ಮಧುಗಿರಿ: ಪ್ರಧಾನಿ ನರೇಂದ್ರ ಮೋದಿ ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು ಬಿಟ್ಟು ಕನಿಷ್ಠ ಭಿಕ್ಷೆಯಂತೆ ಸಾವಿರ ಸಹಾಯಧನ ನೀಡುವ ಚಾಕೊಲೇಟ್‌ನಂತಹ ತಾತ್ಕಾಲಿಕ ಯೋಜನೆ ನೀಡಲು ಮುಂದಾಗಿದ್ದಾರೆ. ಇದರಿಂದ ರೈತರ ಉದ್ಧಾರವಾಗಲ್ಲ. ಹೋರಾಟ ಹತ್ತಿಕ್ಕಿದರೂ ವಿರಮಿಸುವುದಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಗುಡುಗಿದರು.
ಕುಣಿಗಲ್ ಟೋಲ್ ಬಳಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಮಧುಗಿರಿಗೆ ಕರೆತಂದಾಗ ಮಾಧ್ಯಮದವರೊಂದಿಗೆ ಮಾತನಾಡಿ, ಮೋದಿ ಸರ್ಕಾರ ರೈತ ವಿರೋಧಿಯಾಗಿದ್ದು, ರಾಜ್ಯವೂ ಮೋದಿ ತಾಳಕ್ಕೆ ಕುಣಿಯುತ್ತಿದೆ. ಪ್ರಣಾಳಿಕೆಯಲ್ಲಿ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ನೀಡಿದ್ದ ಭರವಸೆ ಮರೆತು ಶೇ.65 ರೈತರ ಸಮಾಧಿ ಮಾಡಲು ಹೊರಟಿದೆ. ರೈತರಿಗೆ ನೀಡಿದ್ದ ಭರವಸೆ ಈಡೇರಿಸುತ್ತಿಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ 19 ಸಾವಿರ ಕೋಟಿ ಭತ್ಯೆ ಉಡುಗೊರೆ ಕೊಡುವ ಪ್ರಧಾನಿ ರೈತರು ಬೀದಿಗೆ ಬಿದ್ದರೂ ಕ್ಯಾರೆ ಅಂದಿಲ್ಲ. ಬ್ಯಾಂಕುಗಳೂ ಸಾಲ ವಸೂಲಿಗೆ ಮುಂದಾಗಿವೆ. ಕಲ್ಪತರು ನಾಡಿನ ಕೊಬ್ಬರಿ ರೈತರಿಗೆ ನಷ್ಟವಾಗುತ್ತಿದ್ದರೂ ಗಮನ ಹರಿಸುತ್ತಿಲ್ಲ. ಸಂಪೂರ್ಣ ಸಾಲಮನ್ನಾ ಮಾಡುತ್ತಿಲ್ಲ. ಸಮಸ್ಯೆ ಹೇಳಲು ಹೋದರೆ ಹಸಿರು ಶಾಲು ತೊಟ್ಟ ಎಲ್ಲರ ಮೇಲೂ ಪೋಲಿಸರು ಹಲ್ಲೆ ಮಾಡಿ ಬಂಧಿಸುತ್ತಾರೆ. ವಾಹನದಲ್ಲಿ ಪ್ರಥಮ ಚಿಕಿತ್ಸೆ ವ್ಯವಸ್ಥೆಯೂ ಇಲ್ಲ ಎಂದು ಕಿಡಿಕಾರಿದರು.
ಹಸಿರು ಶಾಲು ತಗೆದು ಬನ್ನಿ ಎನ್ನುವ ಧೋರಣೆ ನಾಡಿಗೆ ಮಾಡಿದ ಅವಮಾನ. ಕಲ್ಪತರು ನಾಡಿಗೆ ಬಂದು ರೈತಪರ ಎಂದು ಬೂಟಾಟಿಕೆಯಾಡುತ್ತಿದ್ದಾರೆ. ರೈತರ ಹೋರಾಟ ನಿಲ್ಲಲ್ಲ. ಜೈಲಿಗೆ ಹಾಕಿದರೂ ಜೈಲ್ ಭರೋ ಚಳವಳಿ ನಡೆಸಲು ಹಿಂಜರಿಯಲ್ಲ. ಸತತ 6 ವರ್ಷದಿಂದ ಸುಳ್ಳು ಹೇಳುತ್ತ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿದ್ದಾರೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಸಾವಿರಾರು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇಂತಹ ಸಮಯದಲ್ಲೂ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಿರುವುದು ನಾಚಿಕೆಗೇಡು. ಡಾ.ಸ್ವಾಮಿನಾಥನ್ ವರದಿ ಜಾರಿಯಾಗದಿದ್ದರೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಿರಂತರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
700 ರೈತರ ಬಂಧನ: ಮೋದಿ ಕಾರ್ಯಕ್ರಮಕ್ಕೆ ರೈತ ಹೋರಾಟಗಾರರ ಬಿಸಿ ತಟ್ಟಿದ್ದು, ಸುಮಾರು 700ಕ್ಕೂ ಹೆಚ್ಚು ರೈತರನ್ನು ಎಂ.ಎನ್.ಕೆ. ಕಲ್ಯಾಣ ಮಂಟಪ ಹಾಗೂ ಹಳೆ ಶಾದಿ ಮಹಲ್‌ನಲ್ಲಿ ಕೂಡಿಹಾಕಿದ್ದರು. ಅಲ್ಲಿಯೇ ಪ್ರತಿಭಟನೆ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಭೈರೇಗೌಡ, ಲಕ್ಷಣ್ ಸ್ವಾಮಿ, ಉಮಾ, ಕುಣಿಗಲ್ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ಸಿದ್ದರಾಜು, ಧಾರವಾಡ ಜಿಲ್ಲಾಧ್ಯಕ್ಷ ದಳ್ಳಪ್ಪ, ಹಾಸನ ಜಿಲ್ಲಾಧ್ಯಕ್ಷೆ ಗೌರಮ್ಮ, ಬಾಬು, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ರಾಮನಾಥರೆಡ್ಡಿ, ಹಾವೇರಿ ತಾಲೂಕು ಕಾರ್ಯದರ್ಶಿ ಕರಿಗಾಳ್ ಗೋಣಪ್ಪ, ಪ್ರಕಾಶ್, ಗೌರೀಶ್, 700ಕ್ಕೂ ಹೆಚ್ಚು ರೈತರಿದ್ದರು.