Advertisement

ಮುಂಗಾರು ಮಳೆಯಿಲ್ಲದೆ ಕಂಗಾಲಾದ ರೈತರು

09:35 PM Jul 06, 2019 | Lakshmi GovindaRaj |

ನೆಲಮಂಗಲ: ವರ್ಷದ ಆರಂಭದಲ್ಲಿ ರೈತರಿಗೆ ಉತ್ತಮ ಭರವಸೆ ಮೂಡಿಸಿದ್ದ ಮುಂಗಾರು, ಕಳೆದ ಒಂದು ತಿಂಗಳಿನಿಂದ ಮಾಯವಾಗಿದೆ. ಬಿತ್ತನೆ ಮಾಡಿರುವ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿವೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಿವೆ.

Advertisement

ಜನವರಿಯಿಂದ ಮೇ ತಿಂಗಳಿನವರೆಗೂ ಪೂರ್ವ ಮುಂಗಾರು ಉತ್ತಮವಾದ ಭರವಸೆಯನ್ನು ಮೂಡಿಸಿತ್ತು. ಅ ನಂಬಿಕೆಯಿಂದ ತಾಲೂಕಿನ ರೈತರು ಈ ವರ್ಷದ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಬಿತ್ತನೆ ಮಾಡಲು ಭೂಮಿ ಹದಗೊಳಿಸಿದರು ಅದರೆ ಜೂನ್‌ತಿಂಗಳ ಮೊದಲ ವಾರದಲ್ಲಿ ಕಾಣಿಸಿಕೊಂಡ ಮಳೆ ನಂತರದಲ್ಲಿ ಕಾಣೆಯಾಯಿತು, ಭೂಮಿ ಹದ ಮಾಡಿಕೊಂಡು ಮಳೆಗಾಗಿ ರೈತರು ಕಾದುಕುಳಿತು ಕೊಂಡಿದ್ದಾರೆ.

ಮಳೆಯಿಲ್ಲದೆ ಬಾಡುತ್ತಿರುವ ಬೆಳೆಗಳು: ತಾಲೂಕಿನ ತ್ಯಾಮಗೊಂಡ್ಲು-ಹೋಬಳಿ ರೈತರು ಕಳೆದ ಜೂನ್‌ ತಿಂಗಳ ಆರಂಭದಲ್ಲಿ ಉತ್ತಮ ಮಳೆಯಾದ ಪರಿಣಾಮ ರೈತರು ಜಾನುವಾರುಗಳಿಗೆ ಹಸಿರು ಮೇವು ಬೆಳೆಯುವ ಜೊತೆಯಲ್ಲಿ 20 ಹೆಕ್ಟೇರ್‌ನಲ್ಲಿ ಮುಸುಕಿನಜೋಳ, 10 ಹೆಕ್ಟೇರ್‌ ಅಲಸಂಧೆ ಬಿತ್ತನೆ ಮಾಡಿದ್ದಾರೆ. ಅದರೆ ಮಳೆಯ ಕೊರತೆ ಮತ್ತು ತೇವಾಂಶವಿಲ್ಲದೇ ಗರಿಗೆದರಿದ ಜೋಳ ಮತ್ತು ಅಲಸಂಧೆ ಬೆಳೆಗಳು ಬಾಡುತ್ತಿದ್ದು, ರೈತರಲ್ಲಿ ಮೇವಿನ ಸಮಸ್ಯೆ ಎದುರಾಗುವ ಆತಂಕ ಮನೆಮಾಡಿದೆ.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು: ತ್ಯಾಮಗೊಂಡ್ಲು ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಅವಶ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರವನ್ನು ದಾಸ್ತಾನು ಮಾಡಿದ್ದಾರೆ. ಅದರೆ ಮಳೆ ಅಭಾವದಿಂದ ಬಿತ್ತನೆ ಬೀಜ ಖರೀದಿಗೆ ರೈತರೇ ಮುಂದಾಗುತ್ತಿಲ್ಲ. ರಾಗಿ ಎಂಆರ್‌1 33ಕ್ವಿಂಟಲ್‌, ಎಂಆರ್‌6 8.25 ಕ್ವಿಂಟಲ್‌, ಎಂಎಲ್‌ 365 3 ಕ್ವಿಂಟಲ್‌, ಜಿಪಿಯು-28 3 ಕ್ವಿಂಟಲ್‌, ತೊಗರಿ 1.02 ಕ್ವಿಂಟಲ್‌, ಜೋಳ ವಿವಿಧ ತಳಿಯ 61 ಕ್ವಿಂಟಲ್‌, ಭತ್ತ ಐಆರ್‌-64 2.50 ಕ್ವಿಂಟಲ್‌, ಬಿಪಿಟಿ-5204 2.50 ಕ್ವಿಂಟಲ್‌ ಮತ್ತು ಆರ್‍ನಾರ್‌ 15048 ತಳಿಯ 2.50 ಕ್ವಿಂಟಲ್‌ ಬಿತ್ತನೆ ಬೀಜಗಳು ಹಾಗೂ ಸಾವಯವ ರಸಗೊಬ್ಬರ ರೈತಸಂಪರ್ಕ ಕೇಂದ್ರದಲ್ಲಿ ದಾಸ್ತಾನಿದೆ.

ಕೆರೆ-ಕುಂಟೆ ತುಂಬಿಲ್ಲ: ಮುಂಗಾರು ಪೂರ್ವದಲ್ಲಿ ಬಂದ ಮಳೆಯ ಪರಿಣಾಮವಾಗಿ ಹೋಬಳಿಯ ಕೆರೆ ಕುಂಟೆಗಳಿಗೆ ನೀರು ಹರಿದು ಬಂದಿತ್ತು, ಜೂನ್‌ ತಿಂಗಳಲ್ಲಿ ಮಳೆಯಾಗಿದ್ದರೆ ಕೆರೆ ಕುಂಟೆಗಳಲ್ಲಿ ನೀರು ಹೆಚ್ಚಿನ ಮಟ್ಟದಲ್ಲಿ ತುಂಬುತ್ತಿದ್ದವು ಅದರೆ ಮಳೆಯ ಅಭಾವದಿಂದ ಕೆರೆ ಕುಂಟೆಗಳು ನೀರಿಲ್ಲದೇ ಬಣಗುಡುತ್ತಿವೆ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.

Advertisement

ಮೇವಿಗೆ ದುಬಾರಿ ಬೆಲೆ: ಹೋಬಳಿಯಲ್ಲಿ ಒಣ ಮೇವು ಸಿಗುತ್ತಿಲ್ಲ. ಇದರಿಂದಾಸಗಿ ಅಲ್ಪಸ್ವಲ್ಪ ಮಳೆಯಿಂದ ಚಿಗುರಿದ್ದ ಹುಲ್ಲನ್ನು ಅವಲಂಬಿಸಿದ್ದ ರೈತರು ಈಗ ಮೇವಿನ ಬರವನ್ನೂ ಎದುರಿಸುವಂತಾಗಿದೆ. ಸಣ್ಣ ನೀರಾವರಿ ಸಹಾಯದಿಂದ ಮೇವಿಗಾಗಿ ಬೆಳೆದಿರುವ ಜೋಳದ ಮೇವು ದುಬಾರಿ ಬೆಲೆಗೆ ಕೊಳ್ಳುವಂತಾಗಿದೆ. ಒಂದು ಕಡ್ಡಿ ಜೋಳದ ಬೆಲೆ 4ರಿಂದ 5 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದ್ದರಿಂದ ರೈತರು ಖರೀದಿಸಲು ದುಬಾರಿ ಬೆಲೆ ನೀಡುವಂತಾಗಿದೆ.

ಫಸಲ್‌ ಭಿಮಾ ಯೋಜನೆ: ಈ ಬಾರಿ ಮಳೆಯ ಅಭಾವದಿಂದ ಮತ್ತು ಪ್ರತಿಕೂಲ ಹವಾಮಾನದ ಪರಿಸ್ಥಿತಿಗಳ ಕಾರಣದಿಂದ ಬಿತ್ತನೆ ಮಾಡಿದ ಬೆಳೆಗಳು ನೆಲಕಚ್ಚುವ ಹಂತ ತಲುಪಿದೆ. ಸರ್ಕಾರದಿಂದ ಸಿಗುವ ಬೆಳೆ ವಿಮೆಗೆ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಮತ್ತು ಬೆಳೆಯ ನಾಶದ ಮಾಹಿತಿ ದಾಖಲು ಮಾಡಲು ಅಧಿಕಾರಿಗಳು ಕೋರಿದ್ದಾರೆ.

ಜೂನ್‌ ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಮುಸುಕಿನ ಜೋಳ ಬಿತ್ತನೆ ಮಾಡಿದ್ದರು. ಈಗ 20 ದಿನಗಳಿಂದ ಮಳೆ ಬಂದಿಲ್ಲ. ನೀರಿನ ಹಾಗೂ ತೇವಾಂಶದ ಕೊರತೆಯಿಂದ ಜೋಳದ ಬೆಳೆ ಬಾಡುತ್ತಿದೆ. ಹೀಗಾಗಿ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.
-ನಾರಾಯಣ, ಬಳ್ಳಗೆರೆ ಗ್ರಾಮದ ಕೃಷಿಕ

ಹೋಬಳಿಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಇದೆ. ಮಳೆ ಕೊರತೆಯಿಂದ ರೈತರು ಖರೀದಿಸಲು ಮುಂದಾಗುತ್ತಿಲ್ಲ. ಈ ತಿಂಗಳ ಕೊನೆವರೆಗೆ ರಾಗಿ ಬಿತ್ತನೆ ಮಾಡಬಹುದು. ಈಗಾಗಲೇ ಬಿತ್ತನೆ ಮಾಡಿದವರು ಕೇಂದ್ರಕ್ಕೆ ಮಾಹಿತಿ ನೀಡಿ, ಫಸಲ್‌ ಭಿಮಾ ಯೋಜನೆ ಮಾಡಿಸಿದರೆ ಪರಿಹಾರ ಸಿಗುತ್ತದೆ.
-ಶಿವಕುಮಾರ್‌, ಸಹಾಯಕ ಕೃಷಿ ಅಧಿಕಾರಿ, ತ್ಯಾಮಗೊಂಡ್ಲು

* ಕೊಟ್ರೇಶ್‌. ಆರ್‌

Advertisement

Udayavani is now on Telegram. Click here to join our channel and stay updated with the latest news.

Next