Advertisement

ಕೊಳವೆಬಾವಿಗೆ ಬೈ, ಸಾಂಪ್ರದಾಯಿಕ ಕೆರೆ- ಬಾವಿಗಳೇ ಸೈ

09:34 AM May 11, 2019 | Team Udayavani |

ಈಶ್ವರಮಂಗಲ: ವಿಪರೀತ ಮುಂಗಾರು ಮಳೆ, ಕೈಕೊಟ್ಟ ಹಿಂಗಾರು ಮಳೆ ಇದರಿಂದ ರೈತವರ್ಗ ತತ್ತರಿಸಿ ಹೋಗಿದೆ. ಕರಾವಳಿಯ ಪ್ರಮುಖ ಆರ್ಥಿಕ ಬೆಳೆ ಅಡಿಕೆ ಅತೀ ವೃಷ್ಟಿ ಮತ್ತು ಅನಾವೃಷ್ಟಿಯಿಂದ ಆರ್ಥಿಕ ನಷ್ಟ ಉಂಟಾಗಿದ್ದು, ರೈತವರ್ಗ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಗರ ಪ್ರದೇಶಕ್ಕಿಂತ ಮಳೆಬಾರದಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಉಲ್ಬಣಿಸುವ ಲಕ್ಷಣಗಳು ಕಂಡು ಬರುತ್ತಿವೆ.

Advertisement

ಹೆಚ್ಚಿನ ಎಲ್ಲರೂ ಕೊಳವೆ ಬಾವಿಗೆ ಮೊರೆಹೋಗುತ್ತಿದ್ದಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಬತ್ತಿಹೋದ ಬಾವಿ, ಕೆರೆಗಳ ಹೂಳೆತ್ತಲು ಮೇ ತಿಂಗಳು ಅತ್ಯಂತ ಪ್ರಶಸ್ತ ವಾಗಿದೆ. ಈ ಸಮಯದಲ್ಲಿ ನೀರಿನ ಒರತೆ ಇದ್ದರೆ ಶಾಶ್ವತ ನೀರಿನ ಮೂಲ ಎಂದು ಹಿರಿಯರು ಹೇಳುತ್ತಾರೆ. ಕೇರಳ – ಕರ್ನಾಟಕ ಗಡಿ ಭಾಗದಲ್ಲಿರುವ ರೈತರು ತಮ್ಮ ಸ್ವಂತ ಖರ್ಚಲ್ಲಿ ಕೆರೆ, ಬಾವಿಗಳ ಹೂಳುತ್ತಿದ್ದು, ಇದರಿಂದ ನೀರಿನ ಜಲಮೂಲ ವೃದ್ಧಿ ಯಾದ ಉದಾಹರಣೆ ಗಳು ಹಲವು ಇದೆ.ಮಳೆಗಾಲದಲ್ಲಿ ಮಳೆಯ ನೀರು ಬಾವಿ,ಕೆರೆಗಳಲ್ಲಿ ಇಂಗಲು ಸಾಧ್ಯ ವಾಗುತ್ತದೆ.ಇದರಿಂದ ಬೇಸಗೆಯಲ್ಲಿ ನೀರು ಸಿಗುತ್ತವೆ. ಗಡಿಭಾಗದಲ್ಲಿ ಕೆರೆ ಯನ್ನು ಅಭಿವೃದ್ಧಿಪಡಿಸಲು ರೈತರು ತುದಿಗಾಲಲ್ಲಿ ನಿಂತಿದ್ದಾರೆ. ಕೆರೆ ಹೂಳುತ್ತೆಲು ಹಿಟಾಚಿಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಅವು ಸಮಯಕ್ಕೆ ಸರಿಯಾಗಿ ಲಭ್ಯವಾಗದೆ ರೈತರು ಪರಿತಪಿಸುತ್ತಿದ್ದಾರೆ.

ಕೆರೆ ಹೂಳೆತ್ತಲು ಅನುದಾನವಿಲ್ಲ!
ಕೆಲವು ವರ್ಷಗಳ ಹಿಂದೆ ಕೆರೆಯ ಹೂಳೆತ್ತಲು ಅವಕಾಶ ಇತ್ತು. ಕೆಲವು ತಾಂತ್ರಿಕ ಕಾರಣಗಳಿಂದ ಇದನ್ನು ನಿಲ್ಲಿಸಲಾಗಿದೆ. ಅದಕ್ಕೆ ನಿಜವಾದ ಕಾರಣವೇನು ಎಂಬುದು ಯಾವ ಅಧಿಕಾರಿಗಳಿಗೂ ಗೊತ್ತಿಲ್ಲ. ಹೂಳೆತ್ತಲು ಪಂಚಾಯತ್‌ನಿಂದ ಅವಕಾಶ ಸಿಕ್ಕಿದರೆ ಜಲಮೂಲವು ವೃದ್ಧಿಯಾಗಬಹುದು ಎಂದು ಕೃಷಿಕರು ಹೇಳುತ್ತಾರೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಕೃಷಿ ಹೊಂಡ, ಕಿಂಡಿ ಅಣೆಕಟ್ಟು, ತೆರೆದ ಬಾವಿ, ಕೆರೆ ನಿರ್ಮಾಣ, ಇಂಗು ಗುಂಡಿ ಇತ್ಯಾದಿಗಳ ಯೋಜನೆಗಳು ಇದ್ದರೂ ಫಲಾನುಭವಿಗಳ ಸಂಖ್ಯೆ ಕಡಿಮೆಯಾಗಿದೆ.

ಜಲಾನಯನ, ಕೃಷಿ ಇಲಾಖೆ ಸೇರಿ ಸಮಸ್ಯೆ
ಮೊದಲು ಕೆರೆಯ ಹೂಳೆತ್ತಲು, ತಡೆಗೋಡೆ ಕಟ್ಟಲು ಇಲಾಖೆಗಳಿಂದ ಅನುದಾನಗಳು ಸಿಗುತ್ತಿದ್ದವು. ಆದರೆ ಕೆಲವು ವರ್ಷಗಳಿಂದ ಅನುದಾನಗಳು ಇಲ್ಲದೇ ಇರುವುದರಿಂದ ರೈತರಲ್ಲಿ ನಿರಾಸಕ್ತಿ ಹೆಚ್ಚಲು ಕಾರಣವಾಗಿದೆ. ಕೆಲವು ವರ್ಷಗಳ ಹಿಂದೆ ಜಲಾನಯನ ಹಾಗೂ ಕೃಷಿ ಇಲಾಖೆಗಳನ್ನು ಮರ್ಜ್‌ (ಒಟ್ಟು ಸೇರಿಸು) ಮಾಡಿರುವುದರಿಂದ ಮತ್ತಷ್ಟು ಸಮಸ್ಯೆ ರೈತರನ್ನು ಕಾಡುತ್ತಿದೆ. ಸರಕಾರ ಗಳು ಕೃಷಿ ಚಟುವಟಿಕೆಗೆ ಹೆಚ್ಚು ಪ್ರೋತ್ಸಾಹ ನೀಡಿ, ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯಗಳು ಸಿಗುವಂತೆ ಮಾಡಲು ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರಯತ್ನಿಸಬೇಕಾಗಿದೆ.

ಉದ್ಯೋಗ ಖಾತರಿಯಲ್ಲಿ ಅವಕಾಶ
ಗ್ರಾಮೀಣ ಪ್ರದೇಶದಲ್ಲಿ ಬಾವಿಯನ್ನು ತೆರೆಯಲು, ಕೆರೆ ನಿರ್ಮಿಸಲು ಪಂಚಾಯತ್‌ನಿಂದ ಉದ್ಯೋಗ ಖಾತರಿಯಲ್ಲಿ ಅವಕಾಶ ಇದೆ. ಹೆಚ್ಚಿನ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ನೀರು ಇಂಗಿಸಲು ವಿವಿಧ ಯೋಜನೆಗಳ ಮೂಲಕ ಅವಕಾಶ ಇದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ.
– ಎಚ್.ಟಿ. ಸುನೀಲ್, ನೆಟ್ಟಣಿಗೆಮುಟ್ನೂರು ಗ್ರಾ.ಪಂ. ಪಿಡಿಒ

ಬೇಸಗೆಯಲ್ಲಿ ನೀರು
ಕೊಳವೆ ಬಾವಿಗಳಿಗೆ ಹಣವನ್ನು ವಿನಿಯೋಗಿಸಿದ್ದೇನೆ. ಕೊಳವೆ ಬಾವಿಯ ನೀರು ಶಾಶ್ವತವಲ್ಲ. ಕೆರೆ ಬಾವಿಗಳ ಹೂಳೆತ್ತುವ ಕೆಲಸ ಆಗಿದೆ. ಒಳ್ಳೆಯ ನೀರು ಇದೆ. ಹೂಳೆತ್ತಿರುವುದರಿಂದ ಬೇಸಗೆಯಲ್ಲಿ ನೀರು ಸಿಗುತ್ತದೆ. ಮಳೆಗಾಲದಲ್ಲಿ ನೀರು ಇಂಗುತ್ತದೆ. ಹೆಚ್ಚಿನ ಪ್ರಯೋಜನವಾಗಿದೆ. ಈ ಕೆರೆಯಿಂದ ಮನೆ ಬಳಕೆಗೆ ನೀರನ್ನು ಉಪಯೋಗಿಸಲಾಗುತ್ತಿದೆ.
– ಸುಬ್ರಹ್ಮಣ್ಯ ಭಟ್ ದೇವಸ್ಯ, ಕೃಷಿಕ
Advertisement

– ಮಾಧವ ನಾಯಕ್‌ ಕೆ.

Advertisement

Udayavani is now on Telegram. Click here to join our channel and stay updated with the latest news.

Next