Advertisement

ಬೆಳೆ ಪರಿಹಾರಕ್ಕೆ ರೈತಸಂಘ ಆಗ್ರಹ

02:54 PM May 17, 2019 | pallavi |

ಬಂಗಾರಪೇಟೆ: ತಾಲೂಕು ಸತತ ಬರಗಾಲಕ್ಕೆ ತುತ್ತಾದರೂ ಲೋಕ ಸಭಾ ಚುನಾವಣೆ ನೆಪದಲ್ಲಿ ಯಾವುದೇ ಬೆಳೆ ಪರಿಹಾರ ರೈತರಿಗೆ ತಲುಪಿಲ್ಲ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್‌ ಆಗ್ರಹಿಸಿದರು.

Advertisement

ಪಟ್ಟಣದ ತಾಲೂಕು ಕಚೇರಿಯಲ್ಲಿ ರೈತ ಸಂಘದಿಂದ ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ಪರ್‌ರಿಗೆ ಮನವಿ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಆಲಿಕಲ್ಲು ಮತ್ತು ಬಿರುಗಾಳಿಗೆ ನಾಶವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ಅಧಿಕಾರಿಗಳ ತಂಡ ರಚನೆ ಮಾಡಿ ಪ್ರತಿ ಎಕರೆಗೆ 2 ಲಕ್ಷ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಬರಗಾಲದಿಂದ ಕೊಳವೆ ಬಾವಿಗಳು ಕೈಕೊಟ್ಟು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್‌ ಮೂಲಕ ಸಾವಿರಾರು ರೂ.,ಖರ್ಚು ಮಾಡಿ ಬೆಳೆಗಳಿಗೆ ನೀರು ಹಾಯಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಸುರಿದ ಆಲಿಕಲ್ಲು ಮಳೆ, ಬಿರುಗಾಳಿ ಮಳೆ ತೋಟಗಳನ್ನು ನಾಶಪಡಿಸಿದೆ ಎಂದರು.

ಈಗಾಗಲೇ ಬಿಸಿಲಿನ ತಾಪಕ್ಕೆ ಟೊಮೆಟೋ, ಕ್ಯಾಪ್ಸಿಕಾಂ ಮತ್ತಿತರ ವಾಣಿಜ್ಯ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಕೂಡಲೇ ಅಧಿಕಾರಿಗಳು ವಾಣಿಜ್ಯ ಬೆಳೆಗಳ ನಷ್ಟದ ಬಗ್ಗೆ ಪರಿಶೀಲಿಸಲು ವಿಶೇಷವಾದ ತಂಡ ರಚಿಸಬೇಕು. ಜಿಲ್ಲಾಧಿಕಾರಿಗಳಿಗೆ ಬೆಳೆ ನಷ್ಟದ ವರದಿ ಸಲ್ಲಿಸಿ ಪ್ರತಿ ಎಕರೆಗೆ 2 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ತಹಶೀಲ್ದಾರ್‌ ಕೆ.ಬಿ.ಚಂದ್ರಮೌಳೇಶ್ವರ್‌, ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ನಾಶವಾಗಿರುವ ಬೆಳೆ ನಷ್ಟ ಪರೀಶೀಲನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳೊಡನೆ ಸಭೆ ಕರೆಯಲಾಗುತ್ತದೆ. ರೈತರಿಗೆ ಪರಿಹಾರ ನೀಡುವ ಜೊತೆಗೆ ಹೆಚ್ಚಿನ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆಂದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕು ಮುಖಂಡ ಉದಯ್‌ ಕುಮಾರ್‌, ಮರಗಲ್ ಜಯಪ್ಪ, ಹರೀಶ್‌, ನವೀನ್‌, ಮುನಿಯಪ್ಪ, ಟಿಎಸ್‌ಎಸ್‌ ಅಜಂ ಶರೀಫ್, ಇಸ್ಮಾಯಿಲ್, ಮುಬೀನ್‌ಪಾಷಾ, ಮಂಜುನಾಥ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next