ಶಿರಸಿ: ಕಳೆದ ವರ್ಷದ ಅತಿಯಾದ ಮಳೆಗೆ ಅರ್ಧಕ್ಕಿಂತ ಕಡಿಮೆ ಬೆಳೆ, ಇರುವ ಬೆಳೆಗೂ ಮಾರುಕಟ್ಟೆ ಸುಸೂತ್ರ ಇರದೇ ಸಂಕಷ್ಟಕ್ಕೆ ಒಳಗಾಗಿದ್ದ ರೈತರ ಕೈ ಹಿಡಿಯುವ ಭರವಸೆ ನೀಡಿದ್ದ ವಿಮಾ ಕಂಪನಿ ನಿರಾಸೆ ಮೂಡಿಸಿದೆ. ಸಕಾಲಕ್ಕೆ ಸ್ಪಂದಿಸದೆ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಬೆಳೆಸಾಲದ ಜೊತೆಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನೂ ಭರಣ ಮಾಡಲಾಗಿತ್ತು. ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಮಳೆಗಾಲ ಹಾಗೂ ಬೇಸಿಗೆಗೆ ಆಧರಿಸಿ ವಿಮೆ ಕಂತನ್ನು ಭರಣ ಮಾಡಲಾಗಿತ್ತು. ಈ ಅವ ಧಿಯಲ್ಲಿ ರಿಲಾಯನ್ಸ್ ಕಂಪನಿಗೆ ರೈತರು ಹಣವನ್ನು ಕಟ್ಟಿದ್ದರು. ಶೇ.5ರ ಕಂತನ್ನು ಹೆಕ್ಟೇರ್‌ಗೆ 6400 ರೂ.ಗಳಷ್ಟು ರೈತರು ಪಾವತಿಸಿದ್ದರೆ ಟೆಂಡರ್ ಆದ ಕಂತಿನ ಮೊತ್ತಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಲಾ ಶೇ.50ರ ಪಾಲನ್ನು ತುಂಬಿದ್ದವು. ಈ ವಿಮೆ ಅತಿ ಮಳೆ, ಕೊಳೆ ಸಂದರ್ಭದಲ್ಲಿ ರೈತರ ಕೈ ಹಿಡಿಯುವಂತೆ ಇದ್ದವು. ಅಡಿಕೆ, ಕಾಳುಮೆಣಸು ಬೆಳೆಗಾರರು ಜಿಲ್ಲೆಯಲ್ಲಿ ಅತಿಹೆಚ್ಚು ಕಂತು ಪಾವತಿಸಿದ್ದರು.
ಬಂದೇ ಇಲ್ಲ: ಹವಾಮಾನ ಆಧಾರಿತ ಬೆಳೆ ವಿಮೆ ಆಗಿದ್ದರಿಂದ ಕೆಲವು ಪಂಚಾಯ್ತಿಗಳಲ್ಲಿ ಮಳೆ ಮಾಪನ ಅಳೆದು ಕೊಡಬೇಕು. ಯಂತ್ರ ಕೆಟ್ಟರೆ, ಅಳತೆ ದಾಖಲೆ ಆಗದೇ ಹೋದಲ್ಲಿ ಅಥವಾ ವಿಮೆ ಕೊಟ್ಟ ಕಂಪನಿಗೂ ಇಲ್ಲಿನ ಮಾಹಿತಿಗೂ ದಾಖಲೆ ಸರಿಹೊಂದದೆ ಹೋದರೂ ರೈತರ ನೋವಿಗೆ ವಿಮೆ ಸ್ಪಂದಿಸುವುದೇ ಇಲ್ಲ. ಇಂಥ ಪ್ರಕರಣ ಜಿಲ್ಲೆಯ ಅಡಿಕೆ, ಕಾಳುಮೆಣಸು ಬೆಳೆಗಾರರಿಗೂ ಆಗಿದ್ದು, ಕೋಟಿಗೂ ಹೆಚ್ಚು ಮೊತ್ತದ ವಿಮಾ ಪರಿಹಾರ ವರ್ಷ ಮುಗಿದರೂ ಬಂದೇ ಇಲ್ಲ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ತಾರೇಹಳ್ಳಿಯ 1,628, ತ್ಯಾಗಲಿ ಗ್ರಾಪಂ ವ್ಯಾಪ್ತಿಯ 1,295, ಶಿರಸಿ ತಾಲೂಕಿನ ಸೋಂದಾದ 646, ವಾನಳ್ಳಿ ಗ್ರಾಪಂ ವ್ಯಾಪ್ತಿಯ 740 ರೈತರಿಗೆ ಮತ್ತು ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಪಂನ 790 ರೈತರಲ್ಲಿ ಬಹುತೇಕ ರೈತರಿಗೆ ವಿಮಾ ಹಣ ಬಂದೇ ಇಲ್ಲ. ಕಾರಣ ಕೇಳಿದರೆ ಹವಾಮಾನ ವರದಿಯ ಮಿಸ್ ಮ್ಯಾಚ್ ಎಂಬ ಹೇಳಿಕೆ ಬರುತ್ತಿದೆ. ಈ ಕಾರಣದಿಂದ ರೈತರ ಖಾತೆಗೆ ಹಣ ಮಿಸ್ ಆಗಿದೆ.
ಪತ್ರ ಬರೆದು ಸುಸ್ತಾದರು : ಕೆಡಿಸಿಸಿ ಬ್ಯಾಂಕ್ ಮೂಲಕ ಬೆಳೆಸಾಲ ಕೊಡುತ್ತಾರೆ. ಹೀಗೆ ಕೊಡುವ ಬೆಳೆ ಸಾಲಕ್ಕೆ ವಿಮಾ ಪಾವತಿ ಕಡ್ಡಾಯ. ಆದರೆ, ಯಾರಿಗೆ ಎಷ್ಟು ಹಣ ಬಂದಿದೆ ಎಂಬುದು ತೋಟಗಾರಿಕಾ ಇಲಾಖೆಗಾಗಲಿ, ಜಿಲ್ಲಾಡಳಿತಕ್ಕಾಗಲಿ, ಬ್ಯಾಂಕಿಗಾಗಲಿ ಮಾಹಿತಿ ಇರುವುದಿಲ್ಲ! ಒಬ್ಬ ನೋಡಲ್ ಅಧಿ ಕಾರಿ ಕೂಡ ವಿಮಾ ಕಂಪನಿಯಿಂದ ಜಿಲ್ಲೆಯಲ್ಲಿ ಇಲ್ಲ. ಈ ಕಾರಣದಿಂದ ಯಾರಿಗೆ ಕೇಳಬೇಕು ಎಂದೇ ಗೊತ್ತಾಗುವುದಿಲ್ಲ. ಈಗಾಗಲೇ ಸೋಂದಾ, ವಾನಳ್ಳಿ, ನಾಣಿಕಟ್ಟ ಪಂಚಾಯ್ತಿಯವರು, ಸೊಸೈಟಿಯವರು ಸ್ಪೀಕರ್ ಕಾಗೇರಿ, ಜಿಲ್ಲಾ ಸಚಿವ ಹೆಬ್ಟಾರ್, ಕೃಷಿ, ಸಹಕಾರಿ ಸಚಿವರ ತನಕ ಪತ್ರ ಬರೆದು ಆಗ್ರಹಿಸಿದ್ದಾರೆ. ಆದರೆ, ಹಣ ಮಾತ್ರ ಬಂದಿಲ್ಲ.
ಈಗ ಮತ್ತೆ ಬೆಳೆಸಾಲ ಪಡೆಯುವಾಗ ರೈತರು ವಿಮಾ ಕಂತು ಭರಣ ಮಾಡಬೇಕು. ಆದರೆ, ನಮಗೆ 18-19ರದ್ದೇ ನ್ಯಾಯಯುತ ವಿಮೆ ಪರಿಹಾರ ಬಂದಿಲ್ಲ. ರೈತರು ಈಗಲೂ ಕಷ್ಟದಲ್ಲಿದ್ದಾರೆ. ವಿಮಾ ಕಟ್ಟಿಸಿಕೊಂಡ ಕಂಪನಿ ತಾರತಮ್ಯ ಮಾಡಿದ್ದು ಸರಿಯಲ್ಲ.
ಮಂಜುನಾಥ ಭಂಡಾರಿ, ಸೋಂದಾ ಗ್ರಾಪಂ ಅಧ್ಯಕ್ಷ
ಜಿಲ್ಲೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ವಿಮಾ ಕಂಪನಿ ಇಡಬೇಕು. ಅದು ಬಿಟ್ಟು ದೋಟಿಯಲ್ಲಿ ಜೇನು ಕೊಯ್ದರೆ ಹೇಗೆ? ರೈತರು ಪಾವತಿಸಿದ ಮೊತ್ತ ಕೂಡ ಸಣ್ಣದಲ್ಲ. –
ಮುರಳೀಧರ ಹೆಗಡೆ, ರೈತ
–ರಾಘವೇಂದ್ರ ಬೆಟ್ಟಕೊಪ್ಪ