ಕುಷ್ಟಗಿ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸಕಾಲದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದತ್ತ ಮುಖ ಮಾಡದಿರುವುದರಿಂದ ರೈತ ಸಂಪರ್ಕ ಕೇಂದ್ರ ಬಿಕೋ ಎನ್ನುತ್ತಿವೆ.
ಮುಂಗಾರು ಹಂಗಾಮಿಗೆ ಸದ್ಯ ಬಿತ್ತನೆ ದಿನಗಳಾಗಿದ್ದು, ಈ ಸಂದರ್ಭದಲ್ಲಿ ಮಳೆಯಾಗದೇ ಇರುವುದು ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಸುಳಿವಿಲ್ಲ. ಸದ್ಯ ತಾಲೂಕಿನ ಕುಷ್ಟಗಿ, ಹನುಮಸಾಗರ, ಹನುಮನಾಳ ಹಾಗೂ ತಾವರಗೇರಾ ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು, ತೊಗರಿ ಬೀಜ ದಾಸ್ತಾನು ಮಾಡಲಾಗಿದೆ. ಕುಷ್ಟಗಿಯಲ್ಲಿ ಹೆಸರು 10.2 ಕ್ವಿಂಟಲ್, ತೊಗರಿ 24 ಕ್ವಿಂಟಲ್, ತಾವರಗೇರಾದಲ್ಲಿ ಹೆಸರು 11.26 ಕ್ವಿಂಟಲ್, ತೊಗರಿ 24 ಕ್ವಿಂಟಲ್, ಹನುಮಸಾಗರದಲ್ಲಿ ಹೆಸರು 6 ಕ್ವಿಂಟಲ್, ತೊಗರಿ 9 ಕ್ವಿಂಟಲ್, ಹನುಮನಾಳ ಹೆಸರು 10 ಕ್ವಿಂಟಲ್, ತೊಗರಿ 5 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ. ಹೆಸರು ಬಿತ್ತನೆ ಕಾಲಾವಧಿ ಮುಗಿದಿರುವ ಹಿನ್ನೆಲೆಯಲ್ಲಿ ಯಾರು ಬೀಜ ಕೇಳುತ್ತಿಲ್ಲ. ಇದೀಗ ತೊಗರಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಬಾಲಪ್ಪ ಜಲಗೇರಿ ತಿಳಿಸಿದರು.
ಪ್ರಸಕ್ತ ಮುಂಗಾರು ಹಂಗಾಮಿಗೆ 65,875 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, 34,875 ಹೆಕ್ಟೇರ್ ಏಕದಳ, 17,875 ದ್ವಿದಳ, 15,550 ಎಣ್ಣೆಕಾಳು ಹಾಗೂ 1,200 ವಾಣಿಜ್ಯ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ.
ಮಳೆ ಕೊರತೆ: ಮುಂಗಾರು ಪೂರ್ವ (ಜನವರಿಯಿಂದ ಮೇ ವರೆಗೂ) ವಾಡಿಕೆ ಮಳೆ 86 ಮಿ.ಮೀ. ಕಳೆದ ವರ್ಷ ಮುಂಗಾರು ಪೂರ್ವ 88 ಮಿ.ಮೀ. ಮಳೆಯಾಗಿತ್ತು. ಮುಂಗಾರಿನಲ್ಲಿ 380 ಮೀ.ಮೀ ವಾಡಿಕೆ ಮಳೆ, ಆದರೆ 252 ಮಿ.ಮೀ. ಮಳೆಯಾಗಿದ್ದು, ಶೇ. 34ರಷ್ಟು ಕೊರತೆಯಾಗಿತ್ತು. ಅಕ್ಟೊಬರ್-ಡಿಸೆಂಬರ್ ಹಿಂಗಾರು ಹಂಗಾಮಿನಲ್ಲಿ 142 ಮಿ.ಮೀ. ವಾಡಿಕೆ ಮಳೆಯಲ್ಲಿ ಶೇ. 61ರಷ್ಟು ಕೊರತೆಯಾಗಿದ್ದು, ಒಟ್ಟಾರೆ ವಾಡಿಕೆ ಮಳೆ 571 ಮಿ.ಮೀ. ವಾಸ್ತವಿಕ 416 ಮೀ.ಮೀ. ಮಳೆಯಾಗಿದ್ದು, ಶೇ. 37 ಕೊರತೆಯಾಗಿತ್ತು. ಅದೇ ಮಳೆ ಕೊರತೆಯ ಪರಸ್ಥಿತಿ ಮುಂದುವರಿದಿದೆ. ಮೇ ತಿಂಗಳಿನಲ್ಲಿ ಕುಷ್ಟಗಿಯಲ್ಲಿ 31 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 11 ಮಿ.ಮೀ. ಮಳೆಯಾಗಿದೆ. ಹನುಮನಾಳ 31 ಮಿ.ಮೀ. ನಷ್ಟಿದ್ದ ವಾಡಿಕೆ ಮಳೆ, ಆದರೆ 12 ಮಿ.ಮೀ ಮಳೆಯಗಿದೆ. ಹನುಮಸಾಗರದಲ್ಲಿ 33 ಮಿ.ಮೀ. ನಷ್ಟಿದ್ದ ವಾಡಿಕೆ ಮಳೆ, 12.7 ಮಿ.ಮೀ. ಮಳೆಯಾಗಿದೆ. ತಾವರಗೇರಾದಲ್ಲಿ 31 ಮಿ.ಮೀ. ಆಗಬೇಕಿದ್ದ ಮಳೆ 8.2 ರಷ್ಟು ಸುರಿದಿದೆ.
ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಮಳೆ ಕೊರತೆ ಮುಂದುವರಿದಿದ್ದು, ಮುಂಗಾರು ವಿಳಂಬದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರೈತರು ಆತಂಕಗೊಂಡಿದ್ದಾರೆ. ಇಷ್ಟೊತ್ತಿಗೆ ಬಿತ್ತನೆ ಕಾರ್ಯ ಚಟುವಟಿಕೆಯಲ್ಲಿ ತಲ್ಲೀನರಾಗಬೇಕಾದ ರೈತರು, ಬಿತ್ತನೆ ಜಮೀನು ಹದಮಾಡಿಕೊಂಡಿದ್ದು ಮಳೆಯ ನಿರೀಕ್ಷೆಯಲ್ಲಿದ್ದಾರೆ.