ವಿಜಯಪುರ: ಮುಖ್ಯಮಂತ್ರಿಯಾದ ಬಳಿಕ ಘೋಷಿಸಲ್ಪಟ್ಟ ರೈತರ ಮಕ್ಕಳಿಗೆ ಶಿಷ್ಯ ವೇತನ ನೀಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಸೆ.5ರಂದು ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಆಲಮಟ್ಟಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯದಲ್ಲಿ ಕೃಷ್ಣೆಗೆ ಗಂಗಾ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸದರಿ ಯೋಜನೆಯಿಂದ ರಾಜ್ಯದ ರೈತರ 18 ಲಕ್ಷ ಮಕ್ಕಳಿಗೆ ಇದರ ಲಾಭ ದೊರೆಯಲಿದ್ದು, ಸರ್ಕಾರಕ್ಕೆ 1 ಸಾವಿರ ಕೋಟಿ ಆರ್ಥಿಕ ಹೊರೆ ಬೀಳಲಿದೆ. ರೈತರ ಪಿಯುಸಿ ಯಿಂದ ಪಿಜಿ ವರೆಗೆ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಇದರ ಲಾಭ ದೊರೆಯಲಿದೆ ಎಂದರು.
ಕೃಷ್ಣೆಗೆ ಬಾಗಿನ ಅರ್ಪಿಸಿ ನಾಡಿನ ರೈತರನ್ನು ಸುಭಿಕ್ಷವಾಗಿ ಇಡುವಂತೆ ಭಕ್ತಿಯಿಂದ ಪ್ರಾರ್ಥಿಸಿದ್ದೇನೆ. ರೈತ ಸುಭಿಕ್ಷವಾಗಿದ್ದರೆ ನಾಡು ಸುಭಿಕ್ಷವಾಗಿರುತ್ತದೆ. ರೈತರಿಗೆ ಸಕಾಲಿಕ ಮಳೆ, ಬೆಳೆ ನೀಡಿ ರಾಜ್ಯವನ್ನು ಸಮೃದ್ಧಿಯಾಗಿ ಇಡುವಂತೆ ಪ್ರಾರ್ಥಿಸಿದ್ದೇನೆ ಎಂದರು.
ಇದನ್ನೂ ಓದಿ:ಕೃಷ್ಣಾ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗೆ ನೂರು ಕೋಟಿ ಬಿಡುಗಡೆ: ಬೊಮ್ಮಾಯಿ
ರಾಜ್ಯದಲ್ಲಿ ಕೋವಿಡ್ ನಿಗ್ರಹಕ್ಕಾಗಿ ಸೋಂಕಿತರು ಹೆಚ್ಚಾಗಿರುವ ಮಹಾರಾಷ್ಟ್ರ, ಕೇರಳ ರಾಜ್ಯಗಳ ಗಡಿಯಲ್ಲಿ ತೀವ್ರ ಪರಿಶೀಲನೆ ಹಾಗೂ ಕಟ್ಟೆಚ್ಚರ ವಹಿಸಲಾಗಿದೆ. ಈ ಕಾರಣಕ್ಕಾಗಿ ನಾನು ಈ ಎರಡೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದೇನೆ. ಮಹಾರಾಷ್ಟ್ರ ರಾಜ್ಯದ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದರು.
ಕೋವಿಡ್ ಮೂರನೆ ಅಲೆ ಎದುರಿಸಲು ಅವಳಿ ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಎರಡೂ ಜಿಲ್ಲೆಗಳಿಗೆ ಸದ್ಯ ನಿತ್ಯವೂ ನೀಡುತ್ತಿರುವ 15 ಸಾವಿರ ಲಸಿಕೆ ಪ್ರಮಾಣವನ್ನು 25 ಸಾವಿರಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.