Advertisement

ರೈತರ ಬೆಳೆ ನುಂಗಿದ ಕಲ್ಲು ಗಣಿಗಾರಿಕೆ ದೂಳು!

11:54 AM Jul 05, 2019 | Suhan S |

ಎಚ್.ಡಿ.ಕೋಟೆ: ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರ ಸಂಬಂಧಿಕರು ತಾಲೂಕಿನ ದೊಡ್ಡಕೆರೆಯೂರು ಕಾವಲ್ ಗ್ರಾಮದ ಸಮೀಪದ ಜಮೀನಿನಲ್ಲಿ ಭಾರೀ ಪ್ರಮಾಣದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಇಲ್ಲಿ ಹರಡುವ ಕಲ್ಲು ಮಣ್ಣಿನ ದೂಳಿನಿಂದ ಬೆಳೆಗಳು ಹಾಳಾಗುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜೊತೆಗೆ ಕಲ್ಲು ಗಣಿಗಾರಿಕೆಯಲ್ಲಿ ಕಲ್ಲು ಒಡೆಯಲು ಬಳಸುವ ಸ್ಫೋಟಕದಿಂದ ಕೆಲ ರೈತರ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಭಾರೀ ಪ್ರಮಾಣದ ವಾಹನಗಳ ಸಂಚಾರದಿಂದ ಗ್ರಾಮದ ರಸ್ತೆಗಳು ಕೂಡ ಹಾಳಾಗಿವೆ. ಈ ಅವ್ಯವಸ್ಥೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ಕಿಡಿ ಕಾರಿದ್ದಾರೆ.

ಸಚಿವರ ಸಂಬಂಧಿಕರಿಂದ ಗಣಿಗಾರಿಕೆ: ರಾಜ್ಯದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂದು ಹೆಸರಾಗಿ ರುವ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಕೆರೆಯೂರು ಗ್ರಾಮಕ್ಕೆ ಹೊಂದಿಕೊಂಡಿರುವ ದೊಡ್ಡಕೆರೆಯೂರು ಕಾವಲ್ ಸಮೀಪ ಮೈಸೂರು ಮೂಲದ ಕಾಂಗ್ರೆಸ್‌ ಪಕ್ಷದ ಪ್ರಭಾವಿ ಮುಖಂಡ ಕೃಷ್ಣ ಮಾದೇಗೌಡ ಅವರು ಸುಮಾರು 25 ಎಕರೆ ಜಮೀನನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರ ಸಂಬಂಧಿಕರು (ಅಕ್ಕನ ಮಕ್ಕಳು) ಒಂದೂವರೆ ವರ್ಷದಿಂದ ಗುತ್ತಿಗೆ ಪಡೆದು ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ. ಇಲ್ಲಿನ ಸಾರ್ವಜನಿಕರು ಹಾಗೂ ರೈತರ ಪ್ರಬಲ ವಿರೋಧದ ನಡುವೆಯೂ ಭಾರೀ ಯಂತ್ರ ಮತ್ತು ವಾಹನಗಳನ್ನು ಬಳಸಿ ಗಣಿಗಾರಿಕೆ ನಡೆಸುತ್ತಿದ್ದರೂ ಯಾರೊಬ್ಬರೂ ಇದನ್ನು ತಡೆಯಲು ಕ್ರಮ ಕೈಗೊಂಡಿಲ್ಲ.

ಲಕ್ಷಾಂತರ ರೂ.ನಷ್ಟ: ಅಕ್ಕಪಕ್ಕದ ಪೈಲ್ವಾನ್‌ ಕಾಲೋನಿ, ಭೋಗೇಶ್ವರ ಕಾಲೋನಿ, ಕೊಡಸಿಗೆ, ಚಿಕ್ಕಕೆರೆಯೂರು, ದೊಡ್ಡಕೆರೆಯೂರು, ಹೈರಿಗೆ, ಮಾದಾಪುರ ಇನ್ನಿತರ ಗ್ರಾಮಗಳ ರೈತರು ಕಲ್ಲು ಕೋರೆಯಿಂದ ಬರುವ ಕಲ್ಲು ಮಣ್ಣಿನ ದೂಳು ಹಾಗೂ ಕಲ್ಲುಗಳಿಂದ ನಿತ್ಯ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಬೆಳೆದ ಬೆಳೆಗಳನ್ನು ಕಲ್ಲು ಗಣಿಗಾರಿಕೆಯ ದೂಳು ನುಂಗಿ ಹಾಕಿ ನಾಶ ಮಾಡುತ್ತಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸುತ್ತಿದೆ.

ಬೆಳೆಗಳು ಸಂಪೂರ್ಣ ನಾಶ: ಕೋರೆಯ ಸಮೀಪ ರೈತ ಸ್ವಾಮಿಗೌಡ ಕಷ್ಟಪಟ್ಟು 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ನೇಂದ್ರ ಮತ್ತು ಏಲಕ್ಕಿ ಬಾಳೆ ಬೆಳೆ ಕಲ್ಲು ಕೋರೆಯ ದೂಳು ಮತ್ತು ಮಣ್ಣು ಆವರಿಸಿಕೊಂಡು ಸಂಪೂರ್ಣವಾಗಿ ನಾಶವಾಗಿದೆ. ಇದರಿಂದ ಕಂಗಾಲಾಗಿರುವ ರೈತ ಸ್ವಾಮಿಗೌಡ ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ಗ್ರಾಮದ ಯಜಮಾನರು, ಮುಖಂಡರ ಬಳಿ ತಮ್ಮ ಅಳಲನ್ನು ತೋಡಿಕೊಂಡರೂ ನ್ಯಾಯ ದೊರೆತ್ತಿಲ್ಲ.

Advertisement

ಮನೆಗಳಿಗೆ ಹಾನಿ: ಮತ್ತೋರ್ವ ರೈತ ದಾಸೇಗೌಡರ ಜಮೀನಿನಲ್ಲಿ ಕೋಳಿಫಾರಂ ನಿರ್ಮಾಣ ಮಾಡಿ ಸಾಗಣಿಕೆ ಮಾಡಿ ಜೀವನ ಸಾಗಿಸುತ್ತಿದ್ದರೂ ಇಲ್ಲಿನ ಗಣಿಗಾರಿಕೆಯ ಶಬ್ದದಿಂದ ಕೋಳಿ ಫಾರಂನ ಗೋಡೆಗಳು ಬಿರುಕು ಬಿಟ್ಟಿವೆ. ಇದಲ್ಲದೇ ಅನೇಕ ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಮನೆಗಳು ನೀರಾವರಿ ಪಂಪ್‌ ಸೆಟ್ ದನದ ಕೊಟ್ಟಿಗೆ, ಸಾರ್ವಜನಿಕರ ಮುಖ್ಯರಸ್ತೆ, ಜಮೀನು ಬೆಳೆದಿರುವ ಅನೇಕ ತರದ ಬೆಳೆಗಳು ಹಾನಿಯಾಗಿವೆ. ಇದರಿಂದ ಇಲ್ಲಿನ ರೈತರಿಗೆ ದಿಕ್ಕುತೋಚದಂತಾಗಿದೆ.

ಕ್ರಮಕ್ಕೆ ಹಿಂದೇಟು: ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಿ ಎಂದು ತಾಲೂಕು ಆಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ. ಸಚಿವ ಪುಟ್ಟರಾಜು ಅವರ ಸಂಬಂಧಿಕರು ಇಲ್ಲಿ ಗಣಿಗಾರಿಕೆ ನಡೆಸುತ್ತಿರುವುದರಿಂದ ಕ್ರಮ ಕೈಗೊಳ್ಳಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ರೈತರಿಗೆ ಬೆನ್ನೆಲುಬು ಆಗಬೇಕಾಗಿದ್ದ ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳೇ ಮೌನ ವಹಿಸಿರುವುದರಿಂದ ಅನೇಕ ರೈತರು ಬೆಳೆ ಕಳೆದುಕೊಂಡು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ.

ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿ ಗಳು ಇಲ್ಲಿನ ಅವ್ಯವಸ್ಥೆಯನ್ನು ಪರಿಶೀಲಿಸಿ ಗಣಿಗಾರಿಕೆ ಯನ್ನು ತಡೆದು ಇಲ್ಲಿ ನೆಮ್ಮದಿ ವಾತಾವರಣ ಕಲ್ಪಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next