್‌ ಕಷ್ಟಪಡಬೇಕಾಯಿತು. ಜತೆಗೆ ಕೇಂದ್ರದಿಂದ ನೆರವೂ ಸಿಗಲಿಲ್ಲ’ ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೆ, ಸಾಧ್ಯವಿದ್ದರೆ ಕಾಂಗ್ರೆಸ್‌ನವರು ಗಾಂಧಿ-ನೆಹರೂ ಕುಟುಂಬದ ಹೊರತಾಗಿನ ಸಮರ್ಥ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲಿ ಎಂದು ಮತ್ತೂಮ್ಮೆ ಸವಾಲು ಹಾಕಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ನಡೆದ ಪಂಚಾಯತ್‌ ಚುನಾವಣೆಯಲ್ಲಿ ಶೇ.60ರಷ್ಟು ಮತದಾನವಾಗಿದ್ದು ತೃಪ್ತಿಯ ವಿಚಾರ ಎಂದು ಹೇಳಿದ್ದಾರೆ. ಛತ್ತೀಸ್‌ಗಢದಲ್ಲಿ ನ.20ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಅದಕ್ಕಾಗಿ ರವಿವಾರ ಬಹಿರಂಗ ಪ್ರಚಾರದ ಕೊನೆಯ ದಿನವಾಗಿತ್ತು. ಇದೇ ವೇಳೆ, ಪ್ರಧಾನಿ ಹೇಳಿ ಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್‌, “ಸೀತಾರಾಮ್‌ ಕೇಸರಿ ಅವರು ಹಿಂದುಳಿದ ವರ್ಗಕ್ಕೆ ಸೇರಿದವರೇ ವಿನಾ ದಲಿತ ಸಮುದಾಯಕ್ಕೆ ಸೇರಿದವರಲ್ಲ. ಮೋದಿಜೀಯವರಿಗೆ ಸುಳ್ಳು ಹೇಳುವುದು ಅಭ್ಯಾಸ ವಾಗಿಬಿಟ್ಟಿದೆ’ ಎಂದಿದೆ.

ಪಕ್ಷಕ್ಕಿಂತ ಕೌಟುಂಬಿಕ ಸಂಸ್ಥೆ:  ಇದೇ ವೇಳೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ರವಿವಾರ ಸರಣಿ ಟ್ವೀಟ್‌ ಮಾಡಿ “ಕಾಂಗ್ರೆಸ್‌ ಎನ್ನು ವುದು ರಾಜಕೀಯ ಪಕ್ಷಕ್ಕಿಂತ ಕೌಟುಂಬಿಕ ಸಂಸ್ಥೆ’ ಎಂದು ಬರೆದುಕೊಂಡಿದ್ದಾರೆ. ಕುಟುಂಬದ ಹೊರಗಿನವರನ್ನು ಅಧ್ಯಕ್ಷ ರನ್ನಾಗಿ ಮಾಡಿ ಎಂದು ಪ್ರಧಾನಿ ಮೋದಿ ಮಾಡಿದ ಸವಾಲಿನಿಂದ ಕಾಂಗ್ರೆಸ್‌ ನಾಯಕರಿಗೆ ಆಘಾತವಾಗಿದೆ ಎಂದು ಬರೆದುಕೊಂಡಿದ್ದಾರೆ. 1978ರ ಬಳಿಕ ಒಂದೇ ಕುಟುಂಬದವರೇ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಅದು ರಾಜಕೀಯ ಪಕ್ಷ ಎನ್ನುವುದಕ್ಕಿಂತ ಕುಟುಂಬದ ಉದ್ಯಮ ಎಂದಿದ್ದಾರೆ. 

ಕುಟುಂಬದಿಂದ ಹೊರತಾಗಿ ಅಧ್ಯಕ್ಷ ರಾದ ವ್ಯಕ್ತಿಗಳನ್ನು ತೀರಾ ಅವಮಾನಕರವಾಗಿ ನಡೆಸಿಕೊಳ್ಳಲಾಯಿತು. ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ನಿಧನ ಹೊಂದಿದ್ದ ವೇಳೆ ಅವರ ಪಾರ್ಥಿವ ಶರೀರವನ್ನು ಕಾಂಗ್ರೆಸ್‌ ಕಚೇರಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಿಲ್ಲ. ಸೀತಾ ರಾಮ್‌ ಕೇಸರಿ ಅವರಿಗೆ ಗೂಂಡಾಗಳಿಂದ ಥಳಿಸ ಲಾಯಿತು ಎಂದು ಟ್ವೀಟ್‌ ಮಾಡಿದ್ದಾರೆ ಅಮಿತ್‌ ಶಾ.

21ಕ್ಕೆ ಮಾತುಕತೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನ.21ರಂದು ರಾಜಸ್ಥಾನದ ಯುವಕರ ಜತೆಗೆ ಮಾತುಕತೆ ನಡೆಸಲಿದ್ದಾರೆ. ಇನ್ನೊಂದೆಡೆ, ಡಿ.7ರಂದು ತೆಲಂಗಾಣ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಲಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್‌ ಮೊದಲ ವಾರದಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ. ತೆಲಂಗಾಣ ಪ್ರತ್ಯೇಕ ರಾಜ್ಯ ವಾದ ಬಳಿಕ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನ. 23ಕ್ಕೆ ಭೇಟಿ ನೀಡಿ ಮೆಡcಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಗೋವಿಗೆ ಕಾಂಗ್ರೆಸ್‌ನಿಂದ ಮೋಸ: ಪ್ರಧಾನಿ
ಮಧ್ಯಪ್ರದೇಶದ ಛಿಂದ್ವಾರಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಗೋವಿನ ರಕ್ಷಣೆ ಕುರಿತು ಪ್ರಸ್ತಾಪ ಮಾಡಿ ವಂಚಿಸುತ್ತಿದೆ ಎಂದು ಟೀಕಿಸಿದ್ದಾರೆ. “ಕೇರಳದಲ್ಲಿ ರಸ್ತೆಯಲ್ಲಿಯೇ ಗೋವನ್ನು ಕಡಿದು, ಮಾಂಸ ಮಾರಾಟಕ್ಕೆ ಅನುಕೂಲ ಮಾಡಿ, ಗೋ ಮಾಂಸ ತಿನ್ನುವುದು ನಮ್ಮ ಹಕ್ಕು ಎನ್ನುತ್ತಿದೆ. ಮಧ್ಯಪ್ರದೇಶದಲ್ಲಿ ಅದೇ ಪಕ್ಷ ದನಗಳ ರಕ್ಷಣೆಗೆ ಹಲವು ಯೋಜನೆಗಳನ್ನು ಪ್ರಕಟಿಸಿದೆ. ಹಾಗಿದ್ದರೆ ಮಧ್ಯಪ್ರದೇಶ ಮತ್ತು ಕೇರಳದಲ್ಲಿನ ಕಾಂಗ್ರೆಸ್‌ ಬೇರೆಯೇ? ನಾಮ್‌ಧಾರ್‌ (ರಾಹುಲ್‌ ಗಾಂಧಿ) ಈ ಬಗ್ಗೆ ಉತ್ತರಿಸಬೇಕು’ ಎಂದು ಸವಾಲು ಹಾಕಿದ್ದಾರೆ. ಸೂಕ್ತ ತಂತ್ರಜ್ಞಾನ ಬಳಕೆ ಮಾಡುವುದರಿಂದ ದೇಶದ ಬೊಕ್ಕಸಕ್ಕೆ ವಾರ್ಷಿಕವಾಗಿ 90 ಸಾವಿರ ಕೋಟಿ ರೂ. ಉಳಿತಾಯ ಮಾಡಲಾಗಿದೆ. ಛಿಂದ್ವಾರಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಕಮಲ್‌ನಾಥ್‌ ಕೆಲವು ದಿನಗಳ ಹಿಂದೆ ವೀಡಿಯೋ ಮೂಲಕ ಹೇಳಿಕೊಂಡ ಅಭಿವೃದ್ಧಿಗಳ ಮಾತುಗಳನ್ನೂ ಪ್ರಶ್ನಿಸಿದ್ದಾರೆ ಪ್ರಧಾನಿ.

ರಾಹುಲ್‌ ಗಾಂಧಿ ಎದುರೇ ಪ್ರತಿಭಟನೆ
ರಾಜಸ್ಥಾನದಲ್ಲಿ ಪ್ರಚಾರಕ್ಕೆಂದು ತೆರಳಿದ್ದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಟಿಕೆಟ್‌ ಆಕ್ಷಾಂಕ್ಷಿ ನಾಯಕರ ಬೆಂಬಲಿಗರು ಮತ್ತು ಅವರ ಪ್ರತಿಸ್ಪರ್ಧಿ ನಾಯಕರ ಆಕ್ರೋಶ-ಪ್ರತಿಭಟನೆಗಳ ದರ್ಶನವಾಗಿದೆ. ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಚಿನ್‌ ಪೈಲಟ್‌ ವಿರುದ್ಧದ ಘೋಷಣೆಗಳನ್ನು ರಾಹುಲ್‌ ಗಾಂಧಿ ಮೌನವಾಗಿಯೇ ಕೇಳಿಸಿಕೊಳ್ಳಬೇಕಾಯಿತು. ಕಾಂಗ್ರೆಸ್‌ನ ಪ್ರಮುಖ ನಾಯಕ ಸ್ಪರ್ಧಾ ಚೌಧರಿ ಎಂಬವರ ಬೆಂಬಲಿಗರು ಬಲವಾಗಿ ಕಾರಿನ ಬಾನೆಟ್‌ಗೆ ಗುದ್ದಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next