ಮುಂಬೈ: “ಈ ವರ್ಷ ಜೂನ್ ಆರಂಭದಲ್ಲೇ ಮಳೆ ಬರಲಿದ್ದು, ಹಿಂದಿನ ಬರಗಾಲಕ್ಕೆ ಮುಕ್ತಿ ಸಿಗಲಿದೆ. ಈ ಬಾರಿ ಉತ್ತಮವಾಗಿ ವಾಡಿಕೆಯಂತೆಯೇ ಮಳೆಯಾಗಲಿದೆ”. ಇದು ಮುಂಗಾರು ಆರಂಭಕ್ಕೂ ಮುನ್ನವೇ ಭಾರತೀಯ ಹವಾಮಾನ ಇಲಾಖೆ ನೀಡುವ ಮುನ್ಸೂಚನೆ. ಆದರೆ ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ರೈತರು ಈ ಮುನ್ಸೂಚನೆ ವಿರುದ್ಧವೇ ಸಿಟ್ಟುಗೊಂಡಿದ್ದಾರೆ. ನೀವು ಸುಳ್ಳೇ ಸುಳ್ಳು ಹವಾಮಾನ ವರದಿ ನೀಡುತ್ತೀರಿ, ನೀವು ಕೀಟನಾಶಕ ಮತ್ತು ಭಿತ್ತನೆ ಬೀಜ ಮಾರುವ ಕಂಪೆನಿಗಳ ಜತೆಗೆ ಶಾಮೀಲಾಗಿ ಈ ಕೆಲಸ ಮಾಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಹವಾಮಾನ ಇಲಾಖೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ!
ಕಳೆದ ನಾಲ್ಕೈದು ವರ್ಷಗಳಿಂದ ಹವಾಮಾನ ಇಲಾಖೆ ನೀಡುತ್ತಿರುವ ಮುನ್ಸೂಚನೆ ಹೆಚ್ಚು ಕಡಿಮೆ ನಿಜವಾಗಿದ್ದು ಸುಳ್ಳು. ಆದರೆ ಮೊದಲೇ ಈ ಬಾರಿ ಸರಿಯಾಗಿ ಮಳೆ ಆಗಲ್ಲ, ಕೊರತೆ ಕಾಣಿಸಬಹುದು ಎಂದು ಹೇಳಿದ್ದರೆ ನಾವು ಹೊಲ ಉತ್ತು, ಬೀಜ ಬಿತ್ತುತ್ತಿರಲಿಲ್ಲ. ಇದನ್ನು ಬಿಟ್ಟು, ರೈತರೇ ಚಿಂತೆ ಮಾಡಬೇಡಿ, ಈ ಬಾರಿ ವಾಡಿಕೆಯಂತೆ ಚೆನ್ನಾಗಿಯೇ ಮಳೆ ಬರುತ್ತೆ ಎಂದೇಳಿ, ನಮ್ಮನ್ನು ಬೀಜ ಬಿತ್ತುವಂತೆ ಮಾಡಿ, ಕಡೆಗೆ ಮಳೆ ಬಾರದೇ ನಾವು ಆಕಾಶದತ್ತ ಮುಖ ನೋಡುವ ಹಾಗೆ ಮಾಡುತ್ತಿದೆ ಎಂಬುದೇ ರೈತರ ಸಿಟ್ಟಿಗೆ ಕಾರಣ.
ಬಿತ್ತನೆ ಬೀಜ ಮತ್ತು ಕೀಟನಾಶಕ ಕಂಪನಿಗಳ ಜತೆ ಶಾಮೀಲಾಗಿರುವ ಹವಾಮಾನ ಇಲಾಖೆ ‘ಈ ಬಾರಿ ಉತ್ತಮ ಮಳೆಯಾಗುತ್ತದೆ. ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು’ ಎಂದು ತಪ್ಪು ಮಾಹಿತಿ ನೀಡಿ ಕೃಷಿಕರನ್ನು ವಂಚಿಸಿದೆ ಎಂದು ಆರೋಪಿಸಿ ರೈತರು ಭಾರತೀಯ ಹವಾಮಾನ ಇಲಾಖೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬೀಡ್ ಜಿಲ್ಲೆಯ ಮಜಲ್ಗಾವ್ ತಾಲೂಕಿನ ದಿಂದ್ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು,
‘ಉತ್ಪಾದಕರೊಂದಿಗೆ ಶಾಮೀಲಾಗಿರುವ ಹವಾಮಾನ ಇಲಾಖೆ ‘ಮಳೆ ಬರುತ್ತದೆ’ ಎಂದು ನೀಡಿದ ಮಾಹಿತಿ ನಂಬಿ ಅಗತ್ಯ ಉತ್ಪನ್ನಗಳನ್ನು ಖರೀದಿಸಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡ ರೈತರು, ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ,’ ಎಂದು ಆರೋಪಿಸಲಾಗಿದೆ.
ಮಳೆಯೇಕೆ ಬರಲಿಲ್ಲ?: ‘ಒಂದು ವೇಳೆ ಇಲಾಖೆ ಯಾರೊಂದಿಗೂ ಶಾಮೀಲಾಗದೆ ನೈಜ ಹವಾಮಾನ ವರದಿಯನ್ನೇ ನೀಡುತ್ತಿದೆ ಎನ್ನುವುದು ನಿಜವೇ ಆಗಿದ್ದರೆ, ಜೂನ್ ತಿಂಗಳಲ್ಲಿ ಸಾಕಷ್ಟು ಮಳೆ ಬರಬೇಕಿತ್ತಲ್ಲವೇ?’ ಎಂಬುದು ರೈತರ ಪ್ರಶ್ನೆ. ‘ಇಲಾಖೆ ನೀಡಿದ ಮಾಹಿತಿ ನಂಬಿ ರೈತರು ಆಗಲೇ ಮಳೆಗಾಲದ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ ಆರಂಭದಲ್ಲಿ ಕೊಂಚ ಮಳೆಯಾದದ್ದು ಬಿಟ್ಟರೆ ನಂತರ ವರುಣನ ಸುಳಿವೇ ಇಲ್ಲ. ಆದರೆ ಇಲಾಖೆಯ ನಂಬಿ ಲಕ್ಷಾಂತರ ರೂ. ವೆಚ್ಚ ಮಾಡಿ ಅಗತ್ಯ ಉತ್ಪನ್ನಗಳನ್ನು ಖರೀದಿಸಿದ ಕೃಷಿಕರು ಈಗ ಕಂಗಾಲಾಗಿದ್ದಾರೆ. ಇಲಾಖೆ ಮುನ್ಸೂಚನೆಯಂತೆ ಮಳೆ ಬಾರದಿರುವ ಕಾರಣ ಬಿತ್ತನೆ ಕಾರ್ಯಕ್ಕೆ ಮಾಡಿಕೊಂಡಿದ್ದ ಸಿದ್ಧತೆಗಳೆಲ್ಲಾ ವ್ಯರ್ಥವಾಗಿವೆ,’ ಎನ್ನುತ್ತಾರೆ ಆನಂದಗಾವ್ ಗ್ರಾಮದ ರೈತ ಗಂಗಾಭೀಷಣ್ ತಾವರೆ. ಹವಾಮಾನ ಇಲಾಖೆ ಕೃಷಿಕರ ಬದುಕಿನೊಂದಿಗೆ ಆಟವಾಡುತ್ತಿರುವ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೂ ಪತ್ರ ಬರೆದಿರುವುದಾಗಿ ತಾವರೆ ಹಾಗೂ ಇತರ ರೈತರು ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು, ಮುಂದೇನು ಮಾಡಬೇಕೆಂಬ ಆಲೋಚನೆಯಲ್ಲಿದ್ದಾರೆ.