Advertisement

ಸಂಗಾಪೂರ ಕೆರೆ ದುರಸ್ತಿಗೆ ಮುಂದಾದ ರೈತರು

02:25 PM Jun 08, 2020 | Team Udayavani |

ಗಂಗಾವತಿ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ತಾಲೂಕಿನ ಸಂಗಾಪೂರ ಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿಗೆ ಅಚ್ಚುಕಟ್ಟು ಪ್ರದೇಶದ ರೈತರು ಮುಂದಾಗಿದ್ದಾರೆ.

Advertisement

ಸಂಗಾಪೂರ, ಹಿರೇಜಂತಗಲ್‌ ಮತ್ತು ಗಂಗಾವತಿ ಭಾಗದ ಸುಮಾರು 500 ಎಕರೆ ಪ್ರದೇಶದ ಭೂಮಿಗೆ ನೀರುಣಿಸುವ 45 ಎಕರೆ ಪ್ರದೇಶದ ಕೆರೆ ಅಭಿವೃದ್ಧಿಗೆ ಪ್ರತಿ ರೈತನ ಹತ್ತಿರ ಶಕ್ತ್ಯಾನುಸಾರ ಹಣ ಸಂಗ್ರಹ ಮಾಡಲಾಗುತ್ತಿದೆ. ವಿಜಯನಗರ ಕಾಲುವೆ ನೀರು ಕೊನೆ ಭಾಗದ ರೈತರಿಗೆ ತಲುಪಬೇಕು ಎಂಬ ಉದ್ದೇಶದಿಂದ ವಿಜಯನಗರದ ಅರಸರು ಸಂಗಾಪೂರದಲ್ಲಿ ಕೆರೆ ನಿರ್ಮಿಸಿದ್ದಾರೆ. ಹಲವು ವರ್ಷಗಳಿಂದ ಈ ಕೆರೆಯನ್ನು ಕೆಲವರು ಒತ್ತುವರಿ ಮಾಡಿದ್ದರು. ಇದನ್ನು ವಿರೋಧಿಸಿ ಸ್ಥಳೀಯರು ಹೋರಾಟ ಮಾಡಿ ಒತ್ತುವರಿ ತೆರೆವುಗೊಳಿಸಿದ್ದರು. ಹಲವು ವರ್ಷಗಳಿಂದ ಕೆರೆಯಲ್ಲಿ ಹೂಳು ಶೇಖರಣೆಯಾಗಿದ್ದು ಗಿಡಗಂಟೆಗಳು ಬೆಳೆದಿರುವುದರಿಂದ ನೀರು ಸಂಗ್ರಹ ಕಡಿಮೆಯಾಗುತ್ತಿದೆ. ಕೆರೆಯಲ್ಲಿದ್ದ ಮಣ್ಣನ್ನು ಕೆಲವರು ಅಕ್ರಮವಾಗಿ ತೆಗೆದುಕೊಂಡು ಹೋಗುವ ಮೂಲಕ ಕೆರೆಯ ಅಸ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಕೆರೆಯ ಒಡ್ಡಿನ ಹತ್ತಿರ ಮಣ್ಣಿನ ಗಣಿಗಾರಿಕೆ ಮಾಡುವ ಮೂಲಕ ಸ್ವಾರ್ಥಕ್ಕಾಗಿ ಮಣ್ಣು ಮಾರಾಟ ಮಾಡುವವರ ವಿರುದ್ಧ ಸ್ಥಳೀಯರು ಗಣಿ ಭೂವಿಜ್ಞಾನ ಇಲಾಖೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಸಂಗಾಪೂರ ಲಕ್ಷ್ಮೀ ನಾರಾಯಣ ಕೆರೆ ಪುರಾತನ ಕೆರೆಯಾಗಿದೆ. ವಿಜಯನಗರ ಕಾಲುವೆ ನೀರು ಇಲ್ಲಿ ಸಂಗ್ರಹವಾಗಿ ಅಚ್ಚುಕಟ್ಟು ಪ್ರದೇಶದ ಸುಮಾರು 500 ಎಕರೆ ಭೂಮಿಗೆ ನೀರುಣಿಸಲಾಗುತ್ತಿದೆ. ಈ ಹಿಂದೆ ಕೆರೆ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವರು ಕೆರೆಯ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದು, ಇಲಾಖೆಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಕೆರೆಯ ಹೆಸರಿನಲ್ಲಿ ಬಿಲ್‌ ಎತ್ತುವಳಿ ಮಾಡಿರುವ ಕುರಿತು ದೂರುಗಳಿದ್ದು, ತನಿಖೆ ನಡೆಸಬೇಕಿದೆ. ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯುತ್ತಿದ್ದು, ಸಂಗಾಪೂರ ಕೆರೆಯನ್ನು ಇದರಲ್ಲಿ ಸೇರ್ಪಡೆ ಮಾಡಬೇಕು. ಸದ್ಯ ರೈತರೇ ಸ್ವಚ್ಛತಾ ಕಾರ್ಯ ಮಾಡಲು ನಿರ್ಧರಿಸಿದ್ದಾರೆ.-ಸುಂದರರಾಜ್‌, ಅಧ್ಯಕ್ಷರು ಶ್ರೀಲಕ್ಷ್ಮೀ ನಾರಾಯಣ ಕೆರೆ ಅಭಿವೃದ್ಧಿ ಕಮಿಟಿ

 

-ಕೆ. ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next