ಸಿರುಗುಪ್ಪ: ತಾಲೂಕಿನಲ್ಲಿ ಸುಮಾರು ಆರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಒಣ ಮೆಣಸಿನಕಾಯಿ ಬೆಳೆದಿರುವ ರೈತರಿಗೆ ಸಂತಸದ ಇಮ್ಮುಡಿಯಾಗಿದೆ. ಇಳುವರಿಯೂ ಉತ್ತಮವಾಗಿದ್ದು, ದರವೂ ಅಧಿಕವಿದ್ದು,ಬಂಪರ್ ಬೆಲೆ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ.
ಹೆಚ್ಚಿನ ಮಳೆಯಿಂದ ತಾಲೂಕಿನಲ್ಲಿ ಒಣ ಮೆಣಸಿನಕಾಯಿ ಬೆಳೆದ ರೈತರಿಗೆ ಆರಂಭದಲ್ಲಿ ಹಿನ್ನಡೆ ಉಂಟಾಗಿತ್ತು. ಅಲ್ಲಲ್ಲಿ ಗಿಡಗಳು ಒಣಗಿ ಬೆಳೆಗೆ ವಿವಿಧ ರೀತಿಯ ರೋಗಗಳು ಕಾಣಿಸಿಕೊಂಡಿದ್ದವು. ಬೆಳವಣಿಗೆಯೂ ಸಹ ಸರಿಯಾಗಿ ಆಗಿರಲಿಲ್ಲ, ಆದರೂ ಮೆಣಸಿನಕಾಯಿ ಬೆಳೆಯ ಬೆಳವಣಿಗೆಗೆ ವಾತಾವರಣ ಈ ಬಾರಿ ಅನುಕೂಲ ಮಾಡಿಕೊಟ್ಟಿತ್ತು. ತುಂಗಭದ್ರಾ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿದ್ದರಿಂದ ರೈತರು ಹೊಲದಲ್ಲಿ ಮೆಣಸಿನಕಾಯಿ ಬೆಳೆಯು ನಳನಳಿಸಿತು. ಇದರಿಂದಾಗಿ ಬ್ಯಾಡಗಿ ಮೆಣಸಿನಕಾಯಿ ಬೆಲೆಯು 25ರಿಂದ 27ಸಾವಿರ ರೂ.ದವರೆಗೆ, ಸಿಜೆಂಟಾ ಮತ್ತು ಗುಂಟೂರು ಮೆಣಸಿನಕಾಯಿ 10ರಿಂದ 17ಸಾವಿರದ ರೂ.ವರೆಗೆ ಮಾರಾಟವಾಗುತ್ತಿತ್ತು.
ಆದರೆ ಒಂದು ತಿಂಗಳ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಸೊಂಕಿನಿಂದ ವಿದೇಶಗಳಿಗೆ ರಫ್ತಾಗುತ್ತಿದ್ದ ಒಣ ಮೆಣಸಿನಕಾಯಿ ವಹಿವಾಟು ಸ್ಥಗಿತಗೊಂಡಿತ್ತು.ಇದರಿಂದಾಗಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿಗೆ ದರ ಕುಸಿದಿದ್ದಲ್ಲದೆ, ಬೇಡಿಕೆ ಕಡಿಮೆಯಾಗಿತ್ತು, ಇದರಿಂದಾಗಿ ಮೆಣಸಿನ ಕಾಯಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದರು.
ಆದರೆ ಕಳೆದ 15ದಿನಗಳಿಂದ ಒಣ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರಕುತ್ತಿದ್ದು, ಸದ್ಯ ಬ್ಯಾಡಗಿ ಮೆಣಸಿನಕಾಯಿ ಒಂದು ಕ್ವಿಂಟಲ್‌ಗೆ 28ರಿಂದ 30ಸಾವಿರದ ವರೆಗೆ ಮತ್ತು ಸಿಜೆಂಟಾ, ಗುಂಟೂರು ಮೆಣಸಿನಕಾಯಿಗೆ ಕ್ವಿಂಟಲ್‌ಗೆ 13ಸಾವಿರದಿಂದ 18ಸಾವಿರದ ವರೆಗೆ ಮಾರಾಟವಾಗುತ್ತಿದ್ದು, ಒಂದು ಎಕರೆಗೆ ಬ್ಯಾಡಗಿ ತಳಿಯ ಮೆಣಸಿನಕಾಯಿ 10ರಿಂದ 12ಕ್ವಿಂಟಲ್, ಸೀಜೆಂಟಾ, ಗುಂಟೂರು ಮೆಣಸಿನಕಾಯಿ 18ರಿಂದ 23ಕ್ವಿಂಟಲ್ ವರೆಗೆ ಇಳುವರಿ ಬರುತ್ತಿರುವುದು ರೈತರಲ್ಲಿ ಸಂತಸ ಹೆಚ್ಚಿಸಿದೆ.
ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದ ರೈತರಿಗೆ ಬ್ಯಾಡಗಿ ಮಾರುಕಟ್ಟೆಯೇ ಮುಖ್ಯ ವ್ಯಾಪಾರ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯ ರೈತರು ತಾವು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಬ್ಯಾಡಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ವ್ಯಾಪಾರಮುಗಿಯುತ್ತಿದ್ದಂತೆ ರೈತರ ಕೈಗೆ ಹಣ ನೀಡಲಾಗುತ್ತದೆ ಎನ್ನುವ ಕಾರಣಕ್ಕೆ ಹೆಚ್ಚಿನ ರೈತರು ಬ್ಯಾಡಗಿ ಮಾರುಕಟ್ಟೆಗೆ ಬರುತ್ತಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ, ಎಲ್‌ಎಲ್‌ಸಿ ಕಾಲುವೆ,ಬೋರ್‌ವೆಲ್, ಹಳ್ಳ, ಹಗರಿ, ನದಿಯ ನೀರಿನ ಮೂಲ ಬಳಸಿಕೊಂಡು ಆರುವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ ಮತ್ತು ಸಿಜೆಂಟಾ, ಗುಂಟೂರು ಮೆಣಸಿನಕಾಯಿಯನ್ನು ಬೆಳೆದಿದ್ದಾರೆ.
–ವಿಶ್ವನಾಥ್, ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ
-ಆರ್.ಬಸವರೆಡ್ಡಿ ಕರೂರು