ಹರಿಹರ: ಭತ್ತದ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತರು ಇಲ್ಲಿನ ಕೈಗಾರಿಕಾ ವಸಾಹತು ಪ್ರದೇಶದಲ್ಲಿರುವ ಎಂ.ಬಿ. ರೈಸ್‌ಮಿಲ್ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ರೈತರಿಂದ ಭತ್ತ ಖರೀದಿಸಿ ಕಳೆದ 6 ತಿಂಗಳಿಂದ ಹಣ ನೀಡದಿರುವ ಮಿಲ್ ಎದುರು ರೈತರು ಕಳೆದ ತಿಂಗಳು ಕೂಡ ಪ್ರತಿಭಟನೆ ನಡೆಸಿದ್ದರು.
ಆ ವೇಳೆ ಪೊಲೀಸರೆದುರು ಮಿಲ್ ಮಾಲಿಕರು ಅ.14ರಂದು ರೈತರ ಶೇ.50 ರಷ್ಟು ಬಾಕಿ ಹಣ ಪಾವತಿಸುವುದಾಗಿ ವಾಗ್ಧಾನ ಮಾಡಿದ್ದರು. ಅದರಂತೆ ಸೋಮವಾರ ಮಿಲ್ ಎದುರು ಜಮಾಯಿಸಿದ್ದ ನೂರಾರು ರೈತರಿಗೆ ಮಿಲ್‌ನವರು ಹಣ ಪಾವತಿಗೆ ಇನ್ನೂ 4 ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ ಒಪ್ಪದ ರೈತರು ಹಣ ಪಾವತಿಗೆ ಪಟ್ಟು ಹಿಡಿದು ರೈಸ್ ಮಿಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಡಿ.ರವಿಕುಮಾರ್, ರೈತರು ಹಾಗೂ ಮಿಲ್ ಮಾಲೀಕರ ಜೊತೆ ಮಾತುಕತೆ ನಡೆಸಿದರು. ಪ್ರತಿ ದಿನ 40 ಲಕ್ಷ ರೂ.ಗಳಂತೆ 5 ದಿನಗಳ ಅವಧಿಯಲ್ಲಿ ಒಟ್ಟು 2 ಕೋಟಿ ಪಾವತಿಸುವುದಾಗಿ ಮಾಲೀಕರು ಹೇಳಿದರೆ, ನಿತ್ಯವೂ 40 ಲಕ್ಷ ತಂದು ನೀಡುವ ಖಾತ್ರಿಯಿಲ್ಲ. ಮತ್ತೆ ಮೊದಲು ಯಾರಿಗೆ ಹಣ ಕೊಡಬೇಕು ಎಂಬ ಸಮಸ್ಯೆ ಉದ್ಭವವಾಗುತ್ತದೆ ಎಂದು ರೈತರು ತಕರಾರು ತೆಗೆದಿದ್ದರಿಂದ ಸಮಸ್ಯೆ ಇನ್ನೂ ಬಗೆಹರಿದಿಲ್ಲ.
ಎಂ.ಬಿ. ರೈಸ್ ಮಿಲ್‌ನವರು 3 ತಿಂಗಳೊಳಗೆ ಪೂರ್ತಿ ಹಣ ಪಾವತಿಸುವುದಾಗಿ ವಾಗ್ಧಾನ ಮಾಡಿ ತಾಲೂಕಿನ ಹುಲಿಗಿನಹೊಳೆ, ಕಮಲಾಪುರ, ಧೂಳೆಹೊಳೆ ಹಾಗೂ ಜಿಲ್ಲೆಯ ಗೋಪನಾಳು, ಹದಡಿ, ಕನಗಾನಹಳ್ಳಿ, ಬೆಳವನೂರು, ಆರನೇ ಕಲ್ಲು, ಗಿರಿಯಾಪುರ ಮಾತ್ರವಲ್ಲದೆ ಹಾವೇರಿ ಜಿಲ್ಲೆಯ ಅನೇಕ ರೈತರಿಂದಲೂ ಅಂದಾಜು 4 ಕೋಟಿಗೂ ಹೆಚ್ಚು ಮೊತ್ತದ ಭತ್ತ ಖರೀದಿಸಿದ್ದು, 6-7 ತಿಂಗಳಾದರೂ ಬಾಕಿ ಪಾವತಿಸಿಲ್ಲ ಎಂದು ರೈತರು ಆರೋಪಿಸಿದ್ದಾರೆ.