Advertisement

ರೈತರೇ ಸಾಲ ಕಟ್ಟಬೇಡಿ: ಕೋಡಿಹಳ್ಳಿ

02:43 PM Oct 24, 2017 | Team Udayavani |

ರಾಯಚೂರು: ರೈತರೇ ಯಾವುದೇ ಕಾರಣಕ್ಕೂ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲ ಮರು
ಪಾವತಿಸಬೇಡಿ. ಸಾಲ ವಸೂಲಿಗೆ ಬರುವ ಪ್ರತಿನಿಧಿಗಳನ್ನು ಗ್ರಾಮಗಳಲ್ಲೇ ಕೂಡಿ ಹಾಕಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಕರೆ ನೀಡಿದರು.

Advertisement

ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಸೋಮವಾರ ನಡೆದ ರೈತರ ಸಾಲಮನ್ನಾಕ್ಕೆ ಜಿಲ್ಲಾಧಿಕಾರಿ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಅರ್ಜಿ ಸಲ್ಲಿಕೆ ಸಮಾವೇಶದಲ್ಲಿ ಅವರು ಮಾತನಾಡಿ, ನೀವು ಕೂಡಿ ಹಾಕಿದ ಸಾಲ ವಸೂಲಿಗಾರರನ್ನು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ಅಧಿಕಾರಿಗಳೇ ಬಂದು ಬಿಡಿಸಿಕೊಂಡು ಹೋಗಲಿ ಎಂದರು.

ಇಂದು ರೈತರು ನಷ್ಟದಲ್ಲಿದ್ದಾರೆ. ದೇಶದಲ್ಲಿ ಆಳುವ ಸರ್ಕಾರಗಳ ಖಾಸಗೀಕರಣ, ಕೈಗಾರಿಕಾ ನೀತಿಯಿಂದ ಅನ್ನದಾತ ಸಂಕಷ್ಟಕ್ಕೀಡಾಗಿದ್ದಾನೆ. ಸ್ವಾರ್ಥ ರಾಜಕಾರಣದಿಂದ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಸತತ ಬರ ಆವರಿಸಿ ರೈತರು ಕಂಗಾಲಾಗಿದ್ದಾರೆ. ದಿಕ್ಕು ತೋಚದೆ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಇಂಥ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಸಾಲ ಮರು ಪಾವತಿಸಬೇಡಿ ಎಂದರಲ್ಲದೇ ಸಾಲ ವಸೂಲಿಗೆ ಮುಂದಾಗುತ್ತಿರುವ ಸರ್ಕಾರಗಳ ನಿರ್ಧಾರ ಖಂಡನೀಯ ಎಂದರು. 

ಇಂದು ರೈತರು ಯಾರಿಂದ ಸಾಲಗಾರರಾಗುತ್ತಿದ್ದಾರೆ ಎನ್ನುವುದನ್ನು ಜನಪ್ರತಿನಿಧಿಗಳು ಅರಿಯಲಿ. ಒಂದೆ‌ಡೆ ರೈತರು ಆರ್ಥಿಕ ದಿವಾಳಿಯಾಗುತ್ತಿದ್ದರೆ, ಮತ್ತೂಂದೆಡೆ ಯುಜಿಸಿ ಸ್ಕೇಲ್‌ ಶೇ.24.5ರಷ್ಟು ಹೆಚ್ಚಳವಾಗಿದೆ. ಮೊದಲಿನಿಂದಲೂ ಸರ್ಕಾರಗಳು ರೈತರನ್ನು ಸಾಲಗಾರರನ್ನಾಗಿ ನೋಡುತ್ತಿದ್ದು, ಅದರಿಂದ ಮುಕ್ತರನ್ನಾಗಿಸುತ್ತಿಲ್ಲ ಎಂದು ದೂರಿದರು. 

ರೈತರು ಮಾಡಿರುವ ಎಲ್ಲ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಡಾ| ಸ್ವಾಮಿನಾಥನ್‌ ವರದಿಯಂತೆ ರೈತರ ಉತ್ಪನ್ನಗಳಿಗೆ ವೆಚ್ಚದಲ್ಲಿ ಶೇ.50 ಲಾಭಾಂಶ ಒಳಗೊಂಡಂತೆ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನ.20ರಂದು ಸಂಸತ್‌ಗೆ ಮುತ್ತಿಗೆ ಕಾರ್ಯಕ್ರಮ ರೂಪಿಸಿದ್ದು, ದೇಶದ 50ಲಕ್ಷಕ್ಕೂ ಹೆಚ್ಚು ರೈತರು ಚಳವಳಿಯಲ್ಲಿ ಭಾಗವಹಿಸುವರು ಎಂದರು. 

Advertisement

ಸಂಘದ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಸುಮಾರು ದಶಕಗಳಿಂದ ರೈತರು ನಾನಾ ರೀತಿಯಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬದುಕಿನ ಹಾದಿ ಇನ್ನಷ್ಟು ಕಠಿಣವಾಗಲಿದ್ದು, ಈಗಲಾದರೂ ಸಂಘಟಿತರಾಗಿ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಬೇಕು ಎಂದರು. ಸಂಘದ ರಾಜ್ಯ ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ಕಾರ್ಯದರ್ಶಿ ಅಮೀನ ಪಾಷಾ ದಿದ್ದಿಗಿ, ಜಿಲ್ಲಾಧ್ಯಕ್ಷ ಸೂಗೂರಯ್ಯ ಆರ್‌.ಎಸ್‌.ಮಠ, ದೇವದುರ್ಗ ತಾಲೂಕು ಅಧ್ಯಕ್ಷ ವಾಸುದೇವ ಮೇಟಿ ಮಾತನಾಡಿದರು. ಸಂಘದ ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ ದಿನ್ನಿ, ಬಸವರಾಜ ಹಂಚಿನಾಳ, ವೆಂಕಟರೆಡ್ಡಿ ರಾಜಲಬಂಡ, ಅಮರಯ್ಯ ಸ್ವಾಮಿ ಜಿ.ಮಠ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ರೈತರು ಭಾಗವಹಿಸಿದ್ದರು.

ಡಿಸಿ ಆಗಮನಕ್ಕೆ ಪಟ್ಟು ಅರ್ಜಿ ಸಲ್ಲಿಕೆ ಸಮಾವೇಶದಲ್ಲಿ ಬಹಿರಂಗ ವೇದಿಕೆ ನಿರ್ಮಿಸಲಾಗಿತ್ತು. ಸಾವಿರಾರು ರೈತರು ಬಿಸಿಲಿನಲ್ಲೇ ಕುಳಿತು ಭಾಷಣ ಕೇಳುತ್ತಿದ್ದರು. ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಭೇಟಿ ನೀಡಬೇಕೆಂದು ಮುಖಂಡರು ಪಟ್ಟು ಹಿಡಿದರು. ಒಂದು ವೇಳೆ ಜಿಲ್ಲಾಧಿಕಾರಿ ಬರದಿದ್ದಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು. ಒತ್ತಡಕ್ಕೆ ಮಣಿದು ಕೊನೆಗೆ ಜಿಲ್ಲಾಧಿಕಾರಿಯೇ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಸರ್ಕಾರಗಳು ರೈತರ ಸಾಲ ಮನ್ನಾ ಮಾಡದಿದ್ದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿ ಕಾನೂನು ಹೋರಾಟ ನಡೆಸಲಾಗುವುದು.  ಕೋಡಿಹಳ್ಳಿ ಚಂದ್ರಶೇಖರ್‌ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next