ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರಾಗಿ ಬೆಳೆ ಅತ್ಯಧಿಕ ಬೆಳೆಯಾಗಿದ್ದು, ಕೊಯ್ಲಿಗೆ ಬಂದಿರುವ ರಾಗಿ ಕಟಾವು ಕಾರ್ಯ ನಡೆಯುತ್ತಿದೆ. ಆದರೆ, ಮ್ಯಾಂಡಸ್ ಚಂಡಮಾರುತದ ಮಳೆ ಯಿಂದಾಗಿ ಈಗಾಗಲೇ ಕಟಾವು ಮಾಡಿರುವ ರಾಗಿ ಬೆಳೆಯೂ ಸಹ ಮಳೆಗೆ ತುತ್ತಾಗಿ ರಾಗಿ ಮೊಳಕೆ ಒಡೆಯುವ ಆತಂಕ ರೈತರಲ್ಲಿ ಮನೆ ಮಾಡಿದೆ. 90 ದಿನಗಳಲ್ಲಿ ಬೆಳೆ ಕೈಗೆ ಬರುವ ರಾಗಿ ತಳಿಗಳನ್ನು ಬಿತ್ತನೆ ಮಾಡಿರುವ ಬೆಳೆಗಾರರ ಮೊಗದಲ್ಲಿ ಆತಂಕ ಮನೆ ಮಾಡಿದ್ದು, ಸತತ ಮಳೆಯಾದಲ್ಲಿ ಬೆಳೆ ಗತಿಯೇನು ಎಂಬ ಚಿಂತೆ ಶುರುವಾಗಿದೆ.
ಸಾಧಾರಣವಾಗಿ ಜಿಲ್ಲೆಯ ರೈತರು 100 ದಿನಗಳಲ್ಲಿ ಬೆಳೆ ಕೈಗೆ ಸಿಗುವ ಎಂಎಲ್ 65 ತಳಿ, 105ರಿಂದ 115 ದಿನ ಕಾಲ ಅಂದರೆ ಮೂರೂವರೇ ತಿಂಗಳು ಬೆಳೆಯಿರುವ ಜಿಪಿಯು 28 ತಳಿಗಳನ್ನು ಬೆಳೆಯಲಾಗುತ್ತಿದೆ.
ಬೆಳೆಗಾರರಲ್ಲಿ ಆತಂಕ: ಕಳೆದ ವರ್ಷ ಮಳೆಯಿಂದಾಗಿ 90 ದಿನಗಳಲ್ಲಿ ಕೈಗೆ ಬರುವ ಬೆಳೆ ನಷ್ಟವಾಗಿದ್ದರಿಂದ ಈ ಬಾರಿ ಎಚ್ಚೆತ್ತ ರೈತರು 120 ರಿಂದ 125 ದಿನಗಳ ಕಾಲ ಅಂದರೆ ಜಡಿ ಮಳೆ ಬಂದರೂ ಬೆಳೆಗೆ ಯಾವುದೇ ತೊಂದರೆಯಾಗದಂತೆ ಬೆಳೆ ಕೈಗೆ ಸಿಗುವ ತಳಿ ರಾಗಿಯನ್ನು ಬಿತ್ತನೆ ಮಾಡಿದ್ದಾರೆ. ಜಿಲ್ಲಾದ್ಯಂತ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ರಾಗಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದೇ ರೀತಿ ಸತತವಾಗಿ ಮಳೆ ಸುರಿದಲ್ಲಿ ಕೊಯ್ಲು ಮಾಡಿ ಹೊಲದಲ್ಲಿರುವ ರಾಗಿ ತೆನೆಗಳಿಗೆ ತೇವಾಂಶ ಹೆಚ್ಚಾಗಿ ಮೊಳಕೆ ಬಂದು ನಷ್ಟವಾಗುವ ಸಾಧ್ಯತೆ ಹೆಚ್ಚಿದೆ.
ಜಾನುವಾರುಗಳಿಗೆ ಮೇವಿಲ್ಲ: ಮಳೆ ಹಾವಳಿಯಿಂದಾಗಿ ಜಾನುವಾರುಗಳಿಗೆ ಮೇವು ಒದಗಿಸಲು ತೀವ್ರ ತೊಂದರೆಯಾಗಿದೆ. ರೈತರು ಇದ್ದಬಿದ್ದ ಒಣ ಮೇವು ಹಾಕಿದರು. ಕಳೆದ ಎರಡು ಮೂರು ತಿಂಗಳು ಸುರಿದ ಮಳೆಯಿಂದ ಹೂವು ಬೆಳೆಗಾರರು ಇನ್ನೂ ಸುಧಾರಿಸಿಕೊಂಡಿಲ್ಲ. ಇನ್ನೇನು ಮಳೆಯಿಲ್ಲ ಎಂದು ರೋಜ್ ಗಿಡಗಳನ್ನು ಕತ್ತರಿಸಿ ಬೆಳೆ ನಿರ್ವಹಿಸುತ್ತಿರುವ ರೈತರಿಗೆ ಮತ್ತೆ ಒಕ್ಕರಿಸಿದ ಈ ಚಂಡಮಾರುತ ಸೇವಂತಿಗೆ, ದ್ರಾಕ್ಷಿ ಬೆಳೆಗಾರರು ರೋಗ ನಿಯಂತ್ರಿಸುವ ಹರಸಾಹಸ ಪಡುವಂತಾಗಿದೆ. ಮನೆಗಳ ಹತ್ತಿರ ರಾಗಿಯನ್ನು ಒಣಗಲು ಹಾಕಲಾಗಿತ್ತು. ಆದರೆ, ರಾಗಿ ತೆನೆಗಳಿಗೆ ಟಾರ್ಪಲ್‌ಗಳನ್ನು ಕಟ್ಟಿ ಸುರಕ್ಷತೆ ಮಾಡುತ್ತಿದ್ದಾರೆ.
ಮಲಗಿಸಿಟ್ಟ ರಾಗಿಗೆ ನಷ್ಟ: ಬಹುತೇಕ ಕಡೆ ರಾಗಿ ಬೆಳೆ ಕಟಾವು ಮಾಡಲು ಯಂತ್ರಗಳ ಅಬ್ಬರ ಜೋರಾಗಿದೆ. ಚಂತಮಾರುತದ ಎಫೆಕ್ಟ್ ಗೆ ಒಳಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕಡಿಮೆ ಅವಧಿಯಲ್ಲಿ ಬೆಳೆಯುವ ರಾಗಿ ತಳಿಗಳು ಕೊಯ್ಲಿಗೆ ಬಂದು ಸಾಕಷ್ಟು ಮಂದಿ ಬೆಳೆಗಾರರು ಕೊಯ್ಲು ಮಾಡಿ ಹೊಲಗಳಲ್ಲಿಯೇ ಮಲಗಿಸಿಟ್ಟಿದ್ದಾರೆ. ಇಂಥ ಹೊಲಗಳಲ್ಲಿ ಸತತ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಮಲಗಿಸಿಟ್ಟ ಜಾಗದಲ್ಲಿಯೇ ರಾಗಿ ಮೊಳಕೆ ಬರುವ ಸಾಧ್ಯತೆ ಇರುತ್ತದೆ. ಸಂರಕ್ಷಣೆ ಮಾಡಲು ಸಾಧ್ಯವಾಗದೆ ಬೆಳೆಗಾರರು ಆತಂಕದಲ್ಲಿದ್ದಾರೆ.
ರಾಗಿ ಕೊಯ್ಲು ಮಾಡಿ ಭೂಯಿ ಮೇಲೆ ಮಲಗಿಸಿಟ್ಟ ರಾಗಿಗೆ ತೇವಾಂಶ ಹೆಚ್ಚಾಗಿ ಮೊಳಕೆ ಬರುವ ಸಾಧ್ಯತೆಯಿದೆ. ರಾಗಿ ಕೊಯ್ಲು ಕಟಾವು ಹಂತದಲ್ಲಿದ್ದು, ನಿರಂತರ ಮಳೆ ಬರುತ್ತಿರುವುದರಿಂದ ರೈತರಿಗೆ ಸಂಕಷ್ಟ ತರುವಂತಾಗಿದೆ. ವಾತಾವರಣ ಇದೇ ರೀತಿ ಮುಂದುವರಿದರೆ ರಾಗಿ ಬೆಳೆ ಮೇಲೆ ಪರಿಣಾಮ ಬೀಳಲಿದೆ. ಮುಂದಿನ ದಿನಗಳಲ್ಲಿ ನಷ್ಟದ ಪ್ರಮಾಣವನ್ನು ಅಂದಾಜಿಸಲಾಗುವುದು.
– ಲಲಿತಾ ರೆಡ್ಡಿ, ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ