ಉಡುಪಿ: ಇಂದಿನ ಹಲವು ವಿವಿಧ ಕಾಯಿಲೆಗಳಿಗೆ ನಾವು ಸೇವಿಸುವ ಆಹಾರದಲ್ಲಿ ಬಳಕೆಯಾಗುತ್ತಿರುವ ಕೀಟನಾಶಕಗಳೇ ಮೂಲ ಕಾರಣ. ಜಮೀನು ಎಷ್ಟೇ ಇರಲಿ ವಿಷಮುಕ್ತ ಆಹಾರಕ್ಕಾಗಿ ಕೆಲವು ತರಕಾರಿ ಬೆಳೆಗಳನ್ನಾದರೂ ನಾವು ನಮ್ಮ ಜಮೀನಿನಲ್ಲಿ ಬೆಳೆಯಬೇಕು. ಎಲ್ಲವನ್ನೂ ಮಾರುಕಟ್ಟೆಯಿಂದ ಖರೀದಿಸುವ ಕ್ರಮ ನಿಲ್ಲಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಹೇಳಿದರು.
ಅವರು ಉಡುಪಿ ಜಿಲ್ಲಾ ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿ ಮತ್ತು ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರು ಪೆರಂಪಳ್ಳಿ ಶ್ರೀ ಬೊಬ್ಬರ್ಯ ಕಟ್ಟೆ ವಠಾರದಲ್ಲಿ ಆಯೋಜಿಸಿದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರಂಪಳ್ಳಿಯ ಹಿರಿಯ ಕೃಷಿಕರಾದ ಯೆವುಲಿನ್ ಮಸ್ಕರೇನಸ್ ಉದ್ಘಾಟಿಸಿದರು.
ಹೈನುಗಾರಿಕೆ ಕುರಿತು ಜಿಲ್ಲಾ ಕೃಷಿಕ ಸಂಘದ ಪ್ರ. ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್, ತೆಂಗು ಕೃಷಿ ಕುರಿತು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾಹಿತಿ ನೀಡಿದರು. ಕೃಷಿಕ ಸಂಘ ಪೆರಂಪಳ್ಳಿ ವಲಯ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪೆರಂಪಳ್ಳಿಯ ಹಿರಿಯ ಕೃಷಿಕ ಅಂತಪ್ಪ ಪೂಜಾರಿ, ಪೆರಂಪಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸುಮಂಗಲಾ ಮಂಡೆಚ್ಚ, ಹೆಲೆನ್ ಫಿಂಟೋ, ವಿದ್ಯಾ ಭಟ್, ರಾಫಾಯಿಲ್ ಡಿ’ಸೋಜಾ, ರಾಜೇಶ್ ಪೆರಂಪಳ್ಳಿ, ಶಂಕರ ಕೋಟ್ಯಾನ್, ಫೀಟರ್ ಡಿ’ಸೋಜಾ, ಬೆನೆಡಿಕ್ಟ್ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ರೈತ ದಿನಾಚರಣೆ ಅಂಗವಾಗಿ ಪೆರಂಪಳ್ಳಿ ವಲಯದ ಹಿರಿಯ ಹಾಗೂ ಪ್ರಗತಿಪರ ಕೃಷಿಕರಾದ ಸೋಮಪ್ಪ ಅಮೀನ್, ಅಲೆಕ್ಸ್ ಮಸ್ಕರೇನಸ್, ವೆಂಕಪ್ಪ ಮಾಸ್ಟರ್, ಬ್ಯಾಪ್ಟಿಸ್ಟ್ ಮಸ್ಕರೇನ್ಹಸ್, ಶೀಂಬ್ರ ಭಾಗಿ ಕೋಟ್ಯಾನ್, ಕಮಲಾ ಮೂಲ್ಯ, ಪದ್ಮ ಪೂಜಾರಿ, ಅಮ್ಮಣ್ಣಿ ಪೂಜಾರಿ, ಸಗ್ರಿ ಅಣ್ಣು ನಾಯ್ಕ, ಜಾನು ನಾಯ್ಕ ಮತ್ತು ಜಾರ್ಜ್ ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು. ರವೀಂದ್ರ ಪೂಜಾರಿ ಶೀಂಬ್ರ ವಂದಿಸಿದರು. ಆಲ್ವೀನ್ ಡಿ’ಸೋಜಾ ಪೆರಂಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ರೈತ ವರ್ಗದ ಸಾಧನೆ ಗುರುತಿಸಿ
ಸಮಾಜದಲ್ಲಿ ಸಣ್ಣ ಪುಟ್ಟ ಸಾಧನೆ ಮಾಡಿದವರನ್ನು ಸಮ್ಮಾನಿಸಲಾಗುತ್ತದೆ, ಆದರೆ ಮಳೆ ಬಿಸಿಲೆನ್ನದೆ ಹೊಲ-ಗದ್ದೆಗಳಲ್ಲಿ ತಮ್ಮ ಜೀವನವಿಡೀ ದುಡಿದು ಬೃಹತ್ ಸಾಧನೆ ಮಾಡಿದರೂ ರೈತ ವರ್ಗವನ್ನು ಗುರುತಿಸುವ ಕೆಲಸವಾಗುತ್ತಿಲ್ಲ.
– ಸುಬ್ರಹ್ಮಣ್ಯ ಶ್ರೀಯಾನ್