Advertisement

ಸ್ವತಃ ರೈತರೇ ನಿರ್ಮಿಸಿದರು ನೀರಿನ ತೊಟ್ಟಿ

10:33 AM May 02, 2019 | Naveen |

ಶಹಾಪುರ: ಗ್ರಾಮವೊಂದರಲ್ಲಿ ರೈತಾಪಿ ಜನರು ಸ್ವತಃ ತಾವೇ ದೇಣಿಗೆ ಸಂಗ್ರಹಿಸಿ ಗ್ರಾಮದ ಜಾನುವಾರುಗಳಿಗೆ ಕುಡಿಯಲು ಸಾರ್ವಜನಿಕ ನೀರಿನ ತೊಟ್ಟಿ ನಿರ್ಮಾಣ ಮಾಡಿಕೊಳ್ಳುವ ಮೂಲಕ ಮಾದರಿ ರೈತರೆನಿಸಿದ್ದಾರೆ.

Advertisement

ಹೌದು, ಇದು ತಾಲೂಕಿನ ವಿರುಪಾಪುರ ಗ್ರಾಮದಲ್ಲಿ ರೈತರು ಸ್ವಂತ ಹಣ ಸಂಗ್ರಹಿಸಿ ದೊಡ್ಡ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಸಮೀಪದ ಕೊಳವೆ ಬಾವಿ ಮೂಲಕ ಅದಕ್ಕೆ ನಿತ್ಯ ನೀರು ತುಂಬುತ್ತಿದ್ದು, ಇಡಿ ಗ್ರಾಮದ ಜಾನುವಾರುಗಳು ಈ ತೊಟ್ಟಿಯಲ್ಲಿ ನೀರು ಕುಡಿಯುತ್ತಿವೆ.

ಬಿಸಿಲಿನ ತಾಪಕ್ಕೆ ಗ್ರಾಮದ ಹಲವಾರು ಕೊಳವೆ ಬಾವಿ ಸೇರಿದಂತೆ ತೆರೆದ ಬಾವಿ ಹಳ್ಳ ಕೊಳ್ಳ ಬತ್ತಿರುವುದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆ ದೋರಿದೆ. ಹೀಗಾಗಿ ಜನ ತಾವೇ ಖುದ್ದಾಗಿ ಈ ರೀತಿ ನೀರಿನ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ. ಅಂದಾಜು 25 ಸಾವಿರ ರೂ. ನೀರಿನ ತೊಟ್ಟಿ ನಿರ್ಮಾಣಕ್ಕೆ ವೆಚ್ಚ ತಗುಲಿದೆ ಎನ್ನುತ್ತಾರೆ ಗ್ರಾಮದ ಹಿರಿಯ ರೈತ ಬೈಲಪ್ಪ.

ತಾಲೂಕಿನ ಸಗರ ಗ್ರಾಪಂ ವ್ಯಾಪ್ತಿ ಬರುವ ಈ ವಿರುಪಾಪುರ ಕುಗ್ರಾಮವಾಗಿದ್ದು, ಅಂದಾಜು 500 ಜನ ಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಹೆಚ್ಚಾಗಿ ಗೊಲ್ಲ ಸಮುದಾಯದ ಜನರೇ ವಾಸ ಇದ್ದು, ಅವರ ಮುಖ್ಯ ಕಸಬು ಕೃಷಿ ಮತ್ತು ಕುರಿ ಸಾಕಾಣಿಕೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕುರಿ, ಎತ್ತು, ಆಕಳು ಸೇರಿದಂತೆ ಎಮ್ಮೆಗಳನ್ನು ಇಲ್ಲಿನ ಜನರು ಸಾಕಿದ್ದಾರೆ.

ಜಾನುವಾರುಗಳಿಗೆ ನೀರು ಕುಡಿಸಲು ಕಷ್ಟಕರವಾಗಿತ್ತು. ಪ್ರಸ್ತುತ ತೊಟ್ಟಿ ನಿರ್ಮಾಣದಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

Advertisement

ಕಳೆದ ತಿಂಗಳ ಹಿಂದೆ ಶಹಾಪುರ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಅವರು, ಬೇಸಿಗೆ ಬರಗಾಲದಿಂದ ನೀರಿನ ಅಭಾವ ಜಾಸ್ತಿ ಕಂಡು ಬಂದಿಲ್ಲ. ಜಾನುವಾರುಗಳಿಗಾಗಿ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನೀರಿನ ತೊಟ್ಟಿ ನಿರ್ಮಿಸಿ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದ್ದರು. ಆದರೆ ಬಹುತೇಕ ಯಾವ ಗ್ರಾಮದಲ್ಲೂ ಈ ಕಾರ್ಯ ನಡೆಯಲಿಲ್ಲ. ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ, ಯಾವ ಗ್ರಾಮದಿಂದ ಬೇಡಿಕೆ ಬಂದಿಲ್ಲ. ಎಲ್ಲಿ ಹೆಚ್ಚು ಜಾನುವಾರುಗಳನ್ನು ಹೊಂದಿದ್ದಾರೆ. ಅಂತಹ ಗ್ರಾಮದಿಂದ ಬೇಡಿಕೆ ಬಂದಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗುತ್ತದೆ ಎಂಬ ಹಾರಿಕೆ ಉತ್ತರಗಳನ್ನು ಕೊಡುತ್ತಿದ್ದಾರೆ ಎಂದು ರೈತ ಮುಖಂಡ ಯಲ್ಲಯ್ಯ ನಾಯಕ ಬೇಸರ ವ್ಯಕ್ತಪಡಿಸಿದ್ದಾರೆ.

ಯಾವುದೇ ಗ್ರಾಮದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ರೈತರು ಸರ್ಕಾರದ ನೆರವು ನಿರೀಕ್ಷಿಸದೆ ಶ್ರಮದಾನದ ಮೂಲಕ ನೀರಿನ ತೊಟ್ಟಿ ನಿರ್ಮಿಸಿಕೊಳ್ಳಬೇಕು ಎಂದು ಗ್ರಾಮದ ಸಾಯಬಣ್ಣ ಸಲಹೆ ನೀಡಿದ್ದಾರೆ.

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next