Advertisement

ನ್ಯಾಯ ಒದಗಿಸುವಂತೆ ರೈತರಿಂದ ಆಗ್ರಹ

09:12 PM Oct 19, 2021 | Team Udayavani |

ಕಟಪಾಡಿ: ಒಂದೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಉಕ್ಕೇರಿ ಹರಿದ ಹೊಳೆಯ ನೀರು ಇವೆಲ್ಲದರ ನಡುವೆ ಹರ ಸಾಹಸಪಟ್ಟು ಭತ್ತದ ಬೆಳೆಯನ್ನು ಬೆಳೆಯಲಾಗಿದ್ದು, ಇದೀಗ ಕಟಾವಿಗೆ ಯಂತ್ರ ಬಂದಿದ್ದು ಗಂಟೆ ಯೊಂದಕ್ಕೆ 2,500 ರೂ. ದುಬಾರಿ ದರ ವಿಧಿಸುತ್ತಿದ್ದು, ಮುಂದಿನ ಬಾರಿ ಭತ್ತದ ಬೇಸಾಯ ಮಾಡಬೇಕೋ ಬೇಡವೋ ಎಂಬ ಚಿಂತೆ ಕಾಡುತ್ತಿದೆ ಎಂದು ಮಟ್ಟು ಭಾಗದ ರೈತರು ಹತಾಶ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Advertisement

ಒಂದೆಡೆ ಗದ್ದೆಗಳನ್ನು ಹಡಿಲು ಬಿಟ್ಟಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುವ ಭೀತಿ, ಬೇಸಾಯ ಕೈಗೊಂಡರೆ ನಷ್ಟವನ್ನು ಅನುಭವಿಸುವ ಸಂಕಷ್ಟ. ಇದರ ನಡುವೆ ಉಭಯ ಸಂಕಟವನ್ನು ಅನುಭವಿಸುವ ಮಟ್ಟು ಭಾಗದ ರೈತರು ಈ ಬಗ್ಗೆ ಇಲಾಖಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೂಕ್ತ ನ್ಯಾಯವನ್ನು ಒದಗಿಸುವಂತೆ ಭತ್ತದ ಬೇಸಾಯ ನಡೆಸುವ ವಸಂತ ಸುವರ್ಣ, ಹರೀಶ್‌ ಮಟ್ಟು, ಉದಯ ಬಂಗೇರ, ಸಂತೋಷ್‌ ಎಸ್‌. ಮಟ್ಟು, ಯಶ್‌ವಂತ್‌ ಮತ್ತಿತರರು ಆಗ್ರಹಿಸಿದ್ದಾರೆ.

ಸರಕಾರದ ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ದರವನ್ನು ಜಿಲ್ಲಾಧಿಕಾರಿ ಅವರು ನಿಗದಿಪಡಿಸಿದ್ದರೂ ಇದೀಗ ಕಟಾವಿಗೆ ಬರುತ್ತಿರುವ ಹೊರ ಜಿಲ್ಲೆ, ಹೊರ ರಾಜ್ಯಗಳ ಯಂತ್ರಗಳು ದುಬಾರಿ ದರ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದು, ಹೆಚ್ಚುವರಿ ಕಟಾವು ಯಂತ್ರಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ಒದಗಿಸುವಂತೆ ವಿನಂತಿಸಿದ್ದಾರೆ.

ಇದನ್ನೂ ಓದಿ:“ಕೋವಿಡ್ 2ನೇ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಿ’ : ರಾಜ್ಯಕ್ಕೆ ಕೇಂದ್ರ ಸರ್ಕಾರ ಸೂಚನೆ

ನಿಗದಿಗಿಂತ ಹೆಚ್ಚಿನ ದರ ಕೇಳುತ್ತಿದ್ದಾರೆ…
ಕಟಾವು ಯಂತ್ರಕ್ಕೆ ಗಂಟೆಗೆ 1,800 ರೂ. ಎಂದು ಘೋಷಣೆ ಮಾಡಿದ್ದರೂ, ಇಲ್ಲಿ ಇದೀಗ ಬಂದ ಕಟಾವು ಯಂತ್ರವು ಗಂಟೆಗೆ 2,500 ರೂ. ದರವನ್ನು ಕೇಳುತ್ತಿದ್ದಾರೆ. ಈಗ ಯಾವ ರೀತಿಯಲ್ಲಿ ಬೇಸಾಯ ಮಾಡುವುದು ಎಂದು ಚಿಂತೆಗೀಡಾಗಿದ್ದೇನೆ. ಡಿಸಿ ಅವರ ಆದೇಶ ಕೇಳುವವರೇ ಇಲ್ಲವಾಗಿದೆ. ರೈತರ ಬಗ್ಗೆ ಕಾಳಜಿಯೇ ಇಲ್ಲ.
-ಉದಯ ವಿ. ಬಂಗೇರ, ಕೃಷಿಕರು, ಮಟ್ಟು

Advertisement

ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು
2-3 ಎಕರೆ ಭತ್ತದ ಬೇಸಾಯ ನಡೆಸುತ್ತಿದ್ದೇನೆ. ಆದರೂ ಸಮಸ್ಯೆ ತಪ್ಪುತ್ತಿಲ್ಲ. ಜಿಲ್ಲಾಧಿಕಾರಿಯ ಕಟಾವು ಯಂತ್ರದ ಬಾಡಿಗೆ ದರ ನಿಗದಿಯು ಕೇವಲ ಆದೇಶಕ್ಕೆ ಸೀಮಿತವಾಗಿರದೆ ಹೆಚ್ಚುವರಿಯಾಗಿ ಕಟಾವು ಯಂತ್ರಗಳನ್ನು ಒದಗಿಸಿ ರೈತರಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬುದು ನಮ್ಮ ಮನವಿ.
– ಸಂತೋಷ್‌ ಮಟ್ಟು, ಕೃಷಿಕರು, ಮಟ್ಟು

ಖಾಸಗಿ ಕಟಾವು ಯಂತ್ರಗಳಿಗೆ ಅನ್ವಯಿಸಲ್ಲ
ಕಾಪು ತಾಲೂಕಿನಲ್ಲಿ ಕೃಷಿ ಕೇಂದ್ರದ ರೈತರಿಗೆ ಸೇವೆಯನ್ನು ನೀಡಲು ಸಿ.ಎಚ್‌.ಎಸ್‌ .ಮೂಲಕ ಒಂದು ಕಟಾವು ಯಂತ್ರ ಇದೆ. ಜಿಲ್ಲಾಧಿಕಾರಿ ಅವರು ಕಟಾವು ಯಂತ್ರದ ಬಾಡಿಗೆ ದರವನ್ನು 1,800 ರೂ. ಎಂದು ನಿಗದಿಪಡಿಸಿದ್ದಾರೆ. ಅದನ್ನು ಬುಕ್ಕಿಂಗ್‌ ಮಾಡಿದಲ್ಲಿ ಸೀನಿಯಾರಿಟಿ ಮೇಲೆ ಸೇವೆಯನ್ನು ಕೊಡಲಾಗುತ್ತದೆ. ರೈತರು ಖಾಸಗಿಯಾಗಿ ಬ್ರೋಕರ್‌ ಮೂಲಕ ತರಿಸುವ ಕಟಾವು ಯಂತ್ರದ ಬಾಡಿಗೆ ದರ ಹೆಚ್ಚು ಪಡೆದುಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಖಾಸಗಿ ಕಟಾವು ಯಂತ್ರಗಳಿಗೆ ದರ ಕಡಿಮೆ ಮಾಡುವಂತೆ ಹೇಳುವಂತಿಲ್ಲ.
-ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು ತಾಲೂಕು ಕೃಷಿ ಕೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next