Advertisement

ಜೋಳ -ಕಡಲೆ ಖರೀದಿ ಕೇಂದ್ರ ತೆರೆಯಲು ರೈತರ ಆಗ್ರಹ

04:12 PM Jan 23, 2018 | Team Udayavani |

ರಾಯಚೂರು: ತೊಗರಿ ಮಾದರಿಯಲ್ಲೇ ಒಣಗಡಲೆ, ಹೈಬ್ರಿಡ್‌ ಜೋಳವನ್ನೂ ಬೆಂಬಲ ಬೆಲೆಯೊಂದಿಗೆ ಖರೀದಿಸಲು ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೃಷಿ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಸಲ್ಲಿಸಿದರು.

Advertisement

ರೈತರಿಗೆ ಕಳೆದ ಸಾಲಿನಲ್ಲಿ ಸಾಕಷ್ಟು ನಷ್ಟವಾಗಿದೆ. ಒಂದೆಡೆ ಸತತ ಮಳೆಗೆ ರೈತರು ಕಂಗಾಲಾಗಿದ್ದರೆ, ಮತ್ತೂಂದೆಡೆ ಮುಕ್ತ ಮಾರುಕಟ್ಟೆಯಲ್ಲೂ ಸೂಕ್ತ ಬೆಲೆ ಸಿಗುತ್ತಿಲ್ಲ. ರೈತರು ಒಣಗಡಲೆ ಕಟಾವು ಮಾಡುತ್ತಿದ್ದು, ದರ ಮಾತ್ರ ಕ್ವಿಂಟಲ್‌ಗೆ 3,500 ರೂ. ಇದೆ. ಕಳೆದ ವರ್ಷ ಒಂಭತ್ತು ಸಾವಿರ ರೂ. ಇದ್ದ ಬೆಲೆ ಈ ಬಾರಿ ನೆಲಕಚ್ಚಿದೆ. ಲಕ್ಷಾಂತರ ರೂ. ಖರ್ಚು ಮಾಡಿರುವ ರೈತರು ಇದರಿಂದ ನಷ್ಟ ಎದುರಿಸುವಂತಾಗಿದೆ. ರೈತರನ್ನು ಈ ಸಂಕಷ್ಟದಿಂದ ಪಾರು ಮಾಡಲು ಸರ್ಕಾರ ಒಣಗಡಲೆಗೂ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. 

ಕನಿಷ್ಠ 6,500 ರೂ. ಬೆಲೆ ನಿಗದಿಗೊಳಿಸಬೇಕು. ಹೈಬ್ರಿಡ್‌ ಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ 2 ಸಾವಿರದಿಂದ 2,500 ರೂ.
ವರೆಗೆ ಬೆಲೆ ನಿಗದಿಪಡಿಸಬೇಕು. ತೊಗರಿ ಮಾರಾಟಕ್ಕೆ ಸಂಬಂಧಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿವರೆಗೆ ಕಾಲಾವಕಾಶ ನೀಡಬೇಕು. ಲಿಂಗಸುಗೂರು, ದೇವದುರ್ಗ ತಾಲೂಕಿನಲ್ಲೂ ಶೇಂಗಾ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. 

ಸಂಘದ ರಾಜ್ಯ ಮುಖಂಡರಾದ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಎನ್‌.ಲಕ್ಷ್ಮಣಗೌಡ ಕಡಗಂದೊಡ್ಡಿ, ದೊಡ್ಡ ಬಸನಗೌಡ ಬಲ್ಲಟಗಿ, ಸದಸ್ಯರಾದ ಬಸವರಾಜ ಮಲ್ಲಿನ ಮಡುವು, ಮನೋಹರ ಜಾನೇಕಲ್‌, ಶಿವನಗೌಡ ಹೂವಿನಹಡಗಲಿ, ಭೀಮಶ್ವೇರ ರಾವ್‌, ಬೂದೆಯ್ಯಸ್ವಾಮಿ ಗಬ್ಬೂರು, ವೀರನಗೌಡ ಲಿಂಗಸುಗೂರು, ಸಿದ್ಧರಾಮಯ್ಯ
ಸ್ವಾಮಿ, ದೇವರಾಜ ನಾಯಕ, ಚಂದಾಸಾಬ್‌ ಕಡಗಂದೊಡ್ಡಿ, ದೇವಪ್ಪ ಜೇಗರಕಲ್‌, ಶ್ರೀಧರ ಜೆ.ಮಲ್ಲಾಪುರ, ನರಸೋಜಿ ಮಮದಾಪುರ, ನರಸಪ್ಪ ಹೊಕ್ರಾಣಿ, ತಿಮ್ಮಪ್ಪ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next