Advertisement

ಕೃಷಿಕರ ಸಂಕಷ್ಟ: ಪಿವಿಸಿ ಪೈಪ್‌ ಧಾರಣೆ ಗಗನಕ್ಕೆ

01:12 AM Dec 03, 2020 | mahesh |

ಪುತ್ತೂರು: ಚೀನದಿಂದ ಕಚ್ಚಾ ವಸ್ತು ಆಮದು ನಿಷೇಧ, ಗರಿಷ್ಠ ಮಟ್ಟದಲ್ಲಿ ಹೆಚ್ಚಿದ ಬೇಡಿಕೆಗಳಿಂದಾಗಿ ಕೃಷಿ ನೀರಾವರಿಗೆ ಉಪಯೋಗಿಸುವ ಪಿವಿಸಿ ಪೈಪ್‌ಗಳ ಧಾರಣೆ ಗಗನಕ್ಕೇರಿದೆ. ಒಂದು ತಿಂಗಳಿನಿಂದ ಧಾರಣೆ ನಿರಂತರ ಏರುತ್ತಿದ್ದು, ಇಳಿಕೆಯಾಗುವ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಇದರಿಂದ ಕೃಷಿಕರಿಗೆ ನಿರ್ವಹಣೆ ವೆಚ್ಚದ ಹೊರೆ ಉಂಟಾಗಿದೆ.

Advertisement

ಶೇ. 30ರಷ್ಟು ತುಟ್ಟಿ
ಕೃಷಿ ನೀರಾವರಿಗೆ ಪಿವಿಸಿ ಪೈಪ್‌, ಫಿಟ್ಟಿಂಗ್‌ಗಳು ಅನಿವಾರ್ಯ. ಬೇಸಗೆಯಲ್ಲಂತೂ ಅದರ ಅಗತ್ಯ ಅತೀ ಹೆಚ್ಚು. ಈ ಬಾರಿ ಹೊಸದಾಗಿ ಪೈಪ್‌ಲೈನ್‌ ಕೆಲಸ ನಿರ್ವಹಿಸು ವವರ ಜತೆಗೆ ಪೈಪ್‌ ಬಳಸುವ ಎಲ್ಲ ಕೆಲಸ ಕಾರ್ಯಗಳಿಗೆ ಧಾರಣೆಯ ಬಿಸಿ ತಟ್ಟಿದೆ. ಎಲ್ಲ ಅಳತೆಯ ಪೈಪುಗಳ ಬೆಲೆ ಶೇ. 30ರಿಂದ 40ರಷ್ಟು ಹೆಚ್ಚಳ ಕಂಡಿದೆ. ಉದಾಹರಣೆಗೆ 2 ಇಂಚಿನ ಪಿವಿಸಿ ಪೈಪೊಂದಕ್ಕೆ 290ರಿಂದ 300 ರೂ. ಇತ್ತು. ಈಗ 400ರಿಂದ 410 ರೂ.ಗೆ ಜಿಗಿದಿದೆ. ಇನ್ನೆರಡು ದಿನಗಳಲ್ಲಿ ಶೇ. 10ರಷ್ಟು ಹೆಚ್ಚಳವಾಗುವ ಸೂಚನೆಯಿದ್ದು, 430 ರೂ. ತನಕ ಹೋಗುವ ಸಾಧ್ಯತೆ ಇದೆ ಎನ್ನುತ್ತವೆ ಮಾರುಕಟ್ಟೆ ಮೂಲಗಳು.

ಕಚ್ಚಾ ವಸ್ತು ಕೊರತೆ
ಪಿವಿಸಿ ಪೈಪ್‌ ಮತ್ತು ಫಿಟ್ಟಿಂಗ್‌ ತಯಾರಿಗೆ ಬಳಸುವ ಕಚ್ಚಾ ವಸ್ತು ಪಾಲಿವಿನೈಲ್‌ ಕ್ಲೋರೈಡ್‌ ಪುಡಿ ವಿದೇಶಗಳಿಂದ ಆಮದು ಆಗುತ್ತಿತ್ತು. ಈಗ ಇದರ ಕೊರತೆಯಿಂದ ಪೈಪ್‌ ಮತ್ತು ಫಿಟ್ಟಿಂಗ್‌ಗಳ ದರ ಹೆಚ್ಚಳವಾಗಿದೆ ಎನ್ನಲಾಗಿದೆ. ಕಚ್ಚಾವಸ್ತುಗಳಿಗೆ ಚೀನವನ್ನು ಅವಲಂಬಿಸಲಾಗಿತ್ತು. ಲಾಕ್‌ಡೌನ್‌ ಮತ್ತು ಗಡಿ ವಿವಾದದ ಬಳಿಕ ಅಲ್ಲಿಂದ ಪೂರೈಕೆ ಸ್ಥಗಿತಗೊಂಡಿದೆ. ರಿಲಯನ್ಸ್‌ ಸಂಸ್ಥೆ ಈ ಕಚ್ಚಾ ವಸ್ತು ಆಮದು ಮಾಡಿ ದೇಶದ ವಿವಿಧ ಭಾಗಗಳ ಉತ್ಪಾದನ ಸಂಸ್ಥೆಗಳಿಗೆ ಪೂರೈಸುತ್ತಿದೆ. ಈಗ ಜರ್ಮನಿಯಿಂದ ಕಚ್ಚಾ ವಸ್ತು ಆಮದಾಗುತ್ತಿದ್ದರೂ ಇಲ್ಲಿನ ಬೇಡಿಕೆಯಷ್ಟು ಸಿಗುತ್ತಿಲ್ಲವಾದ್ದರಿಂದ ಉತ್ಪಾದನೆಯ ಕೊರತೆ ಕಂಡು ಬಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪೈಪ್‌ ದಾಸ್ತಾನು ಕಡಿಮೆಯಿದ್ದು, ಬೇಡಿಕೆ ಹೆಚ್ಚಿದ್ದರಿಂದ ಧಾರಣೆ ಏರಿಕೆ ಆಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಡಿಕೆ ಬೆಳೆ ಹೆಚ್ಚಳ; ನಿರ್ವಹಣೆ ಖರ್ಚಿನ ಬರೆ
ಒಂದೆಡೆ ಅಡಿಕೆ ಧಾರಣೆ ಏರಿಕೆ, ಇನ್ನೊಂದೆಡೆ ಲಾಕ್‌ಡೌನ್‌ ಪರಿಣಾಮ ನಗರಗಳಲ್ಲಿದ್ದ ಜನರು ಉದ್ಯೋಗ ತೊರೆದು ಊರಿಗೆ ಮರಳಿದ್ದು, ಅಡಿಕೆ ಮತ್ತು ಇತರ ಬೆಳೆ ಬೆಳೆಸಲು ಮುಂದಾಗಿದ್ದಾರೆ. ಅಡಿಕೆ ಕೃಷಿ ಶೇ. 15ರಿಂದ 20ರಷ್ಟು ಹೆಚ್ಚಳವಾಗಿದೆ. ಪೈಪ್‌ಗೆ ಬೇಡಿಕೆ ಹೆಚ್ಚಲು ಇದೂ ಒಂದು ಕಾರಣ.

ಧಾರಣೆ ಇಳಿಕೆಗೆ ತಂತ್ರ
ಕಚ್ಚಾ ವಸ್ತುಗಳ ಆಮದು ಕೊರತೆಯನ್ನೇ ನೆಪವಾಗಿಟ್ಟುಕೊಂಡು ಪ್ರಮುಖ ಕಚ್ಚಾವಸ್ತು ಸಾಗಾಣಿಕೆ ಕಂಪೆನಿ ಬೇಕಾಬಿಟ್ಟಿಯಾಗಿ ದರ ಏರಿಸುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಇದರಿಂದ ಉತ್ಪಾದನ ಸಂಸ್ಥೆಗಳು ಕಚ್ಚಾ ವಸ್ತು ಖರೀದಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ. ಇದರಿಂದ ಕಚ್ಚಾ ವಸ್ತು ಸಂಗ್ರಹ ಹೆಚ್ಚಳಗೊಂಡು ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗುವ ಸಾಧ್ಯತೆ ಇದೆ. ತನ್ಮೂಲಕ ಉತ್ಪಾದನ ವೆಚ್ಚ ಇಳಿಮುಖಗೊಂಡು ಮಾರುಕಟ್ಟೆ ಧಾರಣೆ ಇಳಿಕೆ ಆಗುವ ನಿರೀಕ್ಷೆ ಹೊಂದಲಾಗಿದೆ.

Advertisement

ಕೃಷಿತೋಟಕ್ಕೆ ನೀರಿನ ಪೂರೈಕೆಗೆ ಬಳಲ್ಪಡುವ ಪಿವಿಸಿ ಪೈಪುಗಳ ಧಾರಣೆ ಏರಿಕೆಗೆ ಕಾರಣಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುವೆ. ಸರಕಾರದ ಮೂಲಕ ನಿಯಂತ್ರಣ ಪೂರಕವಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

ಕಳೆದ 23 ವರ್ಷಗಳಿಂದ ಪೈಪ್‌ ಮಾರಾಟ ಮಾಡುತ್ತಿದ್ದೇನೆ. ಆದರೆ ಇಷ್ಟು ಬೇಡಿಕೆ ಕಂಡುಬಂದಿರುವುದು ಇದೇ ಮೊದಲು.
– ಸುಬ್ರಹ್ಮಣ್ಯ ಕೆ., ಪುತ್ತೂರು ನಗರದ ವರ್ತಕ

ಪಿವಿಸಿ ಪೈಪ್‌ ಬೆಲೆ ದುಬಾರಿಯಾಗಿದೆ. ಈಗಿರುವುದು ಅತ್ಯಧಿಕ ಎನ್ನಬಹುದು. ಅಡಿಕೆ ಕೃಷಿಯತ್ತ ಆಸಕ್ತಿ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ದಾರಣೆ ಏರಿಕೆ ಕಂಡಿದೆ. ಧಾರಣೆ ನಿಯಂತ್ರಣಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು.
– ಶ್ರೀರಾಮ, ಅಡಿಕೆ ಕೃಷಿಕ, ಪುತ್ತೂರು

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next