ಕಲಬುರಗಿ: 2015-16ನೇ ಸಾಲಿನಲ್ಲಿ ಕೃಷಿ ವಿಮೆ ಕಂತು ಕಟ್ಟಿದ ರೈತರಿಗೆ ವಿಮೆ ಮಂಜೂರಾಗಿಲ್ಲ. ಅಲ್ಲದೆ, ಸರಕಾರಕ್ಕೆ ವರದಿ ನೀಡುವಾಗ ಆಗಿರುವ ಲೋಪ ಸರಿಪಡಿಸಿ ಕೂಡಲೇ ರೈತರಿಗೆ ವಿಮೆ ಹಣ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಕೃಷಿ ಇಲಾಖೆ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘ ಧರಣಿ ನಡೆಸಿತು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ, ವಿಮೆ ಕಟ್ಟಿರುವ ರೈತರಿಗೆ ವಿಮೆ ಹಣ ಬಂದಿಲ್ಲ. ಬೆಳೆ ನಾಶವಾಗಿರುವ ಕುರಿತು ಸರಕಾರಕ್ಕೆ ಸಲ್ಲಿಕೆ ಆಗಿದ್ದರೂ ಇನ್ನೂ ಪರಿಹಾರ ಬಂದಿಲ್ಲ. ಜಿಲ್ಲೆಯಲ್ಲಿ ಸುಮಾರು 13,500 ಜನರಿಗೆ ಬೆಳೆ ವಿಮೆ ಸಿಕ್ಕಿಲ್ಲ. ವಿಮೆ ಮಂಜೂರಾತಿಗಾಗಿ ರೈತರು, ಬ್ಯಾಂಕ್, ಕೃಷಿ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿಗೆ ಓಡಾಡಿ ಸುಸ್ತಾಗುತ್ತಿದ್ದಾರೆ.
ತುಂಬಾ ದಿನಗಳಿಂದ ವಿಮೆ ಹಣ ಬಾಕಿ ಇದೆ. ಆದ್ದರಿಂದ ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ರಾಜ್ಯದ ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಕಾರ್ಯದರ್ಶಿಗಳಿಗೆ ಆಗ್ರಹಿಸಿದರು. ಕೇಂದ್ರ ಸರಕಾರ ಬೆಳೆ ವಿಮೆ ಮಂಜೂರಾತಿ ನಿಯಮಾವಳಿ ಬದಲಾವಣೆ ಮಾಡುವಂತೆ ಆಗ್ರಹಿಸಿದರು.
ಕೃಷಿ ವಿಮೆ ಮಂಜೂರಾತಿಗಾಗಿ ಐದು ವರ್ಷಗಳ ಬೆಳೆ ಇಳುವರಿ ಆಧಾರದಲ್ಲಿ ವರದಿ ಮಾಡುವುದು ತೀರಾ ಅವೈಜ್ಞಾನಿಕವಾಗಿದೆ. ಯಾವ ವರ್ಷದ ಬೆಳೆ ನಷ್ಟವಾಗಿದೆ. ಇದೆಲ್ಲವನ್ನು ಕೈ ಬಿಡಬೇಕು. ಎಲ್‌ಐಸಿ ಮಾದರಿಯಲ್ಲಿ ಬೆಳೆ ವಿಮೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ಶರಣಬಸ್ಪ ಮಮಶೆಟ್ಟಿ, ಖಜಾಂಚಿ ಶಾಂತಪ್ಪ ಪಾಟೀಲ, ಕಾರ್ಯದರ್ಶಿ ಅಶೋಕ ಮಾಗೆರಿ, ಸುಭಾಷ ಜೇವರ್ಗಿ, ಪಾಂಡುರಂಗ ಮಾವಿನಕರ್, ಮಲ್ಲಣ್ಣಗೌಡ ಬನ್ನೂರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.