Advertisement

ಮೆಣಸಿನ ಬೆಳೆಯತ್ತ ರೈತರ ಚಿತ್ತ

12:38 PM Sep 29, 2018 | |

ಬಳ್ಳಾರಿ: ಭತ್ತ, ಕಬ್ಬು, ಮೆಕ್ಕೆಜೋಳ ಮತ್ತು ವಾಣಿಜ್ಯ ಬೆಳೆ ಹತ್ತಿಗಷ್ಟೇ ಸೀಮಿತವಾಗಿದ್ದ ಗಣಿನಾಡು ಬಳ್ಳಾರಿ ಜಿಲ್ಲೆಯ ರೈತರು, ಕಳೆದ ಕೆಲ ವರ್ಷಗಳಿಂದ ಮೆಣಸಿನಕಾಯಿ ಬೆಳೆಯತ್ತ ಚಿತ್ತ ಹರಿಸಿದ್ದಾರೆ. 2015-2016ರಲ್ಲಿ ಮೆಣಸಿನಕಾಯಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದೇ ರೈತರು ಇದರತ್ತ ಆಕರ್ಷಿತರಾಗಲು ಕಾರಣ ಎನ್ನಲಾಗುತ್ತಿದೆ. ಪ್ರಸಕ್ತ ವರ್ಷ ತೋಟಗಾರಿಕೆ ಇಲಾಖೆಯ ನಿಗದಿತ ಗುರಿಗಿಂತ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿದೆ.

Advertisement

ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿನಿಂದಲೂ ವಾಣಿಜ್ಯ ಬೆಳೆ ಹತ್ತಿ, ಮೆಕ್ಕೆಜೋಳ ಹಾಗೂ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಮಪ್ರಮಾಣದ ಮಳೆ ಇಲ್ಲದೆ, ತುಂಗಭದ್ರಾ ಜಲಾಶಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗದೆ ರೈತರು ಸಂಕಷ್ಟ ಎದುರಿಸಿದ್ದಾರೆ. ಆದರೆ, ಪ್ರಸಕ್ತ ವರ್ಷ ಉತ್ತಮ ಮಳೆಯಾಗಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ರೈತರಿಗೆ ನೀರಿನ ಸಮಸ್ಯೆ ಎದುರಾಗಿಲ್ಲ. ಅಲ್ಲದೆ ಮೆಣಸು ಬೆಳೆಯಲು ಭತ್ತಕ್ಕೆ ಬೇಕಾಗುವಷ್ಟು ನೀರಿನ ಅಗತ್ಯವಿಲ್ಲ. ಇದರೊಂದಿಗೆ ಎಪಿಎಂಸಿ ಆವರಣದಲ್ಲಿ ಮೆಣಸಿನಕಾಯಿಗೆ ಮಾರುಕಟ್ಟೆ ವ್ಯವಸ್ಥೆಯೂ ಮಾಡಲಾಗಿದೆ. ಇದರಿಂದ ಬೆಳೆಗಾರರನ್ನು ಕಾಡುತ್ತಿದ್ದ ಎಲ್ಲ ಸಮಸ್ಯೆಗಳು ಈ ವರ್ಷ ಇತ್ಯರ್ಥವಾಗಿದೆ. ಹೀಗಾಗಿ ಜಿಲ್ಲೆಯ ಅತೀ ಹೆಚ್ಚು ರೈತರು ಮೆಣಸು ಬೆಳೆಯಲು ಮುಂದಾಗಿದ್ದಾರೆ.

ಗುರಿ ಮೀರಿ ನಾಟಿ: ಕಳೆದ 2016-17ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ 9938 ಹೆಕ್ಟೇರ್‌ ಗುರಿ ಹೊಂದಿದ್ದರೆ, ರೈತರು 32,271 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ನಾಟಿ ಮಾಡಿದ್ದರು. ಅದೇ ರೀತಿ 2017-18ರಲ್ಲಿ ಇಲಾಖೆ 32,443 ಹೆಕ್ಟೇರ್‌ ಗುರಿ ಹೊಂದಿದ್ದರೆ, ಮಳೆಯ ನೀರಿನ ಸಮಸ್ಯೆಯಿಂದಾಗಿ 19,167 ಹೆಕ್ಟೇರ್‌ ನಾಟಿ ಮಾಡಲಾಗಿತ್ತು. ಪ್ರಸಕ್ತ ವರ್ಷ 2018-19ರಲ್ಲಿ ಇಲಾಖೆ 33,017 ಹೆಕ್ಟೇರ್‌ ಗುರಿ ಹೊಂದಿದ್ದರೆ, 40 ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಮಾಡಲಾಗಿದೆ.

ತುಂಗಭದ್ರಾ ಜಲಾಶಯದ ಎಚ್‌ಎಲ್‌ಸಿ, ಎಲ್‌ಎಲ್‌ಸಿ ಕಾಲುವೆಗಳ ಮೂಲಕ ಹೊಸಪೇಟೆ, ಕಂಪ್ಲಿ, ಕುರುಗೋಡು, ಬಳ್ಳಾರಿ, ಸಿರುಗುಪ್ಪ ತಾಲೂಕುಗಳ ಜಮೀನುಗಳಿಗೆ ನೀರು ದೊರೆಯಲಿದೆ. ಇದರಲ್ಲಿ ಕಂಪ್ಲಿ, ಸಿರುಗುಪ್ಪ, ಕುರುಗೋಡು, ಬಳ್ಳಾರಿ ತಾಲೂಕಿನಲ್ಲಿ ವಾಣಿಜ್ಯಬೆಳೆ ಹತ್ತಿ, ಮೆಕ್ಕೆಜೋಳ ಬೆಳೆಗೆ ಅನುಕೂಲವಾದ ಭೂಮಿಯಿದೆ. ಆದರೂ, ಸಹ ರೈತರು ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ನಾಟಿ ಮಾಡಿದ್ದಾರೆ.

ಈ ಬಾರಿ ಜಲಾಶಯದಿಂದ ನಿಗದಿತ ಅವಧಿಗಿಂತ ಮುಂಚೆಯೇ ಕಾಲುವೆಗಳಿಗೆ ನೀರು ಹರಿಸಿದ್ದರೂ, ಮೆಣಸಿನಕಾಯಿ ಸಸಿಗಳು ಸಮಯಕ್ಕೆ ದೊರೆತಿಲ್ಲ. ಆದರೂ ಸಹ ತಡವಾಗಿ ಮೆಣಸಿನಕಾಯಿ ಬೆಳೆ ನಾಟಿ ಮಾಡಿರುವ ರೈತರು, ತೋಟಗಾರಿಕೆ ಇಲಾಖೆಯ ನಿಗದಿತ ಗುರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಮೆಣಸು ನಾಟಿ ಮಾಡಿದ್ದಾರೆ.

Advertisement

ಲಾಭದ ನಿರೀಕ್ಷೆಯಲ್ಲಿ ರೈತರು ಪ್ರಸ್ತುತ ದುಬಾರಿ ದಿನಗಳಲ್ಲಿ ಭತ್ತದ ಬೆಳೆಯಷ್ಟೇ ಮೆಣಸಿನಕಾಯಿ ಬೆಳೆಯ ಖರ್ಚು ಸಹ ಹೆಚ್ಚಾಗುತ್ತಿದ್ದರೂ, ರೈತರು ಮಾತ್ರ ಹಿಂದೆ ಸರಿಯುತ್ತಿಲ್ಲ. ಬಳ್ಳಾರಿ, ಕುರುಗೋಡು ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಗೆ ಅನುಕೂಲವಾದ ಭೂಮಿ ಇದ್ದು, ಇಲ್ಲಿ ಎಕರೆ ಮೆಣಸಿನಕಾಯಿ ಬೆಳೆಯಲು 25ರಿಂದ 35 ಸಾವಿರ ರೂ. ವರೆಗೆ ವೆಚ್ಚವಾಗುತ್ತಿದೆ. ಇನ್ನುಳಿದ ಜಮೀನುಗಳಲ್ಲಿ 15 ರಿಂದ 20 ಸಾವಿರ ರೂ. ವೆಚ್ಚವಾಗಲಿದೆ. ಅಲ್ಲದೇ, ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಕೆ.ಜಿ. 50 ರೂ. ಇದ್ದು, ಬೇಡಿಕೆ ಹೆಚ್ಚುತ್ತಿದೆ. ಇದರಿಂದ ರೈತರು ಲಕ್ಷಾಂತರ ರೂ. ಖರ್ಚು ಮಾಡಿ, ಮೆಣಸಿನಕಾಯಿ ಸಸಿ ಖರೀದಿಸಿ, 1 ಕೆಜಿ ಸಸಿಗಳಿಂದ ಅಂದಾಜು 7 ರಿಂದ 10 ಎಕರೆಗಳಲ್ಲಿ ನಾಟಿ ಮಾಡಿದ್ದು, ಇದಕ್ಕೆ ಕೃಷಿ ಕಾರ್ಮಿಕರು, ಗೊಬ್ಬರ ಸೇರಿ ಎಕರೆಗೆ ಅಂದಾಜು ಲಕ್ಷ ರೂ. ಖರ್ಚು ತಗುಲಲಿದೆ. ಬ್ಯಾಡಗಿ ಮೆಣಸಿನಕಾಯಿ ಒಮ್ಮೆ ಬೆಳೆದರೆ 20 ರಿಂದ 25 ಕ್ವಿಂಟಲ್‌ ಫಸಲು ರೈತರ ಕೈ ಸೇರುತ್ತದೆ.

ಪ್ರತಿ ಕ್ವಿಂಟಲ್‌ ಮೆಣಸಿನಕಾಯಿ ಸುಮಾರು 10 ಸಾವಿರ ರೂ. ಬೆಲೆ ಇದ್ದರೆ, ಎಕರೆಗೆ ಸುಮಾರು 1 ರಿಂದ 1.5 ಲಕ್ಷ ರೂ. ಲಾಭ ದೊರೆಯುವ ಸಾಧ್ಯತೆ ಇರುತ್ತದೆ ಎಂಬ ವಿಶ್ವಾಸ ರೈತರದ್ದಾಗಿದೆ.

ಪ್ರಸಕ್ತ ವರ್ಷ ಮೆಣಸಿನಕಾಯಿ ಬೆಳೆಯಲು ಅನುಕೂಲವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ.50ರಿಂದ ಶೇ.60 ರಷ್ಟು ಪ್ರದೇಶದಲ್ಲಿ ಮೆಣಸಿನಕಾಯಿ ನಾಟಿ ಮಾಡಲಾಗಿದೆ. ಸುಮಾರು 45 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುವ ಸಾಧ್ಯತೆಯಿದೆ. ಇಲಾಖೆಯಿಂದ ರೈತರಿಗೆ ಅಗತ್ಯವಾದ ಸಲಹೆ ಸೂಚನೆ ನೀಡಲಾಗುತ್ತಿದೆ. ಸಂಸ್ಥೆಯೊಂದರ ಸಹಯೋಗದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಪ್ರಯೋಗಾತ್ಮಕವಾಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಉತ್ತಮ ಫಸಲು ಕೈಸೇರಿದ ಬಳಿಕ ಮಾರುಕಟ್ಟೆ ಬೆಲೆಗಿಂತ 10 ರೂ. ಜಾಸ್ತಿ ಕೊಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
 ಚಿದಾನಂದಪ್ಪ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next