ಬೀದರ: ರೈತರು ವಿವಿಧ ಯೋಜನೆಗಳ ಫಲಾನುಭವಿಗಳಾಗಲು ಒಂದೇ ದಾಖಲೆಯನ್ನು ಹಲವು ಸಲ ನೀಡಬೇಕಾಗುತ್ತಿತ್ತು. ಇದನ್ನು ತಪ್ಪಿಸಿ ವಿವಿಧ ಯೋಜನೆಗಳ ಸವಲತ್ತುಗಳನ್ನು ಒಂದೇ ಸಲ ದಾಖಲೆ ನೀಡಿ ಪಡೆಯಲು ಸಾಧ್ಯವಾಗುವಂತೆ ರೂಪಿಸಿರುವ “ಫ್ರೂಟ್ಸ್” ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಸಂಗಪ್ಪ ಪಾಟೀಲ ಹೇಳಿದರು.
ನಗರದ ಡಾ| ಗುರುಪಾದಪ್ಪ ನಾಗಮಾರಪಳ್ಳಿ ಸಹಾರ್ದ ಕೇಂದ್ರದಲ್ಲಿ ಬೆಳಗಾವಿಯ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಫ್ರೂಟ್ಸ್ ಅಂತರ್ಜಾಲ ಆಧಾರಿತ ವ್ಯವಸ್ಥೆಯಿಂದ ರೈತರಿಗೆ ಮನೆ ಬಾಗಿಲಿನಲ್ಲಿಯೇ ಯೋಜನೆ ಫಲಾನುಭವಿಯಾಗಲು ಸಾಧ್ಯವಾಗುತ್ತಿದ್ದು, ರೈತರು ಇಲ್ಲಿ ಹೆಸರು ನೋಂದಾಯಿಸಿಕೊಂಡು ಇದರ ಪ್ರಯೋಜನ ಪಡೆಯಬೇಕು ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ಸಾಲ ಪಡೆಯಲು ಬೇಕಾಗಿರುವ ಜಮೀನಿನ ಪಹಣಿ ಋಣಭಾರ ಏರಿಸಲು ಸಾಧ್ಯವಾಗಲಿದೆ. ಕಾವೇರಿ ಪೋರ್ಟಲ್‌ನ ತಂತ್ರಾಂಶ ವ್ಯವಸ್ಥೆಯಲ್ಲಿ ನೋಂದಣಿ ಮಾಡುವ ಅಧಿಕಾರವನ್ನು ಸಹಕಾರಿ ಸಂಘಗಳಿಗೆ ನೀಡಲಾಗಿದೆ. ಇದರಿಂದ ಸಂಘಗಳ ಮುಖ್ಯ ಕಾರ್ಯನಿರ್ವಾಹಕರ ಜವಾಬ್ದಾರಿ ಜಾಸ್ತಿಯಾಗಿದೆ. ಸಹಕಾರಿ ಸಂಘಗಳು ತನ್ನ ಗ್ರಾಹಕರಿಗೆ ಗಣಕೀಕೃತ ಸೇವೆಗಳನ್ನು ಒದಗಿಸುವುದರ ಮೂಲಕ ರೈತರಿಗೂ ಸಮರ್ಪಕ ಮಾಹಿತಿ ನೀಡಬೇಕು. ಜ.15ರಿಂದ ಎಲ್ಲಾ ಸಹಕಾರಿ ಸಂಘಗಳಿಗೆ ಈ ಅವಕಾಶ ದೊರಕುತ್ತಿದ್ದು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಜನ ಮಲ್ಲಿಕಾರ್ಜುನ ಮತ್ತು ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಚನಬಸಯ್ನಾ ಸ್ವಾಮಿ ಮಾತನಾಡಿದರು. ಸಹಾರ್ದ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಅನಿಲ ಪರಶನ್ನೆ ಅಪ್ಪಣ್ಣ ನಿರೂಪಿಸಿದರು. ಎಸ್.ಜಿ ಪಾಟೀಲ ವಂದಿಸಿದರು.