ಕೋಲಾರ: ಗುಣಮಟ್ಟದ ಬಿತ್ತನೆ ಆಲೂಗಡ್ಡೆ ಸಬ್ಸಿಡಿ ಧರದಲ್ಲಿ ವಿತರಣೆ ಮಾಡಿ ಕೆರೆ ಕೋಡಿ ಹಾಗೂ ಬೆಳೆ ನಷ್ಟ ಪರಿಶೀಲನೆಗೆ ವಿಶೇಷ ತಂಡ ರಚನೆ ಮಾಡುವಂತೆ ಆಗ್ರಹಿಸಿ ರೈತಸಂಘದಿಂದ ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಡಳಿತ ಭವನದವರೆಗೆ ಬೈಕ್ ರ‍್ಯಾಲಿ ನಡೆಸಿ, ಹೋರಾಟ ಮಾಡಿ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಶ್ರೀನಿವಾಸ್‌ರೆಡ್ಡಿರವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಬೆಳೆ ಪರಿಹಾರಕ್ಕೆ 200 ಕೋಟಿ ರೂ. ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಜಾಣನಿದ್ರೆಯಲ್ಲಿರುವ ಜಿಲ್ಲೆಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವಂತೆ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಜಿಲ್ಲಾಧಿಕಾರಿಗಳನ್ನು ಒತ್ತಾಯ ಮಾಡಿದರು.
ಮುಂಗಾರುಮಳೆ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿ ಬಡವರ ಸೂರು ರೈತರ ಬೆಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರೂ ಮತ ಪಡೆದ ಶಾಸಕರು ತಾಲೂಕಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ಕಾಮಗಾರಿಗಳ ಭೂಮಿಪೂಜೆಗೆ ಸೀಮಿತವಾಗಿದ್ದಾರೆಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಟೊಮೆಟೋ ಸುಗ್ಗಿಕಾಲ ಮುಗಿದ ನಂತರ ಪ್ರಾರಂಭವಾಗುವ ಆಲೂಗಡ್ಡೆ ಬಿತ್ತನೆ ಶುರುವಾಗಿದ್ದು, ತೋಟಗಾರಿಕೆ ಎಪಿಎಂಸಿ ಅಧಿಕಾರಿಗಳ ಹಿಡಿತವಿಲ್ಲದೆ ಖಾಸಗಿ ಅಂಗಡಿ ಮಾಲೀಕರು ತಮಗೆ ಇಷ್ಟ ಬಂದ ರೀತಿ ಮಾರಾಟ ಮಾಡುತ್ತಿದ್ದು, ಮಾನ್ಯರು ಬೆಲೆ ನಿಗಧಿಗೆ ವಿಶೇಷ ತಂಡ ರಚನೆ ಮಾಡಿ ಸಬ್ಸಿಡಿ ಧರದಲ್ಲಿ ಆಲೂಗಡ್ಡೆ ವಿತರಣೆ ಮಾಡುವ ಮುಖಾಂತರ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕೆಂದು ಒತ್ತಾಯಿಸಿದರು. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಮುಂಗಾರು ಮಳೆಗೆ ನಷ್ಟವಾಗಿರುವ ರೈತರ ಬೆಳೆ ನಷ್ಟ ಹಾಗೂ ಮನೆ ಕಳೆದುಕೊಂಡ ನಿರಾಶ್ರಿತರ ವರದಿ ನೀಡುವಂತೆ ಸೂಚನೆ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮಳೆ ಇದೇ ರೀತಿ ಮುಂದುವರಿದರೆ ಕೆರೆ ಕೋಡಿಗಳಿಗೆ ಅಪಾಯ ಹೆಚ್ಚಾಗುವ ಮುನ್ಸೂಚನೆ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಅಧಿಕಾರಿಗಳು, ರೈತರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಜೊತೆಗೆ ಸರ್ಕಾರದ ಮೇಲೆ ಒತ್ತಡ ಹಾಕಿ ಬೆಳೆ ನಷ್ಟ ಪರಿಹಾರಕ್ಕೆ 200 ಕೋಟಿ ಬಿಡುಗಡೆ ಮಾಡಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಶ್ರೀನಿವಾಸ್ ರೆಡ್ಡಿ ಅವರು, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ಬಂಗವಾದಿ ನಾಗರಾಜಗೌಡ, ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಶ್ರೀಕಾಂತ್, ವಿಭಾಗೀಯ ಕಾರ್ಯದರ್ಶಿ ಫಾರೂಖ್ ಪಾಷ, ಬಂಗಾರಿ ಮಂಜು, ತೆರ್ನಹಳ್ಳಿ ಆಂಜಿನಪ್ಪ, ವೆಂಕಟ್, ಕೋಟೆ ಶ್ರೀನಿವಾಸ್, ಸುನಿಲ್ ಕುಮಾರ್, ಗುರುಸ್ವಾಮಿ, ಮಾಸ್ತಿ ಯಲ್ಲಣ್ಣ, ರಾಜೇಶ್, ಭಾಸ್ಕರ್, ಸಂತೋಷ್, ಚಂದ್ರಪ್ಪ, ರಾಮಸಾಗರ ವೇಣು, ಸಂದೀಪ್‌ಗೌಡ, ಸಂದೀಪ್‌ರೆಡ್ಡಿ, ಕಿರಣ್, ಮರಗಲ್ ಮುನಿಯಪ್ಪ, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ನಾಗಯ್ಯ, ಮುನಿರಾಜು, ಮುನಿಕೃಷ್ಣ, ವಿಶ್ವ, ಕುವ್ವಣ್ಣ, ವೆಂಕಟೇಶಪ್ಪ, ಮುನೇಗೌಡ, ಶಿವಾರೆಡ್ಡಿ ಇತರರಿದ್ದರು.