ಶಿರಹಟ್ಟಿ: ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಸ್ವಲ್ಪ ತಡವಾಗಿ ಸುರಿಯುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಬಿತ್ತನೆ ಕಾರ್ಯಗಳು ಕುಂಟುತ್ತಾ ಸಾಗಿವೆ.
ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಪ್ರಸ್ತುತ ಮುಂಗಾರು ಮಳೆಯು ಬಿತ್ತನೆ ಅವಧಿ ಸಂಪೂರ್ಣ ಮುಗಿದ ಮೇಲೆ ಬರುತ್ತಿದೆ. ಇದರಿಂದ ತಾಲೂಕಿನಲ್ಲಿ ಶೇ.30.18ರಷ್ಟು ಮಾತ್ರ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಆದರೆ ಕಳೆದ 10 ದಿನಗಳಿಂದ ತಾಲೂಕಿನ್ಯಾದಂತ ಉತ್ತಮ ಮಳೆ ಬರುತ್ತಿದೆ. ಇದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ಮಳೆರಾಯ 2-3 ದಿನಗಳ ಕಾಲ ವಿರಾಮ ನೀಡಿದರೆ ಬಿತ್ತನೆ ಕಾರ್ಯಕ್ಕೆ ಅನುಕೂಲ ಆಗುತ್ತೆ ಎಂಬುದು ರೈತರ ಅನಸಿಕೆ.
ಬಿತ್ತನೆಗೆ ಹಿನ್ನಡೆ: ಕೃಷಿ ಇಲಾಖೆಯ ಪ್ರಕಾರ ಪ್ರಸಕ್ತ ವರ್ಷ ಮೇ, ಜೂನ್ ಹಾಗೂ ಜುಲೈ ಮೊದಲ ವಾರ 227 ಮಿ.ಮೀ ಮಳೆ ಬಂದಿದ್ದರೆ, ಕೃಷಿ ಚಟುವಟಿಕೆಗಳು ಭರದಿಂದ ಸಾಗಿ ಸುಮಾರು 69600 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುತ್ತಿತ್ತು. ಆದರೆ ಸಮಯಕ್ಕೆ ಬಾರದ ಮಳೆಯಿಂದ ಬಾರದಿರುವುದರಿಂದ ಕೇವಲ 21008 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದೆ. ಶೇಂಗಾ 2200 ಹೆಕ್ಟೇರ್ ಪ್ರದೇಶ, ಹೆಸರು 4905 ಹೆಕ್ಟೇರ್, ಗೋವಿನ ಜೋಳ 4075 ಹೇಕ್ಟರ್, ಈರುಳ್ಳಿ 505 ಹೆಕ್ಟೇರ್, ಬಿಟಿ ಹತ್ತಿ 9230 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಇನ್ನುಳಿದ ಪ್ರದೇಶಲ್ಲಿ ಕಬ್ಬು, ಎಳ್ಳು, ತರಕಾರಿ, ತೊಗರೆ, ಉದ್ದು, ಹೈ ಜೋಳ, ಅವರೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತದೆ.
ಬೀಜ ಮಾರಾಟ ಕುಸಿತ: ಮುಂಗಾರು ಮಳೆಯು ಬಿತ್ತನೆ ಅವಧಿ ಮುಗಿದ ಮೇಲೆ ಬಂದಿದ್ದರಿಂದ ಹೆಸರು, ಹೈಬ್ರೀಡ್ ಜೋಳ, ಗೋವಿನ ಜೋಳ, ಕಂಟಿ ಶೇಂಗಾ ಬಿತ್ತನೆ ಪ್ರಮಾಣದಲ್ಲಿ ಕುಂಠಿತಗೊಂಡಿದೆ. ಹೀಗಾಗಿ ಬೀಜ ಗೊಬ್ಬರ ಮಾರಾಟದಲ್ಲೂ ಇಳಿಕೆಯಾಗಿದೆ.
ಬೀಜ-ಗೊಬ್ಬರ ಲಭ್ಯ: ರೈತರ ಬೇಡಿಕೆಗೆ ಅನುಗುಣವಾಗಿ ಹೆಸರಿನ ಬೀಜ 150 ಕ್ವಿಂಟಲ್ ಸಂಗ್ರಹ, ತೋಗರಿ 45 ಕ್ವಿಂಟಲ್, ಗೋವಿನ ಜೋಳ 20 ಕ್ವಿಂಟಲ್ ಬೀಜಗಳು ಸಂಗ್ರಹವಿದೆ. ಅಲ್ಲದೇ ಎರೆಗೊಬ್ಬರ 55 ಪಾಕೇಟ್, ಹೈಡ್ರೋಮ್ 42 ಪಾಕೇಟ್, ಸಿಟಿ ಸ್ಯಾಂಪೋಸ್ 40 ಪಾಕೇಟ್, ಟ್ರಾಯಡ್ರೋಂ 42 ಪಾಕೇಟ್ ಗೊಬ್ಬರ ರೈತ ಸಂಪರ್ಕ ಕೇಂದ್ರದಲ್ಲಿ ಸಂಗ್ರಹವಿದೆ. ಖಾಸಗಿ ಮಾರುಕಟ್ಟೆಯಲ್ಲೂ ಸಹ ಹೆಚ್ಚಿನ ಬೀಜ ಗೊಬ್ಬರ ಲಭ್ಯವಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
•ಪ್ರಕಾಶ.ಶ.ಮೇಟಿ