Advertisement

ಮತ್ತೆ ನೀರಿನ ನಿರೀಕ್ಷೆಯಲ್ಲಿ ರೈತರು

02:36 PM Nov 12, 2019 | Suhan S |

ಆಲಮಟ್ಟಿ: ನೆರೆ ಹಾಗೂ ಬರಗಾಲದಿಂದ ತತ್ತರಿಸಿದ ರೈತರು ಹಿಂಗಾರು ಹಂಗಾಮು ನೀರು ಪಡೆಯಲು ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯತ್ತ ನೋಡುವಂತಾಗಿದೆ.

Advertisement

ಉತ್ತರ ಕರ್ನಾಟಕದ ಬರಗಾಲ ಅಳಿಸಲೆಂದು ಸರ್ಕಾರ ಕೃಷ್ಣಾ ನದಿಗೆ ಆಲಮಟ್ಟಿಯಲ್ಲಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ ಹಾಗೂ ನಾರಾಯಣಪುರದಲ್ಲಿ ಬಸವ ಸಾಗರ ಜಕಾಶಯಗಳನ್ನು ನಿರ್ಮಿಸಿದೆ. 2019ರ ಜುಲೈ 20ರಂದು ಆಗಿನ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಯುಕೆಪಿ ನೀರಾವರಿ ಸಲಹಾಸಮಿತಿ ಸಭೆಯಲ್ಲಿ ಮುಂಗಾರು ಹಂಗಾಮಿಗಾಗಿ ರೈತರ ಜಮೀನಿಗೆ ನ. 16ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು.

ಅದರನ್ವಯ ನ. 16ರಿಂದ ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ 2019-2020ನೇ ಸಾಲಿನ ಹಿಂಗಾರು ಹಂಗಾಮಿಗೆ ಎಷ್ಟು ದಿನಗಳವರೆಗೆ ರೈತರ ಜಮೀನಿಗೆ ನೀರು ಪೂರೈಸಲಾಗುತ್ತದೆ ಎನ್ನುವುದು ರೈತರ ಜಿಜ್ಞಾಸೆಗೆ ಕಾರಣವಾಗಿದೆ.

ರಚನೆಯಾಗದ ಸಮಿತಿ: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಶಿವಾನಂದ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿಗೆ ನೀರು ಕೊಡುವ ಕುರಿತು ತೀರ್ಮಾನಿಸಿತ್ತು. ನಂತರ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಶತದಿನಗಳನ್ನು ಪೂರೈಸಿದ್ದರೂ ಕೂಡ ಇನ್ನೂವರೆಗೆ ಯುಕೆಪಿಯ ಐಸಿಸಿ ಸಮಿತಿಯನ್ನು ರಚನೆ ಮಾಡಿಲ್ಲ. ಜಲಾಶಯಗಳ ಕಾಲುವೆಗೆ ನೀರು ಹರಿಸಲು 2013ರವರೆಗೆ ಕೆಬಿಜೆಎನ್ನೆಲ್‌ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಧಿಕಾರವಿಲ್ಲದ ಪ್ರಮುಖರುಗಳು ಸಭೆ ಸದಸ್ಯರಾಗಿದ್ದುಕೊಂಡು ಸಭೆ ನಡೆಸಲಾಗುತ್ತಿತ್ತು.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ನಂತರ ಜಲಾಶಯ ವ್ಯಾಪ್ತಿಯ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್‌.ಆರ್‌. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಫಲಾನುಭವಿ ಜಿಲ್ಲೆಗಳ ಚುನಾಯಿತ ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು, ಜಿಪಂ ಅಧ್ಯಕ್ಷರುಗಳು, ಎಲ್ಲ ಜಿಲ್ಲೆಗಳ ಜಿಲ್ಲಾ ಧಿಕಾರಿಗಳು ಹಾಗೂ ಸಂಬಂಧಿಸಿದ ಎಲ್ಲ ಇಲಾಖೆಗಳ ಮುಖ್ಯಸ್ಥರುಗಳು ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು.

Advertisement

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ಜಿಲ್ಲಾ ಉಸ್ತುವಾರಿಗಳಾಗಿದ್ದ ಎಸ್‌. ಆರ್‌. ಪಾಟೀಲ, ಎಚ್‌.ವೈ. ಮೇಟಿ, ಉಮಾಶ್ರೀ, ಆರ್‌.ಬಿ. ತಿಮ್ಮಾಪುರ ಅವರು ಐಸಿಸಿಯ ಅಧ್ಯಕ್ಷರುಗಳಾಗಿ ಫಲಾನುಭವಿ ಜಿಲ್ಲೆಗಳ ಜನಪ್ರತಿನಿಧಿಗಳು ಸದಸ್ಯರಾಗಿದ್ದರು.

ಮುಂದುವರಿದ ಒಳಹರಿವು: 2000ನೇ ಸಾಲಿನಿಂದ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸಲು ಆರಂಭಿಸಿದಂದಿನಿಂದ ಇಲ್ಲಿವರೆಗೆ ಸಾಮಾನ್ಯವಾಗಿ ಸೆಪ್ಟೆಂಬರ್‌ ತಿಂಗಳವರೆಗೆ ಒಳ ಹರಿವಿರುತ್ತಿತ್ತಾದರೂ 2009ರಲ್ಲಿ ಅಕ್ಟೋಬರ್‌ 15ರವರೆಗೆ ಒಳ ಹರಿವಿತ್ತು. ಆದರೆ ಈ ವರ್ಷ ನವೆಂಬರ್‌ ತಿಂಗಳಿನಲ್ಲಿಯೂ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ವಿಶೇಷವಾಗಿದೆ.

ಸೋಮವಾರ 519.6 ಮೀ. ಗರಿಷ್ಠ ಎತ್ತರದಲ್ಲಿ 123.081 ಟಿಎಂಸಿ ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 123.081 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದರಲ್ಲಿ ಕುಡಿಯುವ ನೀರು ಹಾಗೂ ಜಲಚರಗಳಿಗೆ ನೀರನ್ನು ಮೀಸಲಿಟ್ಟು ಇನ್ನುಳಿದ 105.461 ಟಿಎಂಸಿ ಅಡಿ ನೀರನ್ನು ಹಾಗೂ 492.2 ಮೀ. ಗರಿಷ್ಠ ಎತ್ತರದಲ್ಲಿ 33.31 ಟಿಎಮ್‌ಸಿ ಸಂಗ್ರಹ ಸಾಮರ್ಥ್ಯದ ನಾರಾಯಣಪುರ ಜಲಾಶಯದಲ್ಲಿ 33.31 ಟಿಎಮ್‌ಸಿ ಅಡಿ ಸಂಗ್ರಹವಾಗಿದ್ದು ಅದರಲ್ಲಿ ಕುಡಿಯುವ ನೀರು ಹಾಗೂ ಜಲಚರಗಳಾಗಿ ಮೀಸಲಿರುವ ನೀರನ್ನು ಹೊರತುಪಡಿಸಿ 18.55 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಬಹುದಾಗಿದೆ.

ಎರಡೂ ಜಲಾಶಯಗಳಲ್ಲಿ ಲಭ್ಯವಿರುವ 124 ಟಿಎಂಸಿ ಅಡಿ ನೀರಿನಲ್ಲಿ ಜೂನ್‌ 2020ರವರೆಗೆ 5 ಜಿಲ್ಲೆಗಳ ಜನತೆಯ ಕುಡಿಯುವ ನೀರು, ಭಾಷ್ಪೀಭವನ ವಿವಿಧ ಕೈಗಾರಿಕೆಗಳಿಗೆ ಸೇರಿದಂತೆ ತುರ್ತು ಬಳಕೆಗಾಗಿ 44 ಟಿಎಂಸಿ ಅಡಿ ನೀರನ್ನು ಅವಳಿ ಜಲಾಶಯಗಳಲ್ಲಿ ಸಂಗ್ರಹಿಸಿಕೊಂಡು ಇನ್ನುಳಿದ 80 ಟಿಎಂಸಿಅಡಿ ನೀರನ್ನು ರೈತರ ಜಮೀನಿಗೆ ಹರಿಸಬಹುದಾಗಿದೆ. ಆದರೆ ಅವಳಿ ಜಲಾಶಯಗಳ ವ್ಯಾಪ್ತಿಯ ಈಗ ಚಾಲ್ತಿಯಲ್ಲಿರುವ ಎಲ್ಲ ಕಾಲುವೆಗಳಿಗೆ ನಿತ್ಯ ಸುಮಾರು 1.22ಟಿಎಮ್‌ಸಿ ಅಡಿ ನೀರು ಬೇಕಾಗುತ್ತದೆ ಇದರಿಂದ ಅಂದಾಜು 70 ದಿನಗಳವರೆಗೆ ನಿರಂತರವಾಗಿ ನೀರು ಹರಿಸಬಹುದಾಗಿದೆ ಎಂದು ಜಲಾಶಯದ ಮೂಲಗಳಿಂದ ತಿಳಿದು ಬಂದಿದೆ.

120ದಿನಕ್ಕೆ ನೀರು: ಈಗಾಗಲೇ ನೆರೆಹಾವಳಿ ಹಾಗೂ ಬರದಿಂದ ತೊಂದರೆಗೀಡಾಗಿರುವ ರೈತರ ಜಮೀನಿನಲ್ಲಿ ಬೆಳೆ ಬರಬೇಕಾದರೆ ಕನಿಷ್ಠ 4 ತಿಂಗಳಾದರೂ ಬೇಕು. ಈಗ ಲಭ್ಯವಿರುವ ನೀರಿನಲ್ಲಿ ವಾರಾಬಂಧಿ ಪದ್ಧತಿ ಅನುಸರಿಸಿಯಾದರೂ ಬೆಳೆ ಬರುವವರೆಗೆ ನೀರು ಕೊಡಬೇಕು ಎನ್ನುತ್ತಾರೆ ಪಿಕೆಪಿಎಸ್‌ ಬ್ಯಾಂಕಿನ ಅಧ್ಯಕ್ಷ ಶಾಂತಪ್ಪ ಮನಗೂಳಿ.

 

-ಶಂಕರ ಜಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next