Advertisement

ರೈತರ ವಂಚನೆಗೆ ನಡೆದಿದೆ ಮಸಲತ್ತು!

01:10 PM May 20, 2017 | |

ದಾವಣಗೆರೆ: ಒಂದು ಕಡೆ ರೈತರು ಹೊಲ ಹಸನು ಮಾಡಿಕೊಂಡು ಉತ್ತಮ ಮಳೆ-ಬೆಳೆ ನಿರೀಕ್ಷೆಯಲ್ಲಿದ್ದರೆ, ಅವರನ್ನು ವಂಚಿಸಲು ಈಗಾಗಲೇ ಮಸಲತ್ತು ಆರಂಭ ಆಗಿದೆ! ಶುಕ್ರವಾರ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. 

Advertisement

ಎಲೆಬೇತೂರು ಕ್ಷೇತ್ರದ ಸದಸ್ಯ ಸಂಗಣ್ಣಗೌಡ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಕಳೆದ 3 ವರ್ಷಗಳಿಂದ ಮಳೆ ಇಲ್ಲ. ಭತ್ತ ಸೇರಿದಂತೆ ಅನೇಕ ಬೀಜದ ದಾಸ್ತಾನು ಹಾಗೆಯೇ ಉಳಿದಿದೆ. ಇದರಿಂದ ನಷ್ಟಕ್ಕೆ ತುತ್ತಾಗಿರುವ ಬೀಜ ಕಂಪನಿಗಳು ನಷ್ಟ ರೈತರ ಮೇಲೆ ಹೊರಿಸಲು ಸಜ್ಜಾಗಿವೆ. ಅವಧಿ ಮೀರಿದ ಬೀಜಗಳನ್ನು ಹೊಸ ಪ್ಯಾಕೇಟ್‌ನ ಬೀಜದೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿವೆ.

ಈ ಕುರಿತುಕ್ರಮ ವಹಿಸಿ ಎಂದರು. ಬೀಜಗಳ ಮಿಶ್ರಣ ಹಲವು ಹಂತದಲ್ಲಿ ನಡೆಯುತ್ತಿದೆ. ಹೈದರಾಬಾದ್‌ನ ಕಂಪನಿಯಲ್ಲೇ ನಡೆಯುತ್ತಿರುವ ಕುರಿತು ಮಾಹಿತಿ ಇದೆ. ಇಲಾಖೆಯಿಂದ ಈ ಬೀಜ ಮಾರಾಟ ಆಗದಂತೆ ತಡೆಯಲು ಏನು ಕ್ರಮ ವಹಿಸುತೀ¤ರಾ? ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ಅವರನ್ನ ಕೇಳಿದರು. 

ಇದಕ್ಕೆ ದನಿಗೂಡಿಸಿದ ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಎಲ್‌.ಎಸ್‌. ಪ್ರಭುದೇವ್‌, ಮೊದಲೇ ರೈತರು ಮೂರು ವರ್ಷದ ಬರಗಾಲದಿಂದ ತತ್ತರಿಸಿದ್ದಾರೆ. ಈ ಬಾರಿ ಒಂದಿಷ್ಟು ಮಳೆಯಾದರೆ, ಉತ್ತಮ ಬೆಳೆ ನಿರೀಕ್ಷೆ ಹೊಂದಿದ್ದು, ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದರು. 

ಮತ್ತೆ ವಿಷಯ ಮುಂದುವರಿಸಿದ ಸಂಗಣ್ಣ ಗೌಡ, ಇದಲ್ಲದೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಮುಂತಾದ  ಕಡೆಗಳಿಂದ ಬಿಡಿ ಬೀಜ(ನಕಲಿ) ಮಾರಾಟ ಮಾಡಲಾಗುತ್ತದೆ. ಪ್ಯಾಕ್‌ಮಾಡಿ ಮಾರಿದರೆ ಹೆಚ್ಚಿನ ಬೆಲೆ ಕೊಡಬೇಕಾಗುತ್ತದೆ ಎಂಬುದಾಗಿ ರೈತರನ್ನು ನಂಬಿಸಿ, ಮಾರಾಟ ಮಾಡಲಾಗುತ್ತದೆ.

Advertisement

ಇಲಾಖೆ ಅಧಿಕಾರಿಗಳು ಇದರ ಮೇಲೆ ಸಹ ನಿಗಾ ಇಡಬೇಕು ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಉಮೇಶ್‌, ಎಲ್ಲಾ ಬೀಜಗಳ ಸ್ಯಾಂಪಲ್‌ ಸಂಗ್ರಹಿಸಿ, ಪರೀಕ್ಷೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಕಳಪೆ ಬೀಜ ಮಾರಾಟ ಆಗದಂತೆ ಕ್ರಮ ವಹಿಸುತ್ತೇವೆ ಎಂದರು. 

ಇನ್ನು ಹಾವೇರಿ ಜಿಲ್ಲೆಯಿಂದ ಬರುವ ಲೂಸ್‌ ಬೀಜ ಮಾರಾಟ ತಡೆಗೆ ಕಳೆದ ವರ್ಷದಂತೆ ಈ ವರ್ಷ ಸಹ ದಿಢೀರ್‌ ದಾಳಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದಾಗ, ಮಧ್ಯ ಪ್ರವೇಶಿಸಿದ ಇಒ ಪ್ರಭುದೇವ್‌, ಪೊಲೀಸ್‌ ಇಲಾಖೆ ಸಹಾಯ ಪಡೆದು, ಈ ಹಿಂದೆ ಇಂತಹ ಬೀಜ ಮಾರಾಟದಲ್ಲಿ ತೊಡಗಿದ್ದ ಅಸಾಮಿಗಳನ್ನು ಪತ್ತೆಮಾಡಿ, ಇದರಿಂದ ಸುಲಭವಾಗಿ ನಕಲಿ ಬೀಜ ಮಾರಾಟ ತಡೆಯಬಹುದು ಎಂದರು. 

ಇನ್ನೋವ ಸದಸ್ಯ ಮುಕುಂದ್‌ ಮಾತನಾಡಿ, ತಾಲ್ಲೂಕಿನ ಕೆಲ ಕಡೆಗಳಲ್ಲಿ ಮಾರಾಟ ಮಾಡಿರುವ ಭತ್ತದ ಬೀಜ ಶೇ.15ರಷ್ಟು ಇಳುವರಿ ಕಡಮೆಯಾಗಲು ಕಾರಣವಾಗಿದೆ. ಇದಕ್ಕೆ ಕಾರಣ ಬೀಜದ ಪ್ಯಾಕೆಟ್‌ನಲ್ಲಿ ಕಳಪೆ ಮಿಶ್ರಣ ಆಗಿದೆ ಎಂದು ವಿಜ್ಞಾನಿಗಳು ವರದಿ ನೀಡಿದ್ದಾರೆ. ನಷ್ಟಕ್ಕೆ ತುತ್ತಾದ ರೈತರಿಗೆ ಕಂಪನಿಗಳಿಂದ ಪರಿಹಾರ ಕೊಡಿಸಿ ಎಂದರು. 

ಅರಣ್ಯ ಇಲಾಖೆ ಪ್ರಗತಿ ಪರಿಶೀಲನೆ ವೇಳೆ, ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನೆಟ್ಟು ಕಾಡು ಬೆಳೆಸಲು ಕ್ರಮ ವಹಿಸಿ. ಉದ್ಯೋಗ ಖಾತ್ರಿ ಯೋಜನೆ ಅಡಿ ಜನರು ಈ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಇದನ್ನು ಸದುಪಯೋಗ ಪಡೆಸಿಕೊಳ್ಳಿ ಎಂದರು. ಆಗ ಸಂಗಣ್ಣ ಗೌಡ, ನೀವು ಹಾಕಿದ ಸಸಿಗಳ ಲೆಕ್ಕಾಚಾರ ಕೊಡಿ.

ಮುಂದಿನ ಈ ಹಿಂದಿನ ವರ್ಷ ಹಾಕಿದ ಸಸಿಗಳಲ್ಲಿ ಎಷ್ಟು ಸಸಿ ಉಳಿದಿವೆ ಎಂಬುದರ ಸಂಪೂರ್ಣ ಮಾಹಿತಿ ಕೊಡಿ ಎಂದರು. ಕುಡಿಯುವ ನೀರು ಇಲಾಖೆ ಪ್ರಗತಿ ಪರಿಶೀಲನೆ ವೇಳೆ ತಾಲ್ಲೂಕು ಸಹಾಯಕ ಕಾರ್ಯಪಾಲಕ ಅಭಿಯಂತರ ಪರಮೇಶ್ವರ್‌ ಮಾತನಾಡಿ, ಹಾಲಿ ತಾಲ್ಲೂಕಿನ 21 ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 7 ಹಳ್ಳಿಗಳಿಗೆ ಖಾಸಗಿ ಬೋರ್‌ವೆಲ್‌ ಮೂಲಕ ನೀರು ಕೊಡಲಾಗುತ್ತಿದೆ.

ಬೋರ್‌ವೆಲ್‌ ಮಾಲೀಕರಿಗೆ ತಿಂಗಳಿಗೆ 20 ಸಾವಿರ ರೂ. ನೀಡಲಾಗುತ್ತಿದ್ದು, ಸಧ್ಯ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇಲ್ಲ ಎಂದರು. ಅಧ್ಯಕ್ಷೆ ಮಮತ ಮಲ್ಲೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next