Advertisement

Farmers: 64 ಕೋಟಿ ಪೈಕಿ ರೈತರಿಗೆ ಸಿಕ್ಕಿದ್ದು 14 ಕೋಟಿ ಬರ ಪರಿಹಾರ!

01:39 PM Jan 27, 2024 | Team Udayavani |

ಚಿಕ್ಕಬಳ್ಳಾಪುರ: ತೀವ್ರ ಮಳೆ ಕೊರತೆಯಿಂದ ರಾಜ್ಯದಲ್ಲಿ ಬರ ಘೋಷಣೆಯಾಗಿ ನಾಲ್ಕೈದು ತಿಂಗಳು ಕಳೆದರೂ ಇನ್ನೂ ಬರ ಪರಿಹಾರ ಪೂರ್ಣ ಪ್ರಮಾಣದಲ್ಲಿ ಸಿಗದೇ ಅನ್ನದಾತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

Advertisement

ಜಿಲ್ಲೆಯ ರೈತರಿಗೆ ಒಟ್ಟು ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ 64 ಕೋಟಿ ಬಿಡುಗಡೆ ಆಗಬೇಕಿದ್ದರೂ, ರೈತರಿಗೆ ಸದ್ಯ ಸಿಕ್ಕಿರುವುದು ಬರೀ 14 ಕೋಟಿ ಮಾತ್ರ. ಹೌದು, ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಿ ಪರಿಹಾರ ಕೊಡಲಿಲ್ಲ ಎಂದು ಹೇಳಿ ರಾಜ್ಯ ಸರ್ಕಾರ ಕೇಂದ್ರದ ಬರ ಪರಿಹಾರಕ್ಕೆ ಕಾಯದೇ ರೈತರಿಗೆ ಕನಿಷ್ಠ 2000 ರೂ. ಪರಿಹಾರ ಮೀರದಂತೆ ರೈತರಿಗೆ ಪಾವತಿಸಲು ಜಿಲ್ಲೆಗೆ ಇಲ್ಲಿವರೆಗೂ 14.31 ಕೋಟಿ ಅನುದಾನ ಮಾತ್ರ ಬಿಡುಗಡೆ ಮಾಡಿದೆ.

ಜಿಲ್ಲಾದ್ಯಂತ ಮುಂಗಾರು ಹಂಗಾಮಿನಲ್ಲಿ ಬರೋಬ್ಬರಿ 75,208.2 ಹೆಕ್ಟೇರ್‌ ಪ್ರದೇಶದ ಬೆಳೆ ನಷ್ಟವಾಗಿದ್ದು, ಸದರಿ ಬೆಳೆಗಳಿಗೆ ಸರ್ಕಾರದಿಂದ ಎನ್‌ ಡಿಆರ್‌ಎಫ್ ಮಾರ್ಗಸೂಚಿಯಂತೆ ಕನಿಷ್ಠ ಜಿಲ್ಲೆಗೆ 64 ಕೋಟಿ ಅನುದಾನ ಬಿಡುಗಡೆ ಆಗಬೇಕಿತ್ತು. ಆದರೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಮನವಿ ಸಲ್ಲಿಸಿದರೂ, ಇನ್ನೂ ಬರ ಪರಿಹಾರ ಹಣ ಬಿಡುಗಡೆಗೊಳ್ಳದ ಕಾರಣ ರಾಜ್ಯ ಸರ್ಕಾರವೇ ರೈತರಿಗೆ 2000 ರೂ. ಪರಿಹಾರ ವಿತರಣೆಗೆ ಮುಂದಾಗಿದ್ದರೂ, ಬಹಳಷ್ಟು ರೈತರಿಗೆ ಸದ್ಯಕ್ಕೆ ಸಾವಿರ ರೂ.ಪರಿಹಾರ ಮಾತ್ರ ಕೈಗೆಟುವಂತಾಗಿದ್ದು, ಇನ್ನೂ ಸಾವಿರಾರು ರೈತರಿಗೆ ಬರ ಪರಿಹಾರ ಗಗನಕುಸಮವಾಗಿದೆ. 14.31 ಕೋಟಿ ಜಮೆ: ಸದ್ಯ ಮೊದಲ ಹಂತದಲ್ಲಿ ಜಿಲ್ಲೆಯ 59,911 ಮಂದಿ ರೈತರಿಗೆ 55,592 ಎಕರೆ ವಿಸ್ತೀರ್ಣಕ್ಕೆ ಕನಿಷ್ಠ 1000 ರೂ. ಮತ್ತು ಗರಿಷ್ಠ 2000 ರೂ.ಮೀರದಂತೆ ಒಟ್ಟು 10.85 ಕೋಟಿ ಹಾಗೂ ಎರಡನೇ ಹಂತದಲ್ಲಿ 18,993 ರೈತರಿಗೆ 21,094 ಎಕರೆ ವಿಸ್ತೀರ್ಣಕ್ಕೆ 3.46 ಕೋಟಿ, ಸೇರಿ ಒಟ್ಟು ಇಲ್ಲಿವರೆಗೂ 78,104 ರೈತರಿಗೆ 76,686 ಎಕರೆ ವಿಸ್ತೀರ್ಣಕ್ಕೆ ಒಟ್ಟು 14.31 ಕೋಟಿ ಪರಿಹಾರಧನವನ್ನು ರೈತರ ಖಾತೆಗೆ ಈ ತಿಂಗಳಲ್ಲಿ ಪಾವತಿ ಮಾಡಿದೆಯೆಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಅಲ್ಲದೇ ಉಳಿಕೆ ಬರ ಪರಿಹಾರವನ್ನು ಸರ್ಕಾರದ ನಿರ್ದೇಶನದಂತೆ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದೆಂದು ಜಿಲ್ಲಾಡಳಿತ ತಿಳಿಸಿದೆ.

ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಇಲ್ಲಿವರೆಗೂ ರಾಜ್ಯಕ್ಕೆ ನೈಯಾಪೈಸೆ ಕೊಟ್ಟಿಲ್ಲ. 44 ಸಾವಿರ ಕೋಟಿ ಬಿಡುಗಡೆ ಮನವಿ ಸಲ್ಲಿಸಿದರೂ ಕೇಂದ್ರ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸುತ್ತಿಲ್ಲ. -ಡಾ.ಎಂ.ಸಿ.ಸುಧಾಕರ್‌, ಜಿಲ್ಲಾ ಉಸ್ತುವಾರಿ ಸಚಿವರು.

Advertisement

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next