Advertisement

ಸಮರ್ಪಕ ವಿದ್ಯುತ್‌ ಪೂರೈಕೆಗೆ ರೈತರ ಆಗ್ರಹ

10:53 AM May 26, 2019 | Team Udayavani |

ಬೈಲಹೊಂಗಲ: ವಿದ್ಯುತ್‌ ತೊಂದರೆ ನಿವಾರಿಸಿ ಎಂದು ಮನವಿ ಮಾಡಲು ಶಾಸಕ ಮಹಾಂತೇಶ ಕೌಜಲಗಿ ನಿವಾಸಕ್ಕೆ ಬಂದ ವಕ್ಕುಂದ ಗ್ರಾಮದ ರೈತರ ಸಮಸ್ಯೆಗೆ ಶಾಸಕರು ಸ್ಪಂದಿಸದೇ ಮಾತುಕತೆ ಮೊಟಕುಗೊಳಿಸಿ ಅರ್ಧಕ್ಕೆ ಎದ್ದು ಹೋದರೆಂದು ರೈತರು ಆರೋಪಿಸಿದ್ದಾರೆ.

Advertisement

ಶಾಸಕರ ನಡೆಗೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳನ್ನು ಇಲ್ಲಿಯೇ ಕರೆಸಿ ಈ ಕುರಿತು ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸಿ ಎಂದು ಮನವಿ ನೀಡಲು ಬಂದರೆೆ ಇಲ್ಲಿಂದ ಹೊರ ಹೋಗಿ ಎನ್ನುವುದು ಯಾವ ನ್ಯಾಯ ಎಂದು ರೈತರು ಶಾಸಕರನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ರೈತರು ಶಾಸಕರ ಮನೆಯಿಂದ ಹೊರ ಬಂದು ಶಾಸಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂತರ ಶಾಸಕರು ಕೂಡಲೇ ತಮ್ಮ ನಿವಾಸಕ್ಕೆ ಅಧಿಕಾರಿಗಳನ್ನು ಕರೆಸಿ ಕೆಲಕಾಲ ಚರ್ಚೆ ನಡೆಸಿದ್ದಾರೆ. ಗ್ರಾಮದ ರೈತರು, ನೇಕಾರರು, ಪಟ್ಟಣದ ಜನರಿಗೆ ಕುಡಿಯುವ ನೀರು ಸರಬರಾಜಿಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ವಿದ್ಯುತ್‌ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ.

ಈ ಮುಂಚೆ ಶಾಸಕರೊಂದಿಗೆ ಮಾತನಾಡಿದ ರೈತರು, ನಾವು ಯಾರಿಗೂ ಲಂಚ ಕೊಟ್ಟಿಲ್ಲ, ಕೊಡುವುದಿಲ್ಲ. ಕೆಪಿಟಿಸಿಎಲ್ ಅಧಿಕಾರಿಗಳಿಗೆ ಲಂಚ ಕೊಟ್ಟರೆ ಮಾತ್ರ ಸಮರ್ಪಕ ವಿದ್ಯುತ್‌ ಕೊಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ರೈತರಿಗೆ ತೀವ್ರ ತೊಂದರೆ ಆಗಲಿದೆ. ನೀವು ರೈತರನ್ನು ಸತಾಯಿಸುತ್ತಿರುವ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುವಂತೆ ನೋಡಬೇಕೆಂದು ಮನವಿ ಮಾಡಿದರು.

ಪದೇ, ಪದೇ ಒಂದೇ ವಿಷಯ ಕುರಿತು ಚರ್ಚೆ ಮಾಡಬೇಡಿ. ಸಮಸ್ಯೆ ಏನಿದೆ ಅದನ್ನು ಬಗೆ ಹರಿಸಿಕೊಳ್ಳಿ ಎಂದಿದ್ದಾರೆ. ಹೊರ ಹೋಗಿ ಬೇಕಾದ್ದು ಮಾತನಾಡಿ, ಇಲ್ಲಿ ಕುಳಿತು ಮಾತನಾಡಬೇಡಿ. ಇನ್ನೊಬ್ಬರ ಮೇಲೆ ಆರೋಪ ಮಾಡುವಾಗ ನನ್ನ ಮನೆಯಲ್ಲಿ ಕುಳಿತು ಮಾತನಾಡುವುದು ಬೇಡ ಎಂದಿದ್ದಾರೆ.

Advertisement

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರೈತರು, ಗ್ರಾಮದ ರೈತರ ಮೇಲೆ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯ ವಿರುದ್ಧ ಪ್ರತಿಭಟಿಸಿ ಗ್ರಾಮಕ್ಕೇ ಶಾಸಕರು ಹಾಗೂ ಅಧಿಕಾರಿಗಳನ್ನು ಕರೆಯಿಸಬೇಕಿತ್ತು. ನಾವು ಆ ರೀತಿ ಮಾಡಲಿಲ್ಲ. ಸ್ಥಳೀಯ ಶಾಸಕರು ನಮ್ಮ ಮನವಿಗೆ ಸ್ಪಂದಿಸಿ ವಿದ್ಯುತ್‌ ಕೊಡಿಸಿಕೊಡುತ್ತಾರೆಂದು ನಂಬಿದ್ದೆವು. ಆದರೆ ಮನೆಗೆ ಬಂದ ರೈತರಿಗೆ ಶಾಸಕರು ಅಪಮಾನ ಮಾಡಿದರು.

ಚುನಾವಣೆ ಸಂದರ್ಭದಲ್ಲಿ ಮತ ಕೇಳಿ ಆರಿಸಿ ಬಂದ ಮೇಲೆ ಈಗ ರೈತರನ್ನು ಮನೆಗೆ ಸೇರಿಸಿಕೊಳ್ಳುತ್ತಿಲ್ಲ. ಇದು ದುರ್ನಡತೆ. ಶಾಸಕರು, ಅಧಿಕಾರಿಗಳು ಒಂದಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆಂದು ಕಟುವಾಗಿ ಟೀಕಿಸಿದರು.

ರಾಮನಗೌಡ ಪಾಟೀಲ, ಕಾಶಪ್ಪ ಭದ್ರಶೆಟ್ಟಿ, ಅಶೋಕ ಭದ್ರಶೆಟ್ಟಿ, ಎಂ.ಎಫ್‌. ತಡಸಲ, ಯು.ಬಿ.ಅಂಗಡಿ, ಆನಂದ ಪಂತಿ, ಎ.ಎಸ್‌. ಹೊರಳಿ, ಮಂಜುನಾಥ ಉರಬಿನ್‌, ಮಲ್ಲಿಕಾರ್ಜುನ ಅಂಬರಗಟ್ಟಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next