ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೆರೆ, ಕುಂಟೆಗಳ ಪುನಶ್ಚೇತನ ಜೊತೆಗೆ ಕೆರೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಬೆಳೆದಿರುವ ಜಾಲಿ ಮರಗಳನ್ನು ತೆರವುಗೊಳಿಸಿ ಮಳೆ ನೀರು ಸಂಗ್ರಹಕ್ಕೆ ಅನುವು ಮಾಡಿಕೊಡಬೇಕೆಂದು ಜಿಲ್ಲೆಯ ರೈತರ ನಿಯೋಗ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಮನವಿ ಮಾಡಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಪಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಹೊರಡುವ ಸಂದರ್ಭದಲ್ಲಿ ಜಿಲ್ಲೆಯ ರೈತರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಜಿಲ್ಲೆಯ ಕೆರೆ, ಕುಂಟೆಗಳ ಪರಿಸ್ಥಿತಿಯನ್ನು ಮನವಿ ಮೂಲಕ ವಿವರಿಸಿತು.
ಮನವರಿಕೆ: ಜಿಲ್ಲೆಗೆ ಎತ್ತಿನಹೊಳೆ ಹಾಗೂ ಹೆಚ್.ಎನ್.ವ್ಯಾಲಿ ನೀರು ಹರಿದರೆ ಕೆರೆಗಳಲ್ಲಿ ಸಂಗ್ರಹ ಆಗುವುದಿಲ್ಲ. ಕೆರೆ, ಕುಂಟೆಗಳು ಒತ್ತುವರಿ ಜೊತೆಗೆ ಪುನಶ್ಚೇತನವಾಗದೇ ಕೆರೆಗಳಲ್ಲಿ ವಿಪರೀತ ಜಾಲಿ ಮರಗಳು ಬೆಳೆದಿದ್ದು, ಇದರಿಂದ ಕೆರೆಗಳೇ ಕಣ್ಮರೆಯಾಗುವ ಸ್ಥಿತಿ ತಲುಪಿವೆ. ಇದರಿಂದ ಮಳೆಗಾಲದಲ್ಲಿ ಕೂಡ ಕೆರೆಗಳಿಗೆ ನೀರು ಹರಿದು ಬರುತ್ತಿಲ್ಲ. ಸಾಕಷ್ಟು ಕೆರೆಗಳು ಹೂಳು ತುಂಬಿರುವುದರಿಂದ ಮಳೆ ನೀರು ಸಂಗ್ರಹವಾಗದೇ ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಎಂದು ರೈತರು ಉಸ್ತುವಾರಿ ಸಚಿವರ ಗಮನ ಸೆಳೆದರು.
ಜಿಲ್ಲೆಯಲ್ಲಿ ಕಲ್ಯಾಣಿಗಳ ಸ್ವತ್ಛತೆ ಮಾಡುವ ರೀತಿಯಲ್ಲಿ ಕೆರೆಗಳನ್ನು ಪುನಶ್ಚೇತನ ಮಾಡಬೇಕೆಂದರು. ಜಿಲ್ಲೆಗೆ ಬಾಕಿ ಇರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗ ಚರ್ಚಿಸಲು ಪ್ರತ್ಯೇಕವಾಗಿ ರೈತ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸುವಂತೆ ಮುಖಂಡರು ಕೋರಿದರು.
ಸಚಿವರೊಂದಿಗೆ ಯುವಶಕ್ತಿ ಚರ್ಚೆ: ಜಿಲ್ಲೆಯ ಯುವಶಕ್ತಿ ಪದಾಧಿಕಾರಿಗಳಾದ ಶಿವಪ್ರಕಾಶ್‌ರೆಡ್ಡಿ ಮತ್ತಿತರರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎನ್.ಸಿ.ಅಶ್ವತ್ಥನಾರಾಯಣರನ್ನು ಭೇಟಿ ಮಾಡಿ ಜಿಲ್ಲೆಗೆ ಶಾಶ್ವತವಾದ ನೀರಾವರಿ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು. ರೈತ ಸಂಘದ ಶಿಡ್ಲಘಟ್ಟದ ಪ್ರತೀಶ್, ಚಿಕ್ಕಬಳ್ಳಾಪುರದ ರಾಮಾಂಜಿನಪ್ಪ, ಶ್ರೀನಿವಾಸ್, ಮಂಜುನಾಥ, ಸುಬ್ರಹ್ಮಣಿ, ವೆಂಕಟರವಣಪ್ಪ, ಶ್ರೀನಾಥ ಉಪಸ್ಥಿತರಿದ್ದರು.
ಕಚೇರಿ ಉದ್ಘಾಟನೆ: ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿಯನ್ನು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು. ಉಸ್ತುವಾರಿ ಸಚಿವರ ಉದ್ಘಾಟನೆಗಾಗಿ ಕಚೇರಿ ನವ ವಧುವಿನಂತೆ ಸಿಂಂಡಿತ್ತು. ಸಚಿವರ ಆಗಮನಕ್ಕೂ ಮೊದಲೇ ವೇದ ಪಂಡಿತರು ಕಚೇರಿಯಲ್ಲಿ ಶಾಸ್ತ್ರೋಕ್ತವಾಗಿ ಹೋಮ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಿದರು. ಬಳಿಕ ಆಗಮಿಸಿದ ಡಿಸಿಎಂ ಕಚೇರಿ ಉದ್ಘಾಟಿಸಿದರು.