ಜಮಖಂಡಿ: ಕಳೆದ ಎರಡು ತಿಂಗಳಿಂದ ಕೃಷ್ಣಾ ನದಿಯಲ್ಲಿ ನೀರು ಖಾಲಿಯಾಗಿದ್ದು, ಜನ-ಜಾನುವಾರುಗಳಿಗೆ ನೀರಿನ ತೊಂದರೆ ಆಗಿದೆ. ನೀರಿನ ಅಭಾವದಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ನಾ ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದ ಎ.ಜಿ.ದೇಸಾಯಿ ವೃತ್ತದಿಂದ ಮಿನಿ ವಿಧಾನಸೌಧ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳ ಕಚೇರಿ ಗ್ರೇಡ್-2 ತಹಶೀಲ್ದಾರ್ ಶಿವಾನಂದ ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಈರಪ್ಪ ಹಂಚಿನಾಳ, ರಾಜು ನದಾಫ ಮಾತನಾಡಿ, ತಾಲೂಕಿನಲ್ಲಿ ಜಲಕ್ಷಾಮದಿಂದ ತತ್ತರಿಸಿದ ಜನ-ಜಾನುವಾರುಗಳಿಗೆ ಕೃಷ್ಣಾ ನದಿಗೆ ಕೊಯ್ನಾ ಜಲಾಶಯದಿಂದ ನೀರು ಬಿಡಿಸಬೇಕು. ಈ ಭಾಗದಲ್ಲಿ ಜನರು, ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ಶಾಸಕರು ಕೂಡಲೇ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ನೀರು ಹರಿಸುವ ಕೆಲಸ ಮಾಡಬೇಕು ಎಂದರು. ರೈತ ಸಂಘದ ಅಧ್ಯಕ್ಷ ಕಲ್ಲಪ್ಪ ಬಿರಾದಾರ ಮಾತನಾಡಿ, ರೈತರ ಕಬ್ಬು ಹೋಗಿ ಮೂರ್‍ನಾಲ್ಕು ತಿಂಗಳು ಕಳೆದರೂ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬಿನ ನೀಡಿಲ್ಲ. ಕೆಲ ಕಾರ್ಖಾನೆಗಳು ಕಡಿಮೆ ಹಣ ನೀಡಿದ್ದಾರೆ. ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರು ಎಫ್ ಆರ್‌ಪಿ ದರದಲ್ಲಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಕೂಡಲೇ ಬಿಲ್ ಪಾವತಿಸಬೇಕು. ಇಲ್ಲದಿದ್ದರೆ ರೈತರಿಂದ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಜನ ಜಾನುವಾರುಗಳಿಗೆ ಕುಡಿಯಲು ನೀರು, ಮೇವು ಇಲ್ಲ. ಮೇವು ಬ್ಯಾಂಕ್ ಆರಂಭಿಸಿರುವುದಾಗಿ ಹೇಳುವ ಅಧಿಕಾರಿಗಳು ಕಾಟಾಚಾರಕ್ಕೆ ಆರಂಭ ಮಾಡಿದ್ದಾರೆ. ಪ್ರತಿ ಗ್ರಾಮಕ್ಕೆ ಒಂದರಂತೆ ಮೇವು ಬ್ಯಾಂಕ್ ಆರಂಭಿಸಿ ಉಚಿತವಾಗಿ ವಿತರಿಸಬೇಕು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ನ್ಯಾಯವಾದಿ ಯಲ್ಲಪ್ಪ ಹೆಗಡೆ, ಸಿದ್ದುಗೌಡ ಪಾಟೀಲ್, ಪ್ರದೀಪ ಮೆಟಗುಡ್ಡ, ಶ್ರೀಶೈಲ ಭೂಮಾರ, ಈಶ್ವರಯ್ನಾ ಪೂಜಾರಿ, ಸಿದ್ದಪ್ಪ ಬನಜನವರ, ಮಹಿಷವಾಡಗಿ, ರಾಜು ಬುರ್ಲಿ, ಸಿದ್ದು ಪಾಟೀಲ, ಗೋಕುಲ್ ಮುರಡಿ ಸಹಿತ ಹಲವರು ಇದ್ದರು.