Advertisement

ರೈತರ ಸಾಲ ಮನ್ನಾ ಹಣದ ದುರುಪಯೋಗ ಆರೋಪ

09:09 PM Jul 15, 2019 | Lakshmi GovindaRaj |

ಹಾಸನ: ರೈತರ ಕೃಷಿ ಸಾಲ ಮನ್ನಾ ಆದ ನಂತರ ರೈತರಿಗೆ ಹೊಸ ಸಾಲ ನೀಡುವ ಮೊತ್ತವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್‌ ಆರೋಪಿಸಿದರು.

Advertisement

ಹೊಸ ತಂಡ ರಚನೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ 197 ಕೃಷಿ ಪತ್ತಿನ ಸಹಕಾರ ಸಂಘಗಳಲ್ಲೂ ಸಾಲ ಮನ್ನಾದ ಮೊತ್ತ ಪಾವತಿ ಅಥವಾ ಹೊಸ ಸಾಲದ ವಿತರಣೆಯ ಬಗ್ಗೆ ತನಿಖೆ ನಡೆಸಲಾಗುವುದುದು. ಈ ಸಂಬಂಧ ಶೀಘ್ರದಲ್ಲಿಯೇ ಸಮಿತಿ ಅಥವಾ ತಂಡವನ್ನು ರಚನೆ ಮಾಡಲಾಗುವುದು ಎಂದರು.

502 ಕೋಟಿ ರೂ. ಸಾಲ ಮನ್ನಾ: ಹಾಸನ ಜಿಲ್ಲೆಯಲ್ಲಿ ಸಹಕಾರ ಸಂಸ್ಥೆಗಳ ಮೂಲಕ ರೈತರು ಪಡೆದಿದ್ದ ಕೃಷಿ ಸಾಲದಲ್ಲಿ ಒಂದು ಲಕ್ಷ ರೂ.ವರೆಗಿನ ಮೊತ್ತವನ್ನು ಮನ್ನಾ ಮಾಡಿದ್ದು, ಅದರಂತೆ ಹಾಸನ ಜಿಲ್ಲೆಯ ಸಹಕಾರ ಕೇಂದ್ರ ಬ್ಯಾಂಕ್‌ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಿದ್ದ ಕೃಷಿ ಸಾಲದಲ್ಲಿ 1,19,814 ರೈತರ 502 ಕೋಟಿ ರೂ. ಸಾಲ ಮನ್ನಾ ಆಗಿದೆ.

ಆ ಪೈಕಿ ಇದುವರೆಗೂ 90,470 ರೈತರ ಸಾಲ ಮನ್ನಾದ 375 ಕೋಟಿ ರೂ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ಬಂದಿದ್ದು, ಇನ್ನೂ 136 ಕೋಟಿ ರೂ. ಬರಬೇಕಾಗಿದೆ. ಇನ್ನೂ 5,600 ಅರ್ಹ ಫ‌ಲಾನುಭವಿಗಳ ಸಾಲ ಮನ್ನಾ ಆದೇಶ ಬರಬೇಕಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಸಾಲ ಮನ್ನಾದ ಮೊತ್ತ ಅರ್ಹ ರೈತರು ಪಡೆದುಕೊಳ್ಳಲು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಎಟಿಎಂ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ವಿವರ ನೀಡಿದರು.

ಸಂಚಾರಿ ಎಟಿಎಂ ಸೌಲಭ್ಯ: ಸಾಲ ಮನ್ನಾ ಮೊತ್ತವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯನಿರ್ವಹಣಾಧಿಕಾರಿಗಳು ( ಕಾರ್ಯದರ್ಶಿ) ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕ್ಷೇತ್ರಾಧಿಕಾರಿಗಳು ಪರಿವೀಕ್ಷಣೆ ನಡೆಸಲು ಸೂಚಿಸಿದ್ದು, ಉಳಿತಾಯ ಖಾತೆ ತೆರೆದು ಎಟಿಎಂ ಕಾರ್ಡ್‌ಗಳ ಮೂಲಕವೇ ಸಾಲ ಮನ್ನಾ ಮತ್ತು ಹೊಸ ಸಾಲದ ಮೊತ್ತವನ್ನು ಪಾವತಿಸಲು ಸೂಚನೆ ನೀಡಲಾಗಿದೆ.

Advertisement

ಎಟಿಎಂ ಇಲ್ಲದ ಶಾಖೆಗಳಲ್ಲಿ ಸಂಚಾರಿ ಎಟಿಎಂ ವಾಹನ ಬಳಸಿ ಸಾಲದ ಮೊತ್ತ ವಿತರಿಸಲಾಗಿದೆ ಎಂದರು. ಜಿಲ್ಲೆಯ ಎಲ್ಲ ಪ್ರಾಥಮಿಕ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ರೀತಿನ ಪಾಸ್‌ ಪುಸ್ತಕ ವಿತರಣೆ ಮಾಡಲು ನಿರ್ಧರಿಸಿದ್ದು, ಸಾಲ ಮನ್ನಾದ ಫ‌ಲಾನುಭವಿಗಳ ಪಟ್ಟಿಯನ್ನು ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಸರ್ಕಾರಿ ಕಟ್ಟಡಗಳ ಬಳಿ ಪ್ರಕಟಿಸಲಾಗುವುದು.

ಸಹಕಾರಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರನ್ನು ಸಾಲ ಮನ್ನಾದ ಮೇಲ್ವಿಚಾರಣೆ ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು. ಬ್ಯಾಂಕಿನ ಆಡಳಿತ ಮಂಡಳಿ ಉಪಾಧ್ಯಕ್ಷ ಎಚ್‌.ಸಿ.ಗಿರೀಶ್‌, ನಿರ್ದೇಶಕರುಗಳಾದ ಪುಟ್ಟಸ್ವಾಮಿಗೌಡ, ಹೊನ್ನವಳ್ಳಿ ಸತೀಶ್‌, ಜಯರಾಂ, ಲೋಕೇಶ್‌, ವ್ಯವಸ್ಥಾಪಕ ನಿರ್ದೇಶಕ ದಯಾನಂದ್‌ ಅವರೂ ಉಪಸ್ಥಿತತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next