ನವದೆಹಲಿ: ಭಾರತೀಯ ಜನತಾ ಪಕ್ಷದ ನೇತೃತ್ವದ ಹರ್ಯಾಣ ಸರ್ಕಾರ ಮತ್ತು ರೈತರ ನಡುವೆ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಜಟಾಪಟಿ ಕೊನೆಗೂ ಶನಿವಾರ(ಸೆಪ್ಟೆಂಬರ್ 11) ಸುಖಾಂತ್ಯ ಕಂಡಿದೆ.
ಇದನ್ನೂ ಓದಿ:ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಕಳೆದ ತಿಂಗಳು ಐಎಎಸ್ ಅಧಿಕಾರಿ ಆಯುಷ್ ಸಿನ್ನಾ, ರೈತರ ತಲೆಗಳನ್ನು ಒಡೆಯಿರಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಐಎಎಸ್ ಅಧಿಕಾರಿ ಸಿನ್ನಾ ಅವರನ್ನು ಅಮಾನತುಗೊಳಿಸುವಂತೆ ರೈತರು ಪಟ್ಟುಹಿಡಿದಿದ್ದರು.
ಇದೀಗ ರೈತರ ಪ್ರತಿಭಟನೆಗೆ ಮಣಿದ ಹರ್ಯಾಣ ಸರ್ಕಾರ, ಐಎಎಸ್ ಅಧಿಕಾರಿ ಸಿನ್ನಾ ಅವರನ್ನು ರಜೆ ಮೇಲೆ ಕಳುಹಿಸಿದ್ದು, ರೈತರು ಕೂಡಾ ಪ್ರತಿಭಟನೆಯನ್ನು ಕೊನೆಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಲ್ ಪ್ರದೇಶದಲ್ಲಿ ಕಳೆದ ವಾರ ದೊಡ್ಡ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ರೈತರು ಭಾರೀ ಸಂಖ್ಯೆಯಲ್ಲಿ ಜಮಾಯಿಸುವುದನ್ನು ನಿಷೇಧಿಸಲಾಗಿತ್ತು, ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಐಎಎಸ್ ಅಧಿಕಾರಿ ಸಿನ್ನಾ ಅವರನ್ನು ಅಮಾನತು ಮಾಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದರು.
ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ಹರ್ಯಾಣ ಸರ್ಕಾರ ಅಯುಷ್ ಸಿನ್ನಾ ಅವರನ್ನು ಹುದ್ದೆಯಿಂದ (ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್) ತೆಗೆದುಹಾಕಿತ್ತು. ಇದೀಗ ಸಿನ್ನಾ ಅವರನ್ನು ರಜೆ ಮೇಲೆ ತೆರಳುವಂತೆ ಸರ್ಕಾರ ಸೂಚನೆ ನೀಡಿದ್ದು, ಇದರೊಂದಿಗೆ ರೈತರು ಮತ್ತು ಸರ್ಕಾರದ ನಡುವೆ ನಡೆಯುತ್ತಿದ್ದ ಜಟಾಪಟಿ ಮುಕ್ತಾಯಗೊಂಡಂತಾಗಿದೆ.